ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಡಾ.ಗಂಗೂಬಾಯಿ ಹಾನಗಲ್ ಅವರು ಇಂತಹ ದೊಡ್ಡ ವ್ಯಕ್ತಿತ್ವವಾಗಬೇಕಾದರೆ ಅವರ ತಾಯಿ ತ್ಯಾಗ ಬಹಳ ದೊಡ್ಡದು. ಒಂದು ತಾಯಿ ಮನಸ್ಸು ಮಾಡಿದರೆ ತನ್ನ ಮಗುವನ್ನು ಏಷ್ಟು ದೊಡ್ಡ ವ್ಯಕ್ತಿಯಾಗಿಸಬಲ್ಲರು ಎಂಬುದಕ್ಕೆ ಅವರೇ ಸಾಕ್ಷಿ ಎಂದು ಹಿಂದೂಸ್ಥಾನಿ ಸಂಗೀತ ಗಾಯಕಿ ವೈಷ್ಣವಿ ಹಾನಗಲ್ ಹೇಳಿದರು.ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯದ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಪದ್ಮವಿಭೂಷಣ ಡಾ.ಗಂಗೂಬಾಯಿ ಹಾನಗಲ್ ಅವರ 112ನೇ ಜನ್ಮದಿನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನೂರು ವರ್ಷದ ಹಿಂದೆ ಅಂಬಬಾಯಿ ಅವರ ಮಾನಸಿಕ ಸ್ಥಿತಿ ಹೇಗಿತ್ತೆಂದರೆ, ಮಗಳಿಗೋಸ್ಕರ ತನ್ನ ಸರ್ವಸ್ವ ತ್ಯಾಗ ಮಾಡಿದರು. ಡಾ. ಗಂಗೂಬಾಯಿ ಹಾನಗಲ್ ಅವರು ಇಂತಹ ದೊಡ್ಡ ವ್ಯಕ್ತಿತ್ವ ಆಗಬೇಕಾದರೆ, ಅವರ ತಾಯಿ ತ್ಯಾಗ ಬಹಳ ದೊಡ್ಡದು. ಒಬ್ಬ ತಾಯಿ ಮನಸ್ಸು ಮಾಡಿದರೆ ತನ್ನ ಮಗುವನ್ನು ಏಷ್ಟು ದೊಡ್ಡ ವ್ಯಕ್ತಿಯಾಗಿ ಮಾಡಬಲ್ಲಳು ಎಂಬುದಕ್ಕೆ ಅವರೇ ಸಾಕ್ಷಿ ಎಂದರು.112 ವರ್ಷದ ಹಿಂದೆ ಅಂಬ ಬಾಯಿ ಮಗುವಾಗಿ ಗಂಗೂಬಾಯಿ ಹಾನಗಲ್ ಜನಿಸುತ್ತಾರೆ. ಅವರು ಹುಟ್ಟಿದಾಗ ಮನೆಯಲ್ಲಿ ಕರ್ನಾಟಿಕ ಸಂಗೀತ ನಡೆಸಲಾಗುತಿತ್ತು. ಅಂಬಾಬಾಯಿ ಅವರಿಗೆ ತಮ್ಮ ಮಗಳಿಗೆ ಹಿಂದುಸ್ಥಾನಿ ಸಂಗೀತ ಕಲಿಸಬೇಕು ಎಂಬ ಮಹಾದಾಸೆ ಇತ್ತು. ತಾನು ಅತ್ಯಂತ ಶ್ರೇಷ್ಠ ಕರ್ನಾಟಿಕ್ ಸಂಗೀತ ಗಾಯಕಿಯಾದರೂ, ಮಗಳನ್ನು ಹಿಂದುಸ್ಥಾನಿ ಸಂಗೀತದಲ್ಲಿ ಶ್ರೇಷ್ಠಗಾಯಕಿಯನ್ನಾಗಿ ಮಾಡಲು ಅಬ್ದುಲ್ ಕರಿಮ್ ಖಾನ್ ಅವರಿಂದ ಗಂಗೂಬಾಯಿ ಹಾನಗಲ್ ಹಿಂದುಸ್ಥಾನಿ ಸಂಗೀತ ತರಬೇತಿ ನೀಡಿದ್ದಾಗಿ ಅವರು ತಿಳಿಸದರು.
