ಕ್ಯಾಂಟರ್ ಲಾರಿ ಬೈಕ್‌ ನಡುವೆ ಅಪಘಾತ ತಾಯಿ ಮಗ ಸ್ಥಳದಲ್ಲೆ ಸಾವು

| Published : Nov 22 2023, 01:00 AM IST

ಸಾರಾಂಶ

ಹಾಸನದ ಬೈಪಾಸ್ ರಸ್ತೆಯ ಗುಂಡೇಗೌಡನಕೊಪ್ಪಲು ಬಳಿ ಇರುವ ರಾಯಲ್ ಅಪೋಲೊ ಶಾಲೆ ಬಳಿ ಬೈಕ್ ಹಾಗೂ ಕ್ಯಾಂಟರ್ ಲಾರಿ ನಡುವೆ ಅಪಘಾತ ಸಂಭವಿಸಿ ತಾಯಿ ಮಗ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಯಿಂದ ಆಕ್ರೋಶಗೊಂಡ ಸ್ಥಳೀಯರು ಲಾರಿಗಳ ಮೇಲೆ ಕಲ್ಲು ತೂರಿದ್ದಾರೆ.

ಕನ್ನಡಪ್ರಭ ವಾರ್ತೆ ಹಾಸನ ಮಿನಿ ಲಾರಿಯೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ತಾಯಿ ಮತ್ತು ಮಗ ಸ್ಥಳದಲ್ಲೆ ಸಾವನ್ನಪ್ಪಿದ ಘಟನೆ ನಗರದ ಹೊರವಲಯ ಪೋದರ್ ಶಾಲೆ ಬಳಿ ಮಂಗಳವಾರ ಸಂಭವಿಸಿದ ಹಿನ್ನೆಲೆಯಲ್ಲಿ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದಲ್ಲದೇ ಲಾರಿಗಳ ಮೇಲೆ ಕಲ್ಲು ತೂರಿದ್ದಾರೆ. ಮಂಗಳವಾರ ಮಧ್ಯಾಹ್ನ ಬೈಪಾಸ್ ರಸ್ತೆಯ ಗುಂಡೇಗೌಡನಕೊಪ್ಪಲು ಬಳಿ ಇರುವ ರಾಯಲ್ ಅಪೋಲೊ ಶಾಲೆ ಬಳಿ ಬೈಕ್ (ದ್ವಿಚಕ್ರ ವಾಹನ) ಮತ್ತು ಕ್ಯಾಂಟರ್ ಲಾರಿ ನಡುವೆ ಅಪಘಾತ ಸಂಭವಿಸಿದ್ದು, ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ತಾಯಿ ಕಮಲಮ್ಮ (೭೧ ವರ್ಷ) ಮಗ ಸತೀಶ್ ೪೨ ವರ್ಷ ಮೃತಪಟ್ಟಿದ್ದು, ಘಟನೆಯಿಂದ ಆಕ್ರೋಶಗೊಂಡು ಸ್ಥಳದಲ್ಲಿ ನೂರಾರು ಜನರು ಜಮಾಯಿಸಿ ನಾಲ್ಕು ಲಾರಿಗಳ ಮೇಲೆ ಕಲ್ಲು ತೂರಾಟ ನಡೆಸಿದರು. ಸ್ಥಳದಲ್ಲಿ ಮೃತರ ಶವಗಳನ್ನು ಎತ್ತಲು ಬಿಡದೆ ಪ್ರತಿಭಟನೆ ನಡೆಸಿದರು. ವಿಷಯ ತಿಳಿದ ಬಡಾವಣೆ ಠಾಣೆ ಪೊಲೀಸ್ ಅಧಿಕಾರಿ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿ ಶಾಂತಿ ಕಾಪಾಡಲು ಮುಂದಾದರು. ಗೂಡ್ಸ್ ವಾಹನ ವೇಗವಾಗಿ ಬಂದಿದ್ದೇ ಅಪಘಾತಕ್ಕೆ ಕಾರಣ ಎಂದು ಸ್ಥಳೀಯರ ಆರೋಪವಾಗಿದ್ದು, ಇನ್ನು ರಸ್ತೆಯ ಎರಡು ಬದಿಗಳಲ್ಲಿ ಲಾರಿಗಳನ್ನು ಬೇಕಾಬಿಟ್ಟಿಯಾಗಿ ನಿಲ್ಲಿಸಿ ಸಂಚಾರಕ್ಕೆ ಅಡಚಣೆಯಾಗಿದೆ. ಇದರಿಂದ ರಸ್ತೆಯಲ್ಲಿ ಹೋಗಿ ಬರುವ ವಾಹನಗಳು ಸುಗಮವಾಗಿ ಚಲಿಸುವುದಕ್ಕೆ ಕಷ್ಟವಾಗಿದೆ. ಇದರಿಂದ ಈ ಅಪಘಾತ ಸಂಭವಿಸಿ ಇಬ್ಬರ ಬಲಿಯಾಗಿದೆ ಎಂಬುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಯಿತು. ಈ ವೇಳೆ ಕೆಲ ಸಮಯ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆಯಿತು. ನಂತರ ಪಲ್ಟಿಯಾಗಿದ್ದ ಕ್ಯಾಂಟರ್ ಲಾರಿಯನ್ನು ಕ್ರೈನ್ ಮೂಲಕ ಎತ್ತಲು ಬಂದಾಗ ಸಾರ್ವಜನಿಕರು ತಡೆದು ನಂತರ ದಾರಿ ಬಿಟ್ಟರು.