ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಬಾಂಗ್ಲಾ, ನೇಪಾಳ, ಪಾಕಿಸ್ಥಾನ, ಶ್ರೀಲಂಕಾ ಹಾಘೂ ಅಫ್ಘಾನಿಸ್ತಾನ ರಾಷ್ಟ್ರಗಳಿಗೆ ಜನ್ಮದಾತೆ ಭಾರತ ಮಾತೆ ಎಂದು ಬಸವ ಕೇಂದ್ರದ ಶ್ರೀ ಮರುಳಸಿದ್ದ ಸ್ವಾಮೀಜಿ ಹೇಳಿದರು.ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲೆ ದಬ್ಬಾಳಿಕೆ ಮತ್ತು ಧಾರ್ಮಿಕ ಮುಖಂಡನ ಬಂಧನ ವಿರೋಧಿಸಿ ಹಿಂದೂ ಹಿತರಕ್ಷಣಾ ಸಮಿತಿ ವತಿಯಿಂದ ಬಾಲರಾಜ್ ಅರಸ್ ರಸ್ತೆಯಲ್ಲಿರುವ ಮಥುರಾ ಪ್ಯಾರಡೈಸ್ ಮುಂಭಾಗದಲ್ಲಿ ಮಂಗಳವಾರ ನಡೆದ ಪ್ರತಿಭಟನೆ ಸಭೆಯಲ್ಲಿ ಮಾತನಾಡಿ, ಧಾರ್ಮಿಕ ಮೂಲಭೂತವಾದವನ್ನು ಮುಂದಿಟ್ಟುಕೊಂಡು ದೇಶ ಕಟ್ಟಲು ಮುಂದಾದ ಪಾಕಿಸ್ತಾನ ಏನಾಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ.
ವಸುದೈವಕ ಕುಟುಂಬ ಎನ್ನುವುದು ಭಾರತೀಯರ ನಂಬಿಕೆಯಾಗಿದೆ. ಆದರೆ, ಇದನ್ನು ಒಡೆಯಲು ಯತ್ನಿಸಲಾಗುತ್ತಿದೆ. ಬಹುತ್ವದಲ್ಲಿ ಏಕತೆ ಕಾಪಾಡುತ್ತಿರುವುದು ಭಾರತದಲ್ಲಿ ಮಾತ್ರ. ಸಣ್ಣಸಣ್ಣ ದೇಶಗಳು ಭಾರತದ ಮೇಲೆ ಸಡ್ಡು ಹೊಡೆಯುತ್ತಿವೆ. ಬಾಂಗ್ಲಾದಲ್ಲಿ ತ್ವರಿತವಾಗಿ ಶಾಂತಿ ನೆಲೆಸುವಂತಾಗಲಿ ಎಂದು ಆಶಿಸಿದರು.ಕೂಡ್ಲಿ ಮಠದ ಅಭಿನವ ಶಂಕರ ಸ್ವಾಮೀಜಿ ಮಾತನಾಡಿ, ಬಾಂಗ್ಲಾ ಸಂವಿಧಾನದ ಕಲಂ 41 ಎಲ್ಲಾ ಧರ್ಮದವರನ್ನು ಸಮಾನವಾಗಿ ಕಾಣಬೇಕೆಂದು ಹೇಳುತ್ತದೆ. ಆದರೂ ಸಂವಿಧಾನ ವಿರೋಧಿ ಚಳವಳಿ ನಡೆಸಲಾಗುತ್ತದೆ. ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಸರ್ಕಾರ ಗಲಬೆ ನೋಡಿಕೊಂಡು ಸುಮ್ಮನೆ ಕುಳಿತಿದೆ. ಮತೀಯ ಶಕ್ತಿಗಳು ಮಾತ್ರ ಗಲಭೆ ನಡೆಸುತ್ತಿವೆ ಎಂದಿಲ್ಲ. ಸರ್ಕಾರ ಕೂಡ ಇದರಲ್ಲಿ ಭಾಗಿಯಾದಂತಿದೆ ಎಂದು ದೂರಿದರು.
