ಸಾರಾಂಶ
ಕನ್ನಡಪ್ರಭ ವಾರ್ತೆ ಹೊಳೆನರಸೀಪುರ ಪಟ್ಟಣದ ದೇವಾಂಗ ಬೀದಿಯ ನಿವಾಸಿ ಗೋವಿಂದರಾಜು ಅವರ ಪತ್ನಿ ವೇದಾವತಿ(25) ತಮ್ಮ 10 ತಿಂಗಳ ಮನಸ್ವಿ ಎಂಬ ಹೆಣ್ಣು ಮಗುವಿನ ಜತೆ ಕಾಣೆಯಾಗಿದ್ದು, ಗೋವಿಂದರಾಜುವಿನ ಅನೈತಿಕ ಸಂಬಂಧಕ್ಕೆ ಬೇಸತ್ತ ತನ್ನ ಮಗಳು ಮನೆ ಬಿಟ್ಟು ಹೋಗಿದ್ದಾರೆ ಎಂದು ವೇದ ಅವರ ತಂದೆ ಕುಮಾರಸ್ವಾಮಿ ಹಾಗೂ ತಾಯಿ ಶೋಭ ದೂರಿದ್ದಾರೆ.
ಗೋವಿಂದರಾಜು ಹಾಗೂ ವೇದಾವತಿ ಅವರಿಗೆ ೭ ವರ್ಷಗಳ ಹಿಂದೆ ಮದುವೆ ಮಾಡಲಾಗಿತ್ತು ಹಾಗೂ ೧೦ ತಿಂಗಳ ಎಂಬ ಹೆಣ್ಣು ಮಗುವಿದೆ. ಗೋವಿಂದರಾಜುಗೆ ಬೇರೊಬ್ಬರೊಂದಿಗೆ ಸಂಬಂಧವಿರುವ ಬಗ್ಗೆ ಗುಮಾನಿ ಇದ್ದು, ಈ ಬಗ್ಗೆ ದಂಪತಿಗಳ ನಡುವೆ ವೈಮಸ್ಸಿತ್ತು. ಜತೆಗೆ ಈ ವಿಚಾರದಲ್ಲಿ ನ್ಯಾಯ ಪಂಚಾಯಿತಿ ಮಾಡಿದ್ದು, ಈ ವಿಚಾರದಲ್ಲಿ ಹಲವಾರು ಬಾರಿ ಗಲಾಟೆ ನಡೆದ ಬಗ್ಗೆ ತನ್ನ ಮಗಳು ತಿಳಿಸಿದ್ದಳು. ಮಾರ್ಚ್ ೧ರಂದು ಹಣಕಾಸಿನ ವಿಚಾರದಲ್ಲಿ ಜಗಳ ಮಾಡಿಕೊಂಡಿದ್ದು, ಮಾರನೇ ದಿನ ಮಾರ್ಚ್ ೨ರ ಸಂಜೆ ೫.೩೦ರ ಸುಮಾರಿನಲ್ಲಿ ಮಗುವೊಂದಿಗೆ ತನ್ನ ಮಗಳು ಮನೆ ಬಿಟ್ಟು ಹೋಗಿದ್ದಾರೆ ಎಂದು ಆಕೆಯ ಪೋಷಕರು ಲಿಖಿತ ದೂರು ನೀಡಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ.ವೇದಾವತಿ ಅವರು ಫೆಬ್ರವರಿ ೮ರಂದು ಪತಿಯ ಅನೈತಿಕ ಸಂಬಂಧ ಕುರಿತಂತೆ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು ಹಾಗೂ ದೂರಿನ ಹಿನ್ನೆಲೆಯಲ್ಲಿ ಗೋವಿಂದರಾಜು ಅವರು ಪೊಲೀಸರ ಉಪಸ್ಥಿತಿಯಲ್ಲಿ ಮುಚ್ಚಳಿಕೆ ಬರೆದುಕೊಟ್ಟಿದ್ದರು. ಅದರಲ್ಲಿ ತನ್ನ ಹೆಂಡತಿ ದೂರಿನಲ್ಲಿ ಕೊಟ್ಟಿರುವಂತೆ ಲಕ್ಷ್ಮಿ ಹಾಗೂ ಅವರ ಪತಿ ಗೋಪಾಲ ಎಂಬುವರು ಪರಿಚಯವಿದ್ದು, ನನ್ನ ಹೆಂಡತಿಗೆ ಅನುಮಾನ ಇರುವ ಕಾರಣ ಆಕೆಯನ್ನ ಮಾತನಾಡಿಸುವುದಿಲ್ಲವೆಂದು ಬರೆದುಕೊಟ್ಟಿದ್ದಾರೆ. ಆದರೆ ಅವರುಗಳ ನಡುವಿನ ಅನೈತಿಕ ಸಂಬಂಧ ಮುಂದುವರೆದ ಕಾರಣ ತನ್ನ ಮಗಳು ಪುಟ್ಟ ಕಂದಮ್ಮನೊಂದಿಗೆ ಮನೆ ಬಿಟ್ಟು ಹೋಗಿದ್ದಾಳೆ. ಈ ರೀತಿಯ ಕೆಟ್ಟ ಪರಿಸ್ಥಿತಿಗೆ ಗೋವಿಂದರಾಜು ಹಾಗೂ ಲಕ್ಷ್ಮಿ ಅವರೇ ಕಾರಣವೆಂದು ಶೋಭ ಕಣ್ಣೀರು ಹಾಕಿದರು.