ಹೆಚ್ಚಾಗಿ ವೃದ್ಧರೇ ಹಳ್ಳಿಗಳಲ್ಲಿ ವಾಸ: ತೈಲೂರು ವೆಂಕಟಕೃಷ್ಣ

| Published : Mar 31 2024, 02:03 AM IST

ಸಾರಾಂಶ

ಹಳ್ಳಿಗಳ ಭಾವೈಕ್ಯತೆ, ನೈಜತೆಯನ್ನು ಜೀವಂತವಾಗಿಡುವ ಕೆಲಸ ನಮ್ಮದಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಗ್ರಾಮೀಣ ಅಭಿವೃದ್ಧಿ ಸಾಧ್ಯವಾಗಬೇಕು. ಹಳ್ಳಿಗಳಲ್ಲಿ ಉಪಕಸುಬುಗಳನ್ನು ನೋಡುತ್ತಿದ್ದೆವು. ಜೈವಿಕ ಗೊಬ್ಬರ ಬಳಸುತ್ತಿದ್ದನ್ನು ನಾವು ಕಂಡಿದ್ದೇವೆ. ದೇಶದ ಸಂಸ್ಕೃತಿ ಜೊತೆಗೆ ವಿದೇಶಿ ಪದ್ಧತಿಗಳನ್ನು ಕಾಣುತ್ತಿದ್ದೇವೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಭಾವೈಕ್ಯತೆಯಿರುವ ಹಳ್ಳಿಗಳಲ್ಲಿ ವೃದ್ಧರು ಮಾತ್ರ ಉಳಿದುಕೊಂಡಿದ್ದು, ಉಳಿದವರು ನಗರದ ಕಡೆ ಮುಖ ಮಾಡುತ್ತಿರುವುದು ಅಪಾಯಕಾರಿ ವಿಷಯ ಎಂದು ಸಾಹಿತಿ ತೈಲೂರು ವೆಂಕಟಕೃಷ್ಣ ಆತಂಕ ವ್ಯಕ್ತಪಡಿಸಿದರು.

ನಗರದ ಮಾಂಡವ್ಯ ಶಿಕ್ಷಣ ಸಂಸ್ಥೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಶ್ರೀಮತಿ ತತ್ತಮ್ಮ ಸ್ಮಾರಕ ದತ್ತಿ, ದಿ.ಕೆಂಪೇಗೌಡ ಸ್ಮಾರಕ ದತ್ತಿ ವಿಷಯ ಹಳ್ಳಿಗಳ ಪರಿಸರದ ಸುಧಾರಣೆ, ರಾಜಕೀಯ ಮತ್ತು ಸಾಹಿತ್ಯ ಕುರಿತ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಹಳ್ಳಿಗಳ ಭಾವೈಕ್ಯತೆ, ನೈಜತೆಯನ್ನು ಜೀವಂತವಾಗಿಡುವ ಕೆಲಸ ನಮ್ಮದಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಗ್ರಾಮೀಣ ಅಭಿವೃದ್ಧಿ ಸಾಧ್ಯವಾಗಬೇಕು. ಹಳ್ಳಿಗಳಲ್ಲಿ ಉಪಕಸುಬುಗಳನ್ನು ನೋಡುತ್ತಿದ್ದೆವು. ಜೈವಿಕ ಗೊಬ್ಬರ ಬಳಸುತ್ತಿದ್ದನ್ನು ನಾವು ಕಂಡಿದ್ದೇವೆ. ದೇಶದ ಸಂಸ್ಕೃತಿ ಜೊತೆಗೆ ವಿದೇಶಿ ಪದ್ಧತಿಗಳನ್ನು ಕಾಣುತ್ತಿದ್ದೇವೆ ಎಂದರು.