ಬಾಂಗ್ಲಾದವರು ಇದೇ ರೀತಿ ನಡೆದುಕೊಂಡರೆ ಇಲ್ಲಿಗೆ ಬಂದಿರುವ ಬಾಂಗ್ಲಾದ ನುಸುಳುಕೋರರನ್ನು ವಾಪಾಸ್ ಕಳಿಸಬೇಕಾಗುತ್ತದೆ. ಅಲ್ಲಿರುವ ಹಿಂದುಗಳ ರಕ್ಷಣೆಯಾಗಬೇಕು. ಇಲ್ಲ ಬಾಂಗ್ಲಾವೇ ಈ ದೇಶದ ಭಾಗವಾಗಬೇಕಿದೆ.ಬಾಂಗ್ಲಾ ವಿಮೋಚನೆ ಸಂದರ್ಭದಲ್ಲಿ ಅನ್ನ ಕೊಟ್ಟವರೇ ಹಿಂದು ಸಾಧು ಸಂತರು. ಆದರೆ, ಚಿನ್ಮಯ ದಾಸರ ಪರವಾಗಿ ವಕಾಲತ್ತು ಹಾಕಿದ ವಕೀಲರಿಗೆ ಹೊಡೆದು ಹಾಕಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜೇಶ್‌ಗೌಡ ಮಾತನಾಡಿ, ಬಾಂಗ್ಲಾದ ಮತಾಂಧ ಮುಸಲ್ಮಾನರು ಮಕ್ಕಳು ಮತ್ತು ಮಹಿಳೆಯರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ. ಇದನ್ನು ವಿರೋಧಿಸಿದ ಸನ್ಯಾಸಿಯವರಿಗೆ ಭಯೋತ್ಪಾದಕನಂತೆ ಕಾಣುತ್ತಾರೆ, ಇದು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಚಿನ್ಮಯ ದಾಸರ ಹಿಂದೆ ಇಡೀ ಹಿಂದೂ ಸಮುದಾಯವಿದೆ. ಅಲ್ಲಿರುವ ಹಿಂದುಗಳನ್ನು ದೇಶ ಬಿಟ್ಟು ಹೋಗಿ ಎನ್ನುತ್ತಿದ್ದಾರೆ. ಅದು ಮೂಲತಃ ದುರ್ಗೆಯ ನಾಡು. ಹಿಂದುಗಳ ನಾಡು. ಚಿನ್ಮಯ ದಾಸರನ್ನು ಬಿಡುಗಡೆ ಮಾಡಲು ಆಗ್ರಹಿಸಿದರು.ಮಧುಕರ್ ಮಾತನಾಡಿ, ಈ ಪ್ರತಿಭಟನೆ ಕೇಂದ್ರ, ರಾಜ್ಯ ಸರ್ಕಾರದ ವಿರುದ್ಧ ಅಥವಾ ಯಾವುದೇ ಸಮುದಾಯದ ವಿರುದ್ಧವೂ ಅಲ್ಲ. ಬಾಂಗ್ಲಾದಲ್ಲಿ ನಡೆಯುತ್ತಿರುವ ಹಿಂದುಗಳ ಮೇಲಿನ ದೌರ್ಜನ್ಯದ ವಿರುದ್ಧ. ಭಾರತದಲ್ಲಿ ಹಿಂದುಗಳ ಜಾಗೃತಿಗಾಗಿ ಎಂದರು.
ವೇದಿಕೆ ಕಾರ್ಯಕ್ರಮ ನಂತರ ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲೆ ದಬ್ಬಾಳಿಕೆ ಮತ್ತು ಧಾರ್ಮಿಕ ಮುಖಂಡನ ಬಂಧನ ವಿರೋಧಿಸಿ ಹಿಂದೂ ಹಿತರಕ್ಷಣಾ ಸಮಿತಿ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಯಿತು.ಪ್ರತಿಭಟನೆಯಲ್ಲಿ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ವಾಸುದೇವ್, ಆರ್‌ಎಸ್‍ಎಸ್ ಮುಖಂಡ ಪಟ್ಟಾಭಿರಾಮ್, ದೇವರಾಜ್ ಅರಳಿ ಹಳ್ಳಿ, ಪ್ರವೀಣ್, ಬಿ.ಎ.ರಂಗನಾಥ್, ಮೋಹನ್‍ಗೌಡ ಮೊದಲಾದವರು ಇದ್ದರು.