ವಿಶೇಷ ಚೇತನ ಮಗಳ ಕುತ್ತಿಗೆ ಕತ್ತಿಯಿಂದ ಕಡಿದು ಕೊಂದ ತಾಯಿ ಬಳಿಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಕುಂದಾಪುರ ತಾಲೂಕಿನ ಶಾನಾಡಿ ಕೊರಗ ಕಾಲೋನಿಯಲ್ಲಿ ಭಾನುವಾರ ಬೆಳಗ್ಗೆ ಸಂಭವಿಸಿದೆ.
ಕುಂದಾಪುರ: ವಿಶೇಷ ಚೇತನ ಮಗಳ ಕುತ್ತಿಗೆ ಕತ್ತಿಯಿಂದ ಕಡಿದು ಕೊಂದ ತಾಯಿ ಬಳಿಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಕುಂದಾಪುರ ತಾಲೂಕಿನ ಶಾನಾಡಿ ಕೊರಗ ಕಾಲೋನಿಯಲ್ಲಿ ಭಾನುವಾರ ಬೆಳಗ್ಗೆ ಸಂಭವಿಸಿದೆ.
ಶಾನಾಡಿ ಕೊರಗ ಕಾಲೋನಿ ನಿವಾಸಿ ಸುಧಾಕರ ಕೊರಗ ಅವರ ಪುತ್ರಿ ಸುಪ್ರತಿ (14) ಕೊಲೆಯಾದ ಬಾಲಕಿ. ಆಕೆಯ ತಾಯಿ ನೇತ್ರಾವತಿ (34) ಆತ್ಮಹತ್ಯೆ ಮಾಡಿಕೊಂಡವರು.ಸುಧಾಕರ ಅವರು ಕೂಲಿ ಕೆಲಸ ಮಾಡಿಕೊಂಡು ಕುಟುಂಬ ನಿರ್ವಹಿಸುತ್ತಿದ್ದರು. ಸುಪ್ರತಿ ಹುಟ್ಟಿನಿಂದಲೇ ವಿಶೇಷ ಚೇತನೆಯಾಗಿದ್ದು, ನಡೆಯಲು, ಕುಳಿತುಕೊಳ್ಳಲು ಹಾಗೂ ಮಾತನಾಡಲು ಸಾಧ್ಯವಾಗದೆ ಹಾಸಿಗೆಯಲ್ಲಿಯೇ ಇರುವ ಸ್ಥಿತಿಯಲ್ಲಿದ್ದರು. ಮನೆಯ ಕೆಲಸಗಳ ಜತೆಗೆ ಮಗಳ ಆರೈಕೆಯ ಜವಾಬ್ದಾರಿಯನ್ನೂ ನೇತ್ರಾವತಿ ನಿರ್ವಹಿಸುತ್ತಿದ್ದರು. ದಂಪತಿಗೆ ಎರಡು ವರ್ಷದ ಗಂಡು ಮಗುವೂ ಇದೆ. ಸರ್ಕಾರದಿಂದ ಮಂಜೂರಾದ ಒಂದು ಎಕರೆ ಜಮೀನಿನಲ್ಲಿ ಹಲವು ದಶಕಗಳಿಂದ ಕುಟುಂಬ ವಾಸಿಸುತ್ತಿತ್ತು ಎನ್ನಲಾಗಿದೆ.ಭಾನುವಾರ ಬೆಳಗ್ಗೆ ಸುಧಾಕರ ಅವರು ಕೂಲಿ ಕೆಲಸಕ್ಕೆ ತೆರಳಿದ ಬಳಿಕ ನೇತ್ರಾವತಿ ಮನೆಯ ಕೆಲಸಗಳನ್ನು ಮುಗಿಸಿ, ಮಗಳ ಕುತ್ತಿಗೆಯನ್ನು ಕತ್ತಿಯಿಂದ ಕಡಿದು ಹತ್ಯೆಗೈದಿದ್ದಾರೆ ಎನ್ನಲಾಗಿದೆ. ಬಳಿಕ ತಾವೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಯ ವೇಳೆ ಮನೆಯಲ್ಲಿದ್ದ ಎರಡು ವರ್ಷದ ಮಗು ಕೂಗಾಡುವುದನ್ನು ಕೇಳಿ ಪಕ್ಕದ ಮನೆಯಲ್ಲಿದ್ದ ನೇತ್ರಾವತಿ ಸಹೋದರಿ ಸ್ಥಳಕ್ಕೆ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ ಎನ್ನಲಾಗಿದೆ.ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ರವಾನಿಸಲಾಗಿದೆ.ಘಟನಾ ಸ್ಥಳಕ್ಕೆ ಉಡುಪಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ಎಸ್., ಡಿವೈಎಸ್ಪಿ ಬೆಳ್ಳಿಯಪ್ಪ ಕೆ.ಯು., ಬ್ರಹ್ಮಾವರ ವೃತ್ತ ನಿರೀಕ್ಷಕ ಗೋಪಿಕೃಷ್ಣ, ಕೋಟ ಪೊಲೀಸ್ ಠಾಣೆಯ ಉಪನಿರೀಕ್ಷಕ ಪ್ರವೀಣ್ ಕುಮಾರ್ ಆರ್. ಹಾಗೂ ಸೋಕೋ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.