ಫಲವತ್ತಾದ ಭೂಮಿಯನ್ನು ನಾವು ನೋಡಲು ಸಾಧ್ಯವಾಗುತ್ತಿಲ್ಲ. ಸ್ವಾಭಾವಿಕ ಮತ್ತು ಜೈವಿಕ ಗೊಬ್ಬರಗಳನ್ನು ಬಳಸುವ ಮೂಲಕ ಆರೋಗ್ಯವಂತ ಜೀವನ ನಡೆಸುವುದು ಮುಖ್ಯವಾಗಬೇಕು. ಕಳೆದ 40 ವರ್ಷದ ಹಿಂದೆ ಯಾವುದೇ ರೋಗಗಳು ಅಷ್ಟಾಗಿ ಕಂಡು ಬರುತ್ತಿರಲಿಲ್ಲ, ಪ್ರಸ್ತುತ ಆಹಾರದ ಕ್ರಮ ಬದಲಾಗಿರುವುರಿಂದ ಹಲವಾರು ರೋಗಗಳು ಬಾಧಿಸುತ್ತಿವೆ ಎಂದು ವಿಷಾದಿಸಿದರು.

ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಬಿ.ಎಸ್.ಬೋರೇಗೌಡ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಬೆಳೆ ಒಕ್ಕಣೆ ಮಾಡಲು ತೊಪ್ಪೆ ಸಾರಿಸಿ ಕಣ ಮಾಡಿಕೊಳ್ಳುತ್ತಿದ್ದರು, ರಾಗಿ ಮತ್ತು ಭತ್ತವನ್ನು ಬೀಸುತ್ತಿದ್ದರು. ಅವುಗಳನ್ನು ಈ ಸನ್ನಿವೇಶಕ್ಕೆ ಹೋಲಿಕೆ ಮಾಡಿ ನೋಡಿದರೆ ಆಶ್ವರ್ಯ ಎನಿಸುತ್ತದೆ. ಈಗ ಜಾನುವಾರುಗಳೇ ಕಣ್ಮರೆಯಾಗುತ್ತಿದೆ, ಹೀಗಾದರೆ ಎಲ್ಲಿಂದ ಬರಬೇಕು ಕಣ, ಒಕ್ಕಣೆ ಎನ್ನುವುದು ಎಂದು ಬೇಸರ ವ್ಯಕ್ತಪಡಿಸಿದರು.

ಮಾಂಡವ್ಯ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಬಿ.ಶಿವಲಿಂಗಯ್ಯ ಮಾತನಾಡಿ, ಹಳ್ಳಿಗಳಲ್ಲಿ ದನ ಇದ್ದರೆ ಜನ ಇರುತ್ತಾರೆ ಎಂಬುವುದು ಮುಖ್ಯವಾಗುವ ಮನೋಭಾವ ಇರಬೇಕು. ಗ್ರಾಮೀಣ ಭಾಗದಲ್ಲಿ ವೃದ್ಧರಷ್ಟೇ ಹೆಚ್ಚು ಸಿಗುತ್ತಾರೆ. ಹಳ್ಳಿಗಾಡಿನ ಸೊಗಡನ್ನು ಜೀವಂತವಾಗಿರಿಸುವ ಕೆಲಸ ಆಗಬೇಕು. ಹಳ್ಳಿ ಅಭಿವೃದ್ಧಿಯಾದರಷ್ಟೇ ದೇಶ ಉಳಿಯಲು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಕಸಾಪ ಮಾಜಿ ಅಧ್ಯಕ್ಷೆ ಮೀರಾ ಶಿವಲಿಂಗಯ್ಯ, ಉಪಾಧ್ಯಕ್ಷ ಗುರುಪ್ರಸಾದ್, ಗೌರವ ಕಾರ್ಯದರ್ಶಿ ಕೇಷ್ಣೇಗೌಡ ಹುಸ್ಕೂರು, ಗೌರವ ಕೋಶಾಧ್ಯಕ್ಷ ಬಿ.ಎಂ.ಅಪ್ಪಾಜಪ್ಪ, ಪ್ರಾಂಶುಪಾಲರಾದ ಸುಮಾರಾಣಿ ಭಾಗವಹಿಸಿದ್ದರು.