ಜನ್ಮತಾಳಿದ ಹಸುಗೂಸು ಹಾಸನದ ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ (ಹಿಮ್ಸ್) ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದೆ. ಮಗು ಆರೋಗ್ಯದ ಕುರಿತು ವೈದ್ಯರು ನಿಗಾ ವಹಿಸಿರುವುದಾಗಿ ತಿಳಿದುಬಂದಿದೆ.
ಕನ್ನಡಪ್ರಭ ವಾರ್ತೆ ಹಾಸನ
ಹೆರಿಗೆಗಾಗಿ ದಾಖಲಾಗಿದ್ದ 30 ವರ್ಷದ ಗರ್ಭಿಣಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಕೆಲವೇ ಗಂಟೆಗಳಲ್ಲಿ ಮೃತಪಟ್ಟಿರುವ ಘಟನೆ ನಗರದ ಹಿಮ್ಸ್ ಆಸ್ಪತ್ರೆಯಲ್ಲಿ ನಡೆದಿದ್ದು, ವೈದ್ಯರ ನಿರ್ಲಕ್ಷ್ಯ ಮತ್ತು ಚಿಕಿತ್ಸೆ ನೀಡಲು ತಡ ಮಾಡಿದ್ದೇ ಸಾವಿಗೆ ಕಾರಣವೆಂದು ಆರೋಪಿಸಿ ಮೃತಳ ಕುಟುಂಬದವರು ಹಾಗೂ ಬಂಧುಗಳು ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿ ನ್ಯಾಯಕ್ಕಾಗಿ ಆಗ್ರಹಿಸಿದರು.ಮೃತ ಮಹಿಳೆಯನ್ನು ಶೃತಿ (30) ಎಂದು ಗುರುತಿಸಲಾಗಿದೆ. ಅವರು ಹಾಸನ ತಾಲೂಕಿನ ಹನುಮನಹಳ್ಳಿ ಗ್ರಾಮದ ಪುನೀತ್ ಅವರ ಪತ್ನಿ. ಹಾಲಿ ಕೆ.ಆರ್.ಪೇಟೆಯಲ್ಲಿ ವಾಸವಿದ್ದು, ಚಿಕ್ಕಗಾಡೆನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಅತಿಥಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಪುನೀತ್ ಅವರು ಕೆ.ಆರ್.ಪೇಟೆ ಕೆಎಸ್‌ಆರ್‌ಟಿಸಿ ಡಿಪೋದಲ್ಲಿ ಬಸ್ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ಶೃತಿ ಅವರನ್ನು ಹೆರಿಗೆಗಾಗಿ ಹಾಸನದ ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪ್ರಸೂತಿ ತಜ್ಞೆ ಡಾ. ಸುಮಾ ಅವರಿಂದ ನಾರ್ಮಲ್ ಹೆರಿಗೆ ನಡೆದಿದ್ದು, ಆರೋಗ್ಯವಂತ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆದರೆ ಹೆರಿಗೆ ನಂತರ ಶೃತಿ ಆರೋಗ್ಯದಲ್ಲಿ ಗಂಭೀರ ವ್ಯತ್ಯಾಸ ಉಂಟಾಗಿ ಹೆಚ್ಚಿನ ರಕ್ತದ ಅಗತ್ಯವಿದೆ ಎಂದು ವೈದ್ಯರು ತಿಳಿಸಿದರು. ತಕ್ಷಣವೇ ರಕ್ತ ಹೊಂದಾಣಿಕೆ ಮಾಡಿ ಒದಗಿಸಿದ್ದರೂ, ಇನ್ನಷ್ಟು ಚಿಕಿತ್ಸೆಗಾಗಿ ಬೇರೆ ಆಸ್ಪತ್ರೆಗೆ ಕರೆದೊಯ್ಯಿರಿ ಎಂದು ವೈದ್ಯರು ಸೂಚಿಸಿದ್ದಾರೆ. ಭಾನುವಾರವಾದ ಕಾರಣ ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡಲಿಲ್ಲ. ನಮ್ಮ ಪತ್ನಿಯನ್ನು ಬೇರೆ ಆಸ್ಪತ್ರೆಗೆ ಕರೆದೊಯ್ಯುವ ದಾರಿಯಲ್ಲೇ ಅವರು ಮೃತಪಟ್ಟರು. ವೈದ್ಯರ ನಿರ್ಲಕ್ಷ್ಯದಿಂದಲೇ ಈ ದುರಂತ ಸಂಭವಿಸಿದೆ ಎಂದು ಪತಿ ಪುನೀತ್ ಕಣ್ಣೀರಿಟ್ಟು ಆರೋಪಿಸಿದರು.