ಇಂದು ಕತ್ತಲಾದರೆ ಹೆಣ್ಣು ಮಕ್ಕಳನ್ನು ತಂದೆ-ತಾಯಿಗಳು ಮನೆಯಿಂದ ಹೊರ ಹೋಗಲು ಬಿಡುವುದೇ ಕಡಿಮೆ. ಅಂತಹದರಲ್ಲಿ ನೂರು ವರ್ಷದ ಹಿಂದೆಯೇ ಗಂಗೂಬಾಯಿ ಹಾನಗಲ್ ಅವರು ಮೂರು ವರ್ಷ ಸತತವಾಗಿ ಹುಬ್ಬಳ್ಳಿಯಿಂದ ಕುಂದುಗೋಳಕ್ಕೆ 22 ಕಿ.ಮೀ ರೈಲಿನಲ್ಲಿ ಹೋಗಿ ಹಿಂದುಸ್ಥಾನಿ ಸಂಗೀತ ಕಲಿತರು. ಇಂದು ಕೆಲವರು ಸಂಗೀತ ಕಲಿಬೇಕು ಎಂದು ಪೋನ್ ಮಾಡುತ್ತಾರೆ. ಬನ್ನಿ ಎಂದರೆ ನಿಮ್ಮ ಮನೆ ದೂರ, ಸಂಗೀತ ಕಾರ್ಯಕ್ರಮ ನಮಗೆ ಹತ್ತಿರವಿದ್ದಾಗ ಹೇಳಿ ಬರುತ್ತೇವೆ, ಎಂಬ ಅಸಡ್ಡೆ ತೋರುತ್ತಾರೆ ಎಂದರು.ಡಾ.ಗಂಗೂಬಾಯಿ ಹಾನಗಲ್ ಅವರ ಮೊಮ್ಮಗಳಾಗಿ ಹುಟ್ಟಿರುವುದು ನನ್ನ ಸೌಭಾಗ್ಯ. ನಾನು ಹಿಂದೆ ಇದೇ ವಿಶ್ವವಿದ್ಯಾನಿಲಯದಲ್ಲಿ ಕಾರ್ಯನಿರ್ವಹಿಸುವಾಗ ಯಾರೋ ಒಬ್ಬರು, ನಮ್ಮ ಅಜ್ಜಿಯ ಭಾವಚಿತ್ರಕ್ಕೆ ಒಂದು ದಿನವು ಹಾರಹಾಕಿದ್ದು ನಾನು ನೋಡಲೇ ಇಲ್ಲ. ನಾನೇ ಖುದ್ದಾಗಿ ನಿಂತು ಸಣ್ಣ ಮಟ್ಟದಲ್ಲಿ ಅವರ ಜನ್ಮದಿನ ಆಚರಿಸುತಿದ್ದೆ ಎಂದರು. ಆದರೆ ಇಂದು ದೊಡ್ಡ ಮಟ್ಟದಲ್ಲಿ ಗಂಗೂಬಾಯಿ ಹಾನಗಲ್ ಅವರ ಜನ್ಮದಿನೋತ್ಸವ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.
ಅವರ ಹೆಸರಿನಲ್ಲಿ ಹುಬ್ಬಳ್ಳಿಯಲ್ಲಿ ಒಂದು ಗುರುಕುಲ, ಮೈಸೂರಿನಲ್ಲಿ ಒಂದು ವಿಶ್ವವಿದ್ಯಾನಿಲಯವಾಗಿದೆ. ಅವರ ಸಾಧನೆಗೆ ದೇವರು ನೀಡಿರುವ ಅನುಗ್ರಹ ಇದಿರಬೇಕು ಎಂದು ಅಭಿಪ್ರಾಯಪಟ್ಟರು.ಮೈಸೂರಿನ ಕೊನೆಯ ರಾಜರಾಗಿದ್ದ ಜಯಚಾಮರಾಜ ಒಡೆಯರ್ ಅವರನ್ನು ಸ್ಮರಿಸಬೇಕು. ರಾಜರು ತಮ್ಮ ಆಸ್ಥಾನದಲ್ಲಿ ವಿದ್ವಾಂಸ ಅಬ್ದುಲ್ ಕರಿಮ್ ಖಾನ್ ಅವರನ್ನು ಆಸ್ಥಾನದ ಗಾಯಕರಾಗಿ ನೇಮಿಸಿಕೊಂಡಿದ್ದರು. ಕರಿಮ್ ಖಾನ್ ಅವರು ಧಾರವಾಡಕ್ಕೆ ಆಗಮಿಸಿದ್ದರು, ಅವರಿಂದಾಗಿ ಇಂದಿಗೂ ಹುಬ್ಬಳ್ಳಿ, ಧಾರವಾಡದ ಮನೆ ಮನೆಯಲ್ಲೂ ನೂರಾರು ಹಿಂದುಸ್ಥಾನಿ ಗಾಯಕರು ಹುಟ್ಟಿಕೊಳ್ಳಲು ಕಾರಣವಾಗಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.
ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಬೇಕಾದರೆ ಒಳ್ಳೆಯ ಗುರುವನ್ನು ಆಯ್ಕೆ ಮಾಡಿಕೊಳ್ಳಬೇಕು. ಜೀವನದಲ್ಲಿ ಮೊದಲ ಆಯ್ಕೆ ಒಳ್ಳೆಯ ಗುರು ಅವರಿಂದ ಜೀವನದ ಕೊನೆಯ ಕ್ಷಣದವರೆಗೂ ಹೊಸದನ್ನು ಏನಾದರೂ ಕಲಿಯುವಂತಾಗಬೇಕು. ಮುಂದೆ ಸಾಧನೆಗೆ ದಾರಿ ತಾನಾಗೆ ಕಾಣಿಸುತ್ತದೆ. ಸಮಯ ಕಳೆದರೆ ಮತ್ತೆ ಬರುವುದಿಲ್ಲ. ವಿದ್ಯಾರ್ಥಿ ದೆಸೆಯಲ್ಲಿ ಚೆನ್ನಾಗಿ ಕಲಿಕೆಗೆ ಒತ್ತು ನೀಡಿ ಎಂದು ವಿದ್ಯಾರ್ಥಿಗಳಿಗೆ ಅವರು ಕಿವಿಮಾತು ಹೇಳಿದರು.ಇಂದಿನ ಯುವ ಸಮೂಹ ಸಾಧನೆಯ ಹಾದಿ ಬೆನ್ನೇರಿ, ಸಾಂಸಾರಿಕ ಜೀವನಕ್ಕೆ ಹೆದರಿ, ಮದುವೆಯಾಗುದನ್ನೇ ತ್ಯಜಿಸುತಿದ್ದಾರೆ. ಜೀವನದಲ್ಲಿ ಯಾರಿಗೆ ರಸಿಕತೆ, ಉಲ್ಲಾಸ ಇರುವುದಿಲ್ಲವೋ ಅಂತಹವರಿಗೆ ಜೀವನವೇ ಬೇಸರ ಆಗಿರುತ್ತದೆ. ಇದರಿಂದ ಯಾವುದೇ ಕಲೆಯಲ್ಲಿ ಸತ್ವ ಇರುವುದಿಲ್ಲ ಎಂದರು.
ಕಾವಾ ಛಾಯಚಿತ್ರ ವಿಭಾಗದ ಮುಖ್ಯಸ್ಥ, ಶಿಲ್ಪಕಲಾ ವಿಭಾಗದ ಉಪನ್ಯಾಸಕ ವೀರಣ್ಣ ಎಂ. ಅರ್ಕಸಾಲಿ ಮಾತನಾಡಿ, ಡಾ. ಗಂಗೂಬಾಯಿ ಹಾನಗಲ್ ಅವರ 112ನೇ ಜನ್ಮದಿನೋತ್ಸವ ಆಚರಣೆ ಬಹಳ ಸಂತೋಷದ ವಿಷಯ. ಗಂಗೂಬಾಯಿ ಹಾನಗಲ್ ಅಮ್ಮನವರನ್ನು ಹಲವು ಭಾರಿ ಭೇಟಿ ಮಾಡಿದ್ದೆ. ಅವರ ನನ್ನ ನಡುವೆ ಉತ್ತಮವಾದ ಭಾಂದವ್ಯ ಇತ್ತು. ಅಮ್ಮನ ಶಿಷ್ಯರಾಗಿದ್ದ ನಾಗರಾಜ ಒಡೆಯರ್ ಅವರ ಬಳಿ ನನ್ನ ತಂಗಿಯನ್ನ ಸಂಗೀತ ಅಭ್ಯಾಸಕ್ಕೆ ಕರೆದುಕೊಂಡು ಹೋಗುತಿದ್ದೆ. ಆಗ ನನಗೆ 20ವರ್ಷ ವಯಸ್ಸು. ಆಗಿನಿಂದಲೂ ಅವರನ್ನು ನೋಡಿಕೊಂಡು ಅವರ ಸಂಗೀತ ಕೇಳುತ್ತ ಬೆಳೆದಿದ್ದೇನೆ. ಸಾಂಸ್ಕೃತಿಕ ನಗರವಾಗಿರುವ ಮೈಸೂರಿನಲ್ಲಿ ಡಾ. ಗಂಗೂಬಾಯಿ ಹಾನಗಲ್ ಅವರ ಹೆಸರಿನಲ್ಲಿ ವಿಶ್ವವಿದ್ಯಾನಿಲಯವಿರುವುದು ನಮ್ಮ ಸೌಭಾಗ್ಯ ಎಂದು ಅವರು ಸಂತಸ ವ್ಯಕ್ತಪಡಿಸಿದರು.ಬಳಿಕ ವಿದುಷಿ ವೈಷ್ಣವಿ ಹಾನಗಲ್ ಅವರಿಂದ ಹಾಗೂ ವಿಶ್ವವಿದ್ಯಾನಿಲಯದ ಬೋಧಕರು ಮತ್ತು ವಿದ್ಯಾರ್ಥಿಗಳಿಂದ ಹಿಮದುಸ್ಥಾನಿ ಗಾಯನ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯ ಕುಲಪತಿ ಪ್ರೊ. ನಾಗೇಶ್ ವಿ. ಬೆಟ್ಟಕೋಟೆ, ಕುಲಸಚಿವೆ ಕೆ.ಎಸ್.ರೇಖಾ, ಪರೀಕ್ಷಾಂಗ ಕುಲಸಚಿವ ಡಾ.ಎಂ.ಜಿ. ಮಂಜುನಾಥ್ ಇದ್ದರು.