ಹುಕ್ಕೇರಿಯಲ್ಲಿ ತಾಯಿ-ಮಗು ಆಸ್ಪತ್ರೆ ಸ್ಥಾಪನೆ

| Published : Aug 10 2025, 01:48 AM IST / Updated: Aug 10 2025, 02:00 AM IST

ಸಾರಾಂಶ

ತಾಯಂದಿರು ಮತ್ತು ಮಕ್ಕಳ ಆರೋಗ್ಯಕ್ಕೆ ಸಂಬಂಧಿಸಿದ ಸೇವೆಗಳನ್ನು ಒದಗಿಸಲು ಹುಕ್ಕೇರಿಯಲ್ಲಿ ತಾಯಿ-ಮಗು ಆಸ್ಪತ್ರೆ ಸ್ಥಾಪಿಸುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಭರವಸೆ ನೀಡಿದರು.

ಕನ್ನಡಪ್ರಭ ವಾರ್ತೆ ಹುಕ್ಕೇರಿ

ತಾಯಂದಿರು ಮತ್ತು ಮಕ್ಕಳ ಆರೋಗ್ಯಕ್ಕೆ ಸಂಬಂಧಿಸಿದ ಸೇವೆಗಳನ್ನು ಒದಗಿಸಲು ಹುಕ್ಕೇರಿಯಲ್ಲಿ ತಾಯಿ-ಮಗು ಆಸ್ಪತ್ರೆ ಸ್ಥಾಪಿಸುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಭರವಸೆ ನೀಡಿದರು.

