ಸಾರಾಂಶ
ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ಇಡೀ ಕುಟುಂಬದ ಸದಸ್ಯರನ್ನು ನಾಶಪಡಿಸುವ ಸಂಬಂಧ ಗುಡಿಸಲಿಗೆ ಪೆಟ್ರೋಲ್ ಸಿಂಪಡಣೆ ಬೆಂಕಿ ಹಚ್ಚಿದ ಪರಿಣಾಮ ಒಂದೇ ಕುಟುಂಬದ ಇಬ್ಬರು ಸಜೀವ ದಹನವಾಗಿ, ಮೂವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ಘಟನೆ ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರದ ಬಳಿಯ ಬೆಳಗಲಿಯಲ್ಲಿ ಮಂಗಳವಾರ ಬೆಳಗಿನ ಜಾವ ನಡೆದಿದೆ. ಈ ಕುರಿತು ಮುಧೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಬೆಳಗಲಿ ಸರಹದ್ದಿನ ಪೆಂಡಾರಿ ಮುಲ್ಲಾ ತೋಟದ ಮನೆಯ ಮಾಲೀಕ ದಸ್ತಗಿರಸಾಬ.ಮೌ.ಪೆಂಡಾರಿ ಅವರ ಮನೆಗೆ ದುಷ್ಕರ್ಮಿಗಳು ಈ ಬೆಂಕಿ ಹಚ್ಚಿದ್ದಾರೆ. ಘಟನೆಯಲ್ಲಿ ಪೆಂಡಾರಿ ಕುಟುಂಬದ ಜೈಬುನ್ ದಸ್ತಗೀರಸಾಬ ಪೆಂಡಾರಿ (55), ಶಬಾನಾ ದಸ್ತಗೀರಸಾಬ ಪೆಂಡಾರಿ (26) ಸಜೀವ ದಹನವಾಗಿರುವ ತಾಯಿ ಮತ್ತು ಪುತ್ರಿ. ಘಟನೆಯಲ್ಲಿ ಮಾಲೀಕ ದಸ್ತಗಿರಸಾಬ.ಮೌ.ಪೆಂಡಾರಿಗೆ ಶೇ.20 ರಷ್ಟು ಸುಟ್ಟುಗಾಯವಾಗಿದ್ದು, ಈತನ ಪುತ್ರ ಸುಭಾನ.ದ.ಪೆಂಡಾರಿಗೆ ಶೇ.75 ರಷ್ಟು ಸುಟ್ಟ ಗಾಯಗಳಾಗಿವೆ. ಮೊಮ್ಮಗ ಸಿದ್ದಿಕ ಶೌಕತ್ ಪೆಂಡಾರಿ ಯಾವುದೇ ಗಾಯಗಳಿಲ್ಲದೆ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಸಿಂಟೆಕ್ಸ್‌ನಲ್ಲಿ ಪೆಟ್ರೋಲ್ ತಂದಿದ್ದ ಹಂತಕರು:ದಸ್ತಗೀರಸಾಬ ಪೆಂಡಾರಿ ಕುಟುಂಬವನ್ನು ನಾಶಪಡಿಸಬೇಕು ಎಂಬ ದುರುದ್ದೇಶದಿಂದ ದುಷ್ಕರ್ಮಿಗಳು ನೀರು ಸಂಗ್ರಹಿಸುವ ಸಿಂಟೆಕ್ಸ್‌ನಲ್ಲಿ ಪೆಟ್ರೋಲ್ ತಂದಿದ್ದಾರೆ. ನಂತರ 1ಎಚ್‌ಪಿ ಮೋಟಾರ್ ಪಂಪ್ ಬಳಸಿ ಇಡೀ ಪತ್ರಾಸ್ (ತಗಡಿನ) ಶೆಡ್‌ಗೆ ಪೆಟ್ರೋಲ್ ಸಿಂಪಡಣೆ ಮಾಡಿದ್ದಾರೆ. ಪೆಟ್ರೋಲ್ ವಾಸನೆ ಬರುತ್ತಿದ್ದಂತೆ ದಸ್ತಗೀರಸಾಬ, ಆತನ ಪುತ್ರ ಮತ್ತು ಮೊಮ್ಮಗ ಮೂವರು ಹೊರಗೆ ಓಡಿ ಬಂದಿದ್ದಾರೆ. ಇದೆ ವೇಳೆ ದುಷ್ಕರ್ಮಿಗಳು ಅವರಿಗೂ ಪೆಟ್ರೋಲ್ ಸಿಂಪಡಣೆ ಮಾಡಿ ಬೆಂಕಿ ಹಚ್ಚಿದ್ದಾರೆ. ಈ ವೇಳೆ ತಮಗೆ ಹೊತ್ತಿದ್ದ ಬೆಂಕಿ ನಂದಿಸಿಕೊಂಡು ಮನೆಗೆ ಹೊತ್ತಿದ್ದ ಬೆಂಕಿ ನಂದಿಸಲು ದಸ್ತಗೀರಸಾಬ ಅವರಿಗೆ ಸಾಧ್ಯವಾಗಿಲ್ಲ. ಹೀಗಾಗಿ ದಸ್ತಗೀರಸಾಬ ಅವರ ಪತ್ನಿ ಮತ್ತು ಪುತ್ರಿ ಇಬ್ಬರೂ ಮನೆಯೊಳಗೆ ಸಜೀವ ದಹನವಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಘಟನಾ ಸ್ಥಳದಲ್ಲಿ ಎಲ್ಲ ಕುರುಹುಗಳು ದೊರೆತಿರುವುದರಿಂದ, ದಸ್ತಗೀರಸಾಬ ಪೆಂಡಾರಿ ಅವರ ಸಂಪೂರ್ಣ ಪರಿವಾರವನ್ನೇ ಮುಗಿಸುವ ಉದ್ದೇಶ ದುಷ್ಕರ್ಮಿಗಳು ಹೊಂದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಬೆಳಗ್ಗೆ ಘಟನಾ ಸ್ಥಳದಲ್ಲಿ ಶ್ವಾನ ದಳ, ಬೆಳಗಾವಿ ಜಿಲ್ಲಾ ಎಫ್.ಎಸ್.ಎಲ್ ತಂಡ ಸಾಕ್ಷ್ಯಗಳನ್ನು ಕಲೆ ಹಾಕಿತು.ಪಿಎಸ್ಐ ಪರೀಕ್ಷೆ ಬರೆದಿದ್ದ ಶಬಾನಾ, ಮಗ ಗ್ಯಾಂಗ್ ಮನ್:
ದಸ್ತಗೀರಸಾಬ ಪೆಂಡಾರಿಗೆ ನಾಲ್ಕು ಜನ ಹೆಣ್ಣುಮಕ್ಕಳು. ಒಬ್ಬನೇ ಮಗ. ಎಲ್ಲ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿದ್ದರು. 26 ವರ್ಷದ ಮೃತ ಮಗಳು ಶಬಾನಾ ಇತ್ತೀಚೆಗೆ ಪಿಎಸ್ಐ ಪರೀಕ್ಷೆ ಬರೆದಿದ್ದಳು. ಮಗ ಸುಬಾನ ಪದವಿ ಶಿಕ್ಷಣದೊಂದಿಗೆ ಗ್ಯಾಂಗ್ ಮನ್ ಸಹ ಆಗಿದ್ದ. ಘಟನೆಯಲ್ಲಿ ಗಾಯಗೊಂಡು ಸಾವು ಬದುಕಿನ ಮಧ್ಯೆ ಹೋರಾಟ ಮಾಡುತ್ತಿರುವ ಸುಬಾನನನ್ನು ಸ್ಥಳೀಯ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.ಸಂಬಂಧಿಕರ ಆಕ್ರಂದನ:
