ವಿಜಯಪುರ: ಕೌಟುಂಬಿಕ ಕಲಹದ ಹಿನ್ನೆಲೆ ಮಹಿಳೆಯೊಬ್ಬಳು ತನ್ನ ಐವರು ಮಕ್ಕಳೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಹೃದಯವಿದ್ರಾವಕ ಘಟನೆ ನಗರದ ಹೊರವಲಯದಲ್ಲಿರುವ ಭೂತನಾಳ ಕೆರೆಯಲ್ಲಿ ಬುಧವಾರ ಬೆಳಗ್ಗೆ ಬೆಳಕಿಗೆ ಬಂದಿದೆ.
ಕನ್ನಡಪ್ರಭ ವಾರ್ತೆ ವಿಜಯಪುರ
ಕೌಟುಂಬಿಕ ಕಲಹದ ಹಿನ್ನೆಲೆ ಮಹಿಳೆಯೊಬ್ಬಳು ತನ್ನ ಐವರು ಮಕ್ಕಳೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಹೃದಯವಿದ್ರಾವಕ ಘಟನೆ ನಗರದ ಹೊರವಲಯದಲ್ಲಿರುವ ಭೂತನಾಳ ಕೆರೆಯಲ್ಲಿ ಬುಧವಾರ ಬೆಳಗ್ಗೆ ಬೆಳಕಿಗೆ ಬಂದಿದೆ.ತಿಕೋಟಾ ತಾಲೂಕಿನ ತೊರವಿ ಗ್ರಾಮದ ಶಾಂತಿನಗರ ನಿವಾಸಿ ಮಹಿಳೆ ಶೋಭಾ ಜಾಲಗೇರಿ (35), ಮಕ್ಕಳಾದ ವಿದ್ಯಾ ಜಾಲಗೇರಿ (15), ಸುವರ್ಣಾ ಜಾಲಗೇರಿ (13), ತಿಪ್ಪರಾಯ ಜಾಲಗೇರಿ (12), ಸಾನಿಕಾ ಜಾಲಗೇರಿ (10) ಹಾಗೂ ವಿಕಾಸ ಜಾಲಗೇರಿ (6) ಮೃತರು.
ವಿಷಯ ತಿಳಿದ ತಕ್ಷಣವೇ ವಿಜಯಪುರ ಎಸ್‌ಪಿ ಲಕ್ಷ್ಮಣ ನಿಂಬರಗಿ, ಡಿವೈಎಸ್‌ಪಿಗಳಾದ ನಾಗರಾಜ, ತುಳಜಪ್ಪ ಸುಲ್ಫಿ, ಸಿಪಿಐ ಪ್ರದೀಪ ತಳಕೇರಿ, ಪಿಎಸ್‌ಐ ಸೀತಾರಾಮ ಲಮಾಣಿ ಹಾಗೂ ಆದರ್ಶನಗರ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ, ಪರಿಶೀಲನೆ ನಡೆಸಿದ್ದಾರೆ. ಆರು ಮೃತ ದೇಹಗಳನ್ನು ಹೊರ ತಗೆದು ನಗರದ ಖಾಸಗಿ ಆಸ್ಪತ್ರೆಗೆ ರವಾನಿಸಿ, ಮರಣೋತ್ತರ ಪರೀಕ್ಷೆ ಕೈಗೊಂಡಿದ್ದು, ಘಟನೆಯ ಕುರಿತು ತನಿಖೆ ಮುಂದುವರೆಸಿದ್ದಾರೆ.ಘಟನೆಯ ವಿವರ:
ಆಗಸ್ಟ್ 23ರಂದು ಪತಿ ಮಲ್ಲಿಕಾರ್ಜುನ ಜಾಲಗೇರಿ ಪ್ರಾಪಂಚಿಕ ವಿಷಯವಾಗಿ ಬುದ್ಧಿವಾದ ಹೇಳಿದ್ದಕ್ಕೆ ಪತ್ನಿ ಶೋಭಾ ತನ್ನ ಐವರು ಮಕ್ಕಳೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಲ್ಲಿಕಾರ್ಜುನನ ಪತ್ನಿ ಶೋಭಾ ಹಾಗೂ ಐವರು ಮಕ್ಕಳ ಮೃತ ದೇಹಗಳು ಭೂತನಾಳ ಕೆರೆಯಲ್ಲಿ ಬುಧವಾರ ಬೆಳಗ್ಗೆ ದೊರೆತಿವೆ.ಕಾಣೆಯಾಗಿದ್ದಾರೆಂದು ದೂರು ದಾಖಲಿಸಿದ್ದ ಪತಿ:
