ಮಾತು ಕೇಳದ ಮಗಳನ್ನು ಕೊಂದು ನೇಣಿಗೆ ಶರಣಾದ ತಾಯಿ

| Published : Oct 15 2023, 12:46 AM IST

ಸಾರಾಂಶ

ತನ್ನ ಮಾತು ಕೇಳದ ಮಗ ಹಾಗೂ ಮಗಳ ತಲೆಗೆ ತಾಯಿ ಕಟ್ಟಿಗೆಯಿಂದ ಬಲವಾಗಿ ಹೊಡೆದಿದ್ದಾಳೆ. ಮಗಳು ಸ್ಥಳದಲ್ಲೇ ಅಸು ನೀಗಿದ್ದಾಳೆ. ಮಗ ಗಂಭೀರವಾಗಿ ಗಾಯಗೊಂಡಿದ್ದಾನೆ. ಇಬ್ಬರೂ ಸತ್ತರೆಂದು ಭಾವಿಸಿದ ತಾಯಿ ಮನೆಯಲ್ಲೇ ನೇಣಿಗೆ ಶರಣಾಗಿದ್ದಾಳೆ.

ಕನ್ನಡಪ್ರಭ ವಾರ್ತೆ ಹರಪನಹಳ್ಳ‍ಿ

ಮಕ್ಕಳು ಮಾತು ಕೇಳ್ತಾ ಇಲ್ಲ ಹಾಗೂ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎನ್ನುವ ವಿಚಾರದಲ್ಲಿ ಗಲಾಟೆ ನಡೆದು ತಾಯಿ ತನ್ನ ಮಕ್ಕಳಿಬ್ಬರ ಮೇಲೆ ಕಟ್ಟಿಗೆಯಿಂದ ಬಲವಾಗಿ ಹೊಡೆದಿದ್ದು, ಮಗಳು ಮೃತಳಾಗಿದ್ದರೆ, ಮಗ ಪ್ರಜ್ಞಾಹೀನನಾಗಿದ್ದು, ಬಳಿಕ ತಾನೂ ನೇಣಿಗೆ ಶರಣಾದ ದಾರುಣ ಘಟನೆ ಹರಪನಹಳ್ಳಿ ತಾಲೂಕಿನ ಹುಲ್ಲಿಕಟ್ಟಿ ಗ್ರಾಮದಲ್ಲಿ ಶನಿವಾರ ಬೆಳಗಿನ ಜಾವ ಜರುಗಿದೆ.

ಶಮನಾಬಾನು (18) ತಾಯಿಯಿಂದ ಕೊಲೆಗೀಡಾದ ಮಗಳು. ಬೇಗಂಬೀ (50) ಮಗಳನ್ನು ಕೊಂದು ನೇಣಿಗೆ ಶರಣಾದ ತಾಯಿ.ಕ್ಷುಲ್ಲಕ ವಿಚಾರದಲ್ಲಿ ಶುಕ್ರವಾರ ರಾತ್ರಿ ತಾಯಿ ಬೇಗಂಬೀ ಹಾಗೂ ಮಗಳು ಶಮನಾಬಾನು ಮತ್ತು ಮಗ ಅಮಾನುಲ್ಲಾ ಮಧ್ಯೆ ಜಗಳ ಆರಂಭವಾಗಿದೆ. ಆನಂತರ ಬೆಳಗಿನ ಜಾವ ಇಬ್ಬರು ಮಕ್ಕಳ ತಲೆಗೆ ತಾಯಿ ಬೇಗಂಬೀ ಕಟ್ಟಿಗೆಯಿಂದ ಬಲವಾಗಿ ಹೊಡೆದಿದ್ದಾಳೆ. ಮಗಳಾದ ಶಮನಾಬಾನು ಸ್ಥಳದಲ್ಲಿಯೇ ಪ್ರಾಣ ಬಿಟ್ಟಿದ್ದಾಳೆ. ಮಗ ಅಮಾನುಲ್ಲಾ ಪ್ರಜ್ಞಾಹೀನನಾಗಿ ಬಿದ್ದಿದ್ದಾನೆ.

ಇಬ್ಬರೂ ಮಕ್ಕಳು ಮೃತಪಟ್ಟಿದ್ದಾರೆ ಎಂದು ತಿಳಿದು ತಾನೂ ಮನೆಯಲ್ಲೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.ಶನಿವಾರ ಬೆಳಗ್ಗೆ 7 ಗಂಟೆಗೆ ಅದೇ ಗ್ರಾಮದ ನನ್ನೇ ಸಾಹೇಬ್‌ ಎಂಬವರು ಬೇಗಂಬೀ ಅವರ ಮನೆಗೆ ಹೋದಾಗ ಘಟನೆ ಬೆಳಕಿಗೆ ಬಂದಿದೆ. ಅಮಾನುಲ್ಲಾಗೆ ಹರಪನಹಳ್ಳಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ದಾವಣಗೆರೆ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃತ ಬೇಗಂಬೀ ಗಂಡನ ತಮ್ಮ ಅಂಗಡಿ ಅಬ್ದುಲ್ಲಾ ಸಾಹೇಬ್‌ ಹರಪನಹಳ್ಳಿ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ.

ವಿಜಯನಗರ ಎಸ್ಪಿ ಶ್ರೀಹರಿಬಾಬು, ಹರಪನಹಳ್ಳಿ ಡಿವೈಎಸ್ಪಿ ವೆಂಕಟಪ್ಪ ನಾಯಕ, ಸಿಪಿಐ ನಾಗರಾಜ ಎಂ. ಕಮ್ಮಾರ, ಪಿಎಸ್‌ಐ ಶಂಭುಲಿಂಗ ಹಿರೇಮಠ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಶ್ವಾನದಳ, ಬೆರಳಚ್ಚು ತಜ್ಞರನ್ನು ಹಾಗೂ ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರನ್ನು ಕರೆಯಿಸಿ ಹೆಚ್ಚಿನ ಸಾಕ್ಷಿಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ಎಸ್ಪಿ ಶ್ರೀಹರಿಬಾಬು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.