ಇಲ್ಲಿನ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಶನಿವಾರ ಆಯೋಜಿಸಿದ 4.50 ಕೋಟಿ ರೂ ವೆಚ್ಚದ ವೈದ್ಯ-ಸಿಬ್ಬಂದಿಗಳ ವಸತಿಗೃಹ ಕಟ್ಟಡಗಳ ಉದ್ಘಾಟನೆ ಮತ್ತು ಬ್ಲಾಕ್ ಮಟ್ಟದ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯದ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಈ ಭಾಗದ ಬಡಜನರ ಬೇಡಿಕೆಯನ್ವಯ ತಾಯಂದಿರು ಮತ್ತು ಮಕ್ಕಳ ಆರೈಕೆಗಾಗಿ ಹುಕ್ಕೇರಿಯಲ್ಲಿ ತಾಯಿ-ಮಗು ಆಸ್ಪತ್ರೆ ನಿರ್ಮಿಸಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದರು.ತಾಯಿ-ಮಗು ಆಸ್ಪತ್ರೆ ಸ್ಥಾಪನೆಯಿಂದ ಗರ್ಭೀಣಿಯರ ಆರೈಕೆ, ಸುರಕ್ಷಿತ ಹೆರಿಗೆ, ಹೆರಿಗೆಯ ನಂತರದ ಆರೈಕೆ, ಶಿಶುಗಳ ಆರೈಕೆ, ಮಕ್ಕಳ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ ಲಭಿಸಲಿದೆ. ಈ ಹಿನ್ನಲೆಯಲ್ಲಿ ಮಹತ್ವಾಕಾಂಕ್ಷಿ ಈ ಆಸ್ಪತ್ರೆ ಆರಂಭಿಸಲು ಇಲಾಖೆಯ ಅಧಿಕಾರಿಗಳು ರೂಪರೇಷೆ ಸಿದ್ಧಪಡಿಸಿ ಅಗತ್ಯ ಪ್ರಸ್ತಾವನೆ ಸಲ್ಲಿಸಬೇಕು. ತಾಲೂಕಿನ ಕಣಗಲಾ, ಪಾಶ್ಚಾಪುರ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳನ್ನಾಗಿ ಮೇಲ್ದರ್ಜೆಗೇರಿಸುವ ಪ್ರಕ್ರಿಯೆ ಹಂತದಲ್ಲಿದೆ. ಜೊತೆಗೆ ಹಟ್ಟಿಆಲೂರು, ಬೆಲ್ಲದ ಬಾಗೇವಾಡಿಯಲ್ಲಿ ಹೊಸದಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸ್ಥಾಪಿಸಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.ಆರೋಗ್ಯ ಕ್ಷೇತ್ರಕ್ಕೆ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ವಿಶೇಷ ಕಾಳಜಿ ವಹಿಸಿದೆ. ಬಡಜನರಿಗೆ ಉಚಿತ ಮತ್ತು ಉನ್ನತ ಗುಣಮಟ್ಟದ ಆರೋಗ್ಯ ಸೇವೆ ಕಲ್ಪಿಸಲು ಸರ್ಕಾರ ಸದಾ ಬದ್ಧವಿದೆ. ಕಡ್ಡಾಯ ಗ್ರಾಮೀಣ ಸೇವೆಯಡಿ 2 ಸಾವಿರ ವೈದ್ಯ ಸಿಬ್ಬಂದಿ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಕೊರತೆ ಇರುವ ವೈದ್ಯ ಸಿಬ್ಬಂದಿಗಳನ್ನು ವರ್ಗಾವಣೆ ಮೂಲಕ ಸರಿದೂಗಿಸುವ ಪ್ರಯತ್ನ ನಡೆದಿದೆ. ಆಶಾ ಕಾರ್ಯಕರ್ತೆಯರ ವೇತನ ಹೆಚ್ಚಿಸಲಾಗಿದೆ. ಆಶಾಕಿರಣ ಯೋಜನೆಯಡಿ ಉಚಿತ ಕಣ್ಣು ತಪಾಸಣೆ ನಡೆಸುವ ಕಾರ್ಯಕ್ರಮ ಜಾರಿಯಲ್ಲಿದೆ ಎಂದರು.ಶಾಸಕ ನಿಖಿಲ್ ಕತ್ತಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಣಗಲಾದಲ್ಲಿ ಕೈಗಾರಿಕೆ ವಸಾಹತು ಪ್ರದೇಶ ಇರುವುದರಿಂದ ಟ್ರಾಮಾ ಸೆಂಟರ್ ಸ್ಥಾಪಿಸಬೇಕು. ಕ್ಷೇತ್ರದ ಬೆಲ್ಲದ ಬಾಗೇವಾಡಿ, ಹಟ್ಟಿಆಲೂರದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪಿಸಬೇಕು. ವಿವಿಧ ಆಸ್ಪತ್ರೆಗಳಲ್ಲಿ ಕೊರತೆ ಇರುವ ವೈದ್ಯ ಸಿಬ್ಬಂದಿಗಳನ್ನು ನಿಯೋಜಿಸಬೇಕು ಎಂದು ಸಚಿವರಲ್ಲಿ ಮನವಿ ಮಾಡಿದರು.ಆರೋಗ್ಯ ಇಲಾಖೆ ಜಂಟಿ ಆಯುಕ್ತೆ ಪುಷ್ಪಾ ದೊಡಮನಿ, ಡಿಎಚ್‌ಒ ಡಾ.ಐ.ಪಿ.ಗಡಾದ, ಎಡಿಎಚ್‌ಒ ಡಾ.ಎಸ್.ಎಸ್.ಗಡೇದ, ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ.ಸಂಜಯ ದೊಡಮನಿ, ತಹಸೀಲ್ದಾರ ಬಲರಾಮ ಕಟ್ಟಿಮನಿ, ತಾಪಂ ಇಒ ಟಿ.ಆರ್.ಮಲ್ಲಾಡದ, ಪುರಸಭೆ ಅಧ್ಯಕ್ಷ ಇಮ್ರಾನ್ ಮೋಮಿನ್, ಸ್ಥಾಯಿ ಸಮಿತಿ ಅಧ್ಯಕ್ಷ ಮಹಾಂತೇಶ ತಳವಾರ, ಸದಸ್ಯರಾದ ಮಹಾವೀರ ನಿಲಜಗಿ, ಎ.ಕೆ.ಪಾಟೀಲ, ರಾಜು ಮುನ್ನೋಳಿ, ಮುಖ್ಯ ವೈದ್ಯಾಧಿಕಾರಿ ಡಾ.ಎಂ.ಎಂ.ನರಸನ್ನವರ, ಡಾ.ಪೂರ್ಣಿಮಾ ತಲ್ಲೂರ, ಆರೋಗ್ಯ ಇಲಾಖೆ ಇಂಜನೀಯರಿಂಗ್ ವಿಭಾಗದ ಎಇಇ ಎಚ್.ಅರುಣಕುಮಾರ, ಕಿರಿಯ ಅಭಿಯಂತರ ರಾಜಕಿಶೋರ, ಗುತ್ತಿಗೆದಾರರಾದ ಬಸವರಾಜ ಗಂಗಣ್ಣವರ, ಇಲಿಯಾಸ ಮೂಡಲಗಿ, ಗ್ಯಾರಂಟಿ ಯೋಜನೆ ತಾಲೂಕು ಅಧ್ಯಕ್ಷ ಶಾನೂಲ್ ತಹಶೀಲ್ದಾರ ಮತ್ತಿತರರು ಉಪಸ್ಥಿತರಿದ್ದರು.ತಾಲೂಕು ಆರೋಗ್ಯ ಅಧಿಕಾರಿ ಡಾ.ಉದಯ ಕುಡಚಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಶಿಕ್ಷಕ ಎಸ್.ಎಸ್.ಹಿರೇಮಠ ನಿರೂಪಿಸಿದರು. ಎಡಿಎಚ್‌ಒ ಡಾ.ಎಸ್.ಎಸ್.ಗಡೇದ ವಂದಿಸಿದರು.