ಆಗಸ್ಟ್ 23ರಂದು ಪತ್ನಿಯೊಂದಿಗೆ ವಾಗ್ವಾದ ಬಳಿಕ ಅಂದು ತಡರಾತ್ರಿ ನನ್ನ ಪತ್ನಿ ಹಾಗೂ ಐವರು ಮಕ್ಕಳು ಕಾಣೆಯಾಗಿದ್ದಾರೆ ಎಂದು ಮಲ್ಲಿಕಾರ್ಜುನ ಜಾಲಗೇರಿ ಆಗಸ್ಟ್ 24ರಂದು ವಿಜಯಪುರ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 23ರಂದು ರಾತ್ರಿ ನಾನು ಗೌಂಡಿ (ಗಾರೆ) ಕೆಲಸಕ್ಕೆ ಹೋಗುತ್ತಿದ್ದು, ನಾಳೆ ಬೆಳಗ್ಗೆ ಬೇಗ ಎದ್ದು ಪೂಜೆ ಮಾಡಿ, ದೇವರಿಗೆ ಹೋಗಿಬಂದು ಅಡುಗೆಮಾಡಿ ಬುತ್ತಿ (ಊಟದ ಡಬ್ಬಿ) ಕಟ್ಟು ಎಂದು ಪತ್ನಿಗೆ ಹೇಳಿದ್ದಕ್ಕೆ ನನ್ನ ಜೊತೆಗೆ ವಾಗ್ವಾದ ನಡೆಸಿ ನಡೆಸಿ ರಾತ್ರಿ ಮಕ್ಕಳೊಂದಿಗೆ ಮನೆಯಲ್ಲಿ ಮಲಗಿದ್ದಳು. ನಾನು ಹೊರಗೆ ಮಲಗಿದ್ದು, 24ರ ಬೆಳಗಿನಜಾವ 4 ಗಂಟೆಗೆ ಎದ್ದು ನೋಡಿದಾಗ ಪತ್ನಿ ಹಾಗೂ ಮಕ್ಕಳು ಮನೆಯಲ್ಲಿ ಇರಲಿಲ್ಲ ಎಂದು ಮಲ್ಲಿಕಾರ್ಜುನ ಜಾಲಗೇರಿ ದೂರಿನಲ್ಲಿ ಉಲ್ಲೆಖಿಸಿದ್ದಾರೆ.ಬುಧವಾರ ಬೆಳಗ್ಗೆ ಆದರ್ಶ ನಗರ ಠಾಣೆ ವ್ಯಾಪ್ತಿಯ ಭೂತನಾಳ ಕೆರೆಯಲ್ಲಿ 6 ಜನರು ನೀರಲ್ಲಿ ಮುಳುಗಿ ಮರಣ ಹೊಂದಿದ ಕುರಿತು ಪ್ರಾಥಮಿಕ ಮಾಹಿತಿ ದೊರೆತಿದೆ. ಈ ಘಟನೆ ಆಗಸ್ಟ್ 24 ರಿಂದ 26ರ ನಡುವಿನ ಅವಧಿಯಲ್ಲಿ ಜರುಗಿದ್ದು, ತಾಯಿ ಶೋಭಾ ಜಾಲಗೇರಿ, ಹಾಗೂ ಆಕೆಯ ಮಕ್ಕಳಾದ ವಿದ್ಯಾ, ಸುವರ್ಣಾ, ತಿಪ್ಪರಾಯ, ಸಾನಿಕಾ ಹಾಗೂ ವಿಕಾಸ ಮೃತದೇಹಗಳು ಕೆರೆಯಲ್ಲಿ ಪತ್ತೆಯಾಗಿವೆ. ಮನೆಯಲ್ಲಿ ಬುದ್ದಿವಾದ ಹೇಳಿದ್ದಕ್ಕೆ ಪತ್ನಿ, ಮಕ್ಕಳು ಕಾಣೆಯಾಗಿದ್ದಾರೆಂದು ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಮಲ್ಲಿಕಾರ್ಜುನ ಜಾಲಗೇರಿ ದೂರು ದಾಖಲಿಸಿದ್ದಾರೆ. ಘಟನೆಯ ಕುರಿತು ತನಿಖೆ ಮುಂದುವರೆಸಲಾಗಿದೆ.
.ಲಕ್ಷ್ಮಣ ನಿಂಬರಗಿ, ವಿಜಯಪುರ ಎಸ್‌ಪಿ.