ಮಹಾಲಿಂಗಪುರ ಪಟ್ಟಣದ ಕೂಗಳತೆ ದೂರದಲ್ಲಿರುವ ಪೆಂಡಾರಿ(ಮುಸ್ಲಿಂ) ಪರಿವಾರದ ಸುಮಾರು 20 ಕೃಷಿ ಆಧಾರಿತ ಮನೆತನಗಳು ಹಿಂದು - ಮುಸ್ಲಿಂ ಭಾವೈಕ್ಯತೆಯೊಂದಿಗೆ ವಾಸವಾಗಿವೆ. ಘಟನೆಗೆ ಬೆಚ್ಚಿ ಬಿದ್ದಿರುವ ಊರಿನ ಜನರು ಆಘಾತ ವ್ಯಕ್ತಪಡಿಸಿದ್ದಲ್ಲದೆ, ಹಿಡಿಶಾಪ ಕೂಡ ಹಾಕುತ್ತಿದ್ದಾರೆ. ಬೆಳಗಿನ ಜಾವ ಘಟನೆ ಬಳಿಕ ಮಗಳ ಮಗ (ಮೊಮ್ಮಗ) ಶೆಡ್‌ನಿಂದ ಕಿರುಚಾಡುತ್ತಿದ್ದಾಗ ಅದನ್ನು ಕೇಳಿ ಅಕ್ಕ ಪಕ್ಕದವರು ಎಚ್ಚರಗೊಂಡು ಹೊರಗೆ ಓಡಿ ಬಂದಿದ್ದಾರೆ. ಆದರೆ, ಜನರು ಜಮಾಯಿಸುವಷ್ಟರಲ್ಲಿ ಭಯಂಕರ ಬೆಂಕಿಯ ಕೆನ್ನಾಲಿಗೆ ತಾಯಿ ಹಾಗೂ ಮಗಳು ದಹನವಾಗಿದ್ದರು.ಘಟನಾ ಸ್ಥಳಕ್ಕೆ ಉತ್ತರ ವಲಯದ ಐಜಿಪಿ ವಿಕಾಸಕುಮಾರ, ಎಸ್ಪಿ ಅಮರನಾಥ ರೆಡ್ಡಿ, ಉಪ ಅಧೀಕ್ಷಕ ಮಹಾಂತೇಶ್ವರ ಜಿಡಿ, ಮುಧೋಳ ಸಿಪಿಐ ಶಿರಹಟ್ಟಿ, ರಬಕವಿ -ಬನಹಟ್ಟಿ ತಾಲೂಕು ಸಿಪಿಐ ಸಂಜೀವ ಬಳಗಾರ, ಪೊಲೀಸ್ ಸಿಬ್ಬಂದಿ ಇತರರು ಇದ್ದರು. ಘಟನೆ ಬಗ್ಗೆ ಮುಧೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.
-----------------------ಇದೊಂದು ಘೋರ ಮತ್ತು ಅಮಾನವೀಯ ಕೃತ್ಯವಾಗಿದ್ದು, ಪೊಲೀಸ್ ಇಲಾಖೆಗೆ ಸವಾಲಾಗಿದೆ. ಆದ್ದರಿಂದ ಪ್ರಾಥಮಿಕ ಹಂತದ ತನಿಖೆಯಲ್ಲಿ ಐದು ತಂಡಗಳನ್ನು ರಚಿಸಿದ್ದೇವೆ. ಈಗಾಗಲೇ ಸಂಶಯಾಸ್ಪದ ಕೆಲವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಶೀಘ್ರದಲ್ಲಿ ಆರೋಪಿಗಳನ್ನು ಬಂಧಿಸಿ ತನಿಖೆಗೆ ಒಳಪಡಿಸುತ್ತೇವೆ.- ವಿಕಾಸಕುಮಾರ, ಐಜಿಪಿ ಉತ್ತರ ವಲಯ.