ಕನ್ನಡಪ್ರಭ ವಾರ್ತೆ ಬೆಂಗಳೂರು
ಮದ್ಯ ಸೇವನೆಗೆ ವಿಚಾರವಾಗಿ ನಡೆದ ಜಗಳದಲ್ಲಿ ಅಜ್ಜಿ ಮೇಲೆ ಬ್ಯಾಟ್‌ನಿಂದ ಹೊಡೆದು ಮಗಳು ಹಾಗೂ ಮೊಮ್ಮಗ ಹತ್ಯೆಗೈದಿರುವ ಘಟನೆ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಹಾಸನ ಜಿಲ್ಲೆ ಹಣ್ಣಿನಕೆರೆ ಗ್ರಾಮದ ನಿವಾಸಿ ಜಯಮ್ಮ (70) ಮೃತ ದುರ್ದೈವಿ. ಈ ಹತ್ಯೆ ಸಂಬಂಧ ಮೃತರ ಮಗಳು ಭಾಗ್ಯಲಕ್ಷ್ಮೀ ಹಾಗೂ ಕುಶಾಲ್ ಬಂಧಿತರಾಗಿದ್ದಾರೆ. ಮನೆಯಲ್ಲಿ ಸೋಮವಾರ ಸಂಜೆ ಮದ್ಯ ಸೇವನೆ ವಿಚಾರವಾಗಿ ಅಜ್ಜಿ, ಮಗಳು, ಮೊಮ್ಮಗನ ಮಧ್ಯೆ ಉಂಟಾದ ಜಗಳವು ಕೊಲೆ ಅಂತ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸುಭಾಷ್ ನಗರದ ಮೋನಿಷಾ ಎನ್‌ಕ್ಲೇವ್‌ನ ಒಂದನೇ ಮಹಡಿಯ ಫ್ಲಾಟ್ ನಂ.107 ರಲ್ಲಿ ಭಾಗ್ಯಲಕ್ಷ್ಮಿ ಮತ್ತು ಅವರ ಮಗ ಕುಶಾಲ್ ವಾಸವಿದ್ದರು. ಮಗಳ ಮನೆಗೆ ಆಗಾಗ್ಗ ಭಾಗ್ಯಲಕ್ಷ್ಮೀ ತಾಯಿ ಜಯಮ್ಮ ಬಂದು ಹೋಗುತ್ತಿದ್ದರು. ಕಳೆದ ಮೂರ್ನಾಲ್ಕು ತಿಂಗಳಿಂದ ಮದ್ಯ ಸೇವಿಸಿ ಮನೆಯಲ್ಲಿ ತಾಯಿ-ಮಗ ಮಾಡುತ್ತಿದ್ದರು. ಇದರಿಂದ ಅಪಾರ್ಟ್‌ಮೆಂಟ್‌ನ ಇತರೆ ವಾಸಿಗಳಿಗೆ ತೊಂದರೆಯಾಗುತ್ತಿತ್ತು. ಈ ಬಗ್ಗೆ ಕುಶಾಲ್ ತಂದೆ ಕೃಷ್ಣನಾಯ್ಕ್ ಅವರ ಬಳಿ ನಿವಾಸಿಗಳು ದೂರು ನೀಡಿದರು.ಆಗ ಕುಶಾಲ್‌ನನ್ನು ಕುಡಿತ ಬಿಡಿಸಲು ಪುನರ್ವಸತಿ ಕೇಂದ್ರಕ್ಕೆ ತಂದೆ ಕೃಷ್ಣನಾಯಕ್ ದಾಖಲಿಸಿದರು. ಕೆಲ ದಿನಗಳ ಬಳಿಕ ಆತ ಮನೆಗೆ ಮರಳಿ ಮತ್ತೆ ಚಾಳಿ ಮುಂದುವರೆಸಿದ. ಮತ್ತೆ ಅಮ್ಮ ಮಗ ಕುಡಿದು ಗಲಾಟೆ ಮಾಡುತ್ತಿದ್ದರು. ಇತ್ತೀಚಿಗೆ ಮಗಳ ಮನೆಗೆ ಜಯಮ್ಮ ಬಂದಿದ್ದರು. ಮೂರ್ನಾಲ್ಕು ದಿನಗಳಿಂದ ಅವರ ಫ್ಲಾಟ್ ನಿಂದ ಜಾಸ್ತಿ ಗಲಾಟೆ ಕೇಳಿ ಬರುತ್ತಿತ್ತು. ಅಂತೆಯೇ ಸೋಮವಾರ ರಾತ್ರಿ ಸಹ ಜಗಳವಾಗಿದೆ. ಮದ್ಯ ಸೇವನೆಗೆ ಜಯಮ್ಮ ಆಕ್ಷೇಪಿಸಿದ್ದಾರೆ. ಈ ಮಾತಿಗೆ ಕೆರಳಿದ ತಾಯಿ-ಮಗ, ಅಜ್ಜಿ ಮೇಲೆ ಬ್ಯಾಟ್ ಮತ್ತು ದೊನ್ನೆಯಿಂದ ಹೊಡೆದು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಜ್ಜಿ ಮದ್ಯ ವ್ಯಸನಿ: ಮದ್ಯಕ್ಕೆ ಮಗಳು ಮತ್ತು ಮೊಮ್ಮಗ ಮಾತ್ರವಲ್ಲ ಅಜ್ಜಿ ಜಯಮ್ಮ ಸಹ ವ್ಯಸನಿ ಆಗಿದ್ದರು. ದಿನವೀಡಿ ಕುಡಿದು ಮನೆಯಲ್ಲಿ ಈ ಮೂವರು ಗಲಾಟೆ ಮಾಡುತ್ತಿದ್ದರು. ಕುಶಾಲ್ ಕೆಲಸಕ್ಕೆ ಸಹ ಹೋಗದೆ ತಂದೆ ಕೊಡುವ ದುಡ್ಡಿನಲ್ಲಿ ಶೋಕಿ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಕುಡಿತ ಕಾರಣಕ್ಕೆ ಪತಿ ದೂರ
ಭಾಗ್ಯಲಕ್ಷ್ಮೀ ಕುಟುಂಬದವರು ಆರ್ಥಿಕವಾಗಿ ಸ್ಥಿತಿವಂತರು. 25 ವರ್ಷಗಳ ಹಿಂದೆ ಎಂಜಿನಿಯರ್ ಕೃಷ್ಣನಾಯ್ಕ್ ಹಾಗೂ ಭಾಗ್ಯಲಕ್ಷ್ಮೀ ಅಂರ್ಜಜಾತಿ ವಿವಾಹವಾಗಿದ್ದರು. ಈ ದಂಪತಿಗೆ ಕುಶಾಲ್ ಎಂಬ ಮಗನಿದ್ದಾನೆ. ಆದರೆ ಕೌಟುಂಬಿಕ ಕಲಹ ಹಿನ್ನಲೆಯಲ್ಲಿ 20 ವರ್ಷಗಳ ಹಿಂದೆಯೇ ಪತ್ನಿ ಹಾಗೂ ಮಗನಿಂದ ನಾಯ್ಕ್ ಪ್ರತ್ಯೇಕವಾಗಿದ್ದರು. ಬಳಿಕ ಎರಡನೇ ಮದುವೆ ಮಾಡಿಕೊಂಡು ಅವರು ಜೀವನ ಸಾಗಿಸುತ್ತಿದ್ದಾರೆ. ಹೀಗಿದ್ದರೂ ಮೊದಲ ಪತ್ನಿ ಹಾಗೂ ಮಗನಿಗೆ ಅವರು ಆರ್ಥಿಕವಾಗಿ ನೆರವಾಗುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.