ಹಿಮ್ಸ್‌ನ ಐಸಿಯು ನಲ್ಲಿ ಮಗುವಿಗೆ ಚಿಕಿತ್ಸೆ:ಜನ್ಮತಾಳಿದ ಹಸುಗೂಸು ಹಾಸನದ ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ (ಹಿಮ್ಸ್) ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದೆ. ಮಗು ಆರೋಗ್ಯದ ಕುರಿತು ವೈದ್ಯರು ನಿಗಾ ವಹಿಸಿರುವುದಾಗಿ ತಿಳಿದುಬಂದಿದೆ.
ಆಸ್ಪತ್ರೆ ಎದುರು ಪ್ರತಿಭಟನೆ:ಘಟನೆಯ ನಂತರ ಮೃತಳ ಪತಿ, ಮೊದಲ ಮಗುವಿನೊಂದಿಗೆ ಹಾಗೂ ಸಂಬಂಧಿಕರು ಆಸ್ಪತ್ರೆಗೆ ಬಂದು ಆಕ್ರೋಶ ವ್ಯಕ್ತಪಡಿಸಿದರು. ವೈದ್ಯರ ನಿರ್ಲಕ್ಷ್ಯದಿಂದ ತಾಯಿ ಪ್ರಾಣ ಕಳೆದುಕೊಂಡಿದ್ದಾರೆ. ಸಂಪೂರ್ಣ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಮೃತಳ ಸಂಬಂಧಿಕರ ಪ್ರಕಾರ, ಹೆರಿಗೆ ನಂತರ ತಕ್ಷಣ ಸೂಕ್ತ ಚಿಕಿತ್ಸೆ ನೀಡಿದ್ದರೆ ಸಾವು ತಪ್ಪಿಸಬಹುದಿತ್ತು. ಹೆರಿಗೆ ವೇಳೆ ಏನೋ ವ್ಯತ್ಯಾಸ ಮಾಡಿದ್ದರಿಂದಲೇ ರಕ್ತದ ಅಗತ್ಯವಿದೆ, ಬೇರೆ ಆಸ್ಪತ್ರೆಗೆ ಕರೆದೊಯ್ಯಿರಿ ಎಂದು ಹೇಳಿದರು. ಸರ್ಕಾರಿ ಆಸ್ಪತ್ರೆಯಲ್ಲಿ ಸೌಲಭ್ಯಗಳಿದ್ದರೂ ಸರಿಯಾಗಿ ಬಳಸುತ್ತಿಲ್ಲ ಎಂದು ಆರೋಪಿಸಿದರು. ಈ ಕುರಿತು ಹಾಸನ ನಗರ ಪೊಲೀಸ್ ಠಾಣೆಯಲ್ಲಿ ಮೃತ ಬಾಣಂತಿಯ ಸಂಬಂಧಿಕರು ಪ್ರಕರಣ ದಾಖಲಿಸಿದ್ದು, ಪೊಲೀಸರು ಆಸ್ಪತ್ರೆಗೆ ಧಾವಿಸಿ ತನಿಖೆ ನಡೆಸಿದ್ದಾರೆ.