ಮಾತೆಯರಲ್ಲಿ ಶ್ರೀ, ವಾಕ್, ಸ್ಮೃತಿ, ಮೇಧಾ, ಧೃತಿ, ಕ್ಷಮ ಕೀರ್ತಿ ಹೀಗೆ ಏಳು ಶಕ್ತಿಗಳು ಸಂಗಮವಾಗಿರುತ್ತವೆ. ಹೀಗಾಗಿ ಜಗತ್ತಿನಲ್ಲಿ ಮಾತೃ ಶಕ್ತಿ ದೊಡ್ಡದು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಹಿಳಾ ಸಮನ್ವಯ ಪ್ರಾಂತ ಸಹ ಸಂಯೋಜಕಿ ಸುನಿತಾರಾಣಿ ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಕೊಲ್ಹಾರ

ಮಾತೆಯರಲ್ಲಿ ಶ್ರೀ, ವಾಕ್, ಸ್ಮೃತಿ, ಮೇಧಾ, ಧೃತಿ, ಕ್ಷಮ ಕೀರ್ತಿ ಹೀಗೆ ಏಳು ಶಕ್ತಿಗಳು ಸಂಗಮವಾಗಿರುತ್ತವೆ. ಹೀಗಾಗಿ ಜಗತ್ತಿನಲ್ಲಿ ಮಾತೃ ಶಕ್ತಿ ದೊಡ್ಡದು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಹಿಳಾ ಸಮನ್ವಯ ಪ್ರಾಂತ ಸಹ ಸಂಯೋಜಕಿ ಸುನಿತಾರಾಣಿ ಪಾಟೀಲ ಹೇಳಿದರು.

ಪಟ್ಟಣದಲ್ಲಿ ಮಂಗಳವಾರ ವಿದ್ಯಾಭಾರತಿ ಕರ್ನಾಟಕ ವಿಜಯಪುರ ಜಿಲ್ಲೆ ಹಾಗೂ ಸಂಗಮೇಶ್ವರ ಶಿಶು ವಿಹಾರ ಹಾಗೂ ಹಿರಿಯ ಪ್ರಾಥಮಿಕ ಶಾಲೆಯ ಸಹಯೋಗದಲ್ಲಿ ಹಮ್ಮಿಕೊಂಡ ಮಾತೆಯರಿಗಾಗಿ ಸಪ್ತಶಕ್ತಿ ಸಂಗಮ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಮಾಯಣ, ವೇದಗಳ ಕಾಲದಿಂದಲೂ ಮಹಿಳೆಯರಿಗೆ ಅಪಾರ ಗೌರವವಿದೆ. ಋಷಿಗಳು ಹೇಗೆ ಇದ್ದರೂ ಋಷಿಮನಿಗಳು ಕೂಡಾ ಇದ್ದರು.ರಣರಂಗದಲ್ಲಿ ಕತ್ತಿ ಹಿಡಿದು ಹೋರಾಡಿದವರು ವೀರಾಂಗಣೀಯರು. ನಮ್ಮಲ್ಲಿ ಲಿಂಗ ತಾರತಮ್ಯವಿಲ್ಲ, ಭಾರತೀಯ ಮಹಿಳೆ ಯುದ್ಧಕ್ಕೂ, ಜ್ಞಾನವನ್ನು ಹಂಚಿಲಿಕ್ಕೂ ಸೈ ಆಗಿದ್ದವಳು. ಆದರೆ, ವಿದೇಶಿ ಮಹಿಳೆಯರಲ್ಲಿ ಯಾರು ಕೂಡಾ ಶಸ್ತ್ರ ಹಿಡಿದು ಯುದ್ಧವಾಗಲಿ, ಜ್ಞಾನವನ್ನು ಹಂಚುವುದಾಗಲಿ ಮಾಡಿಲ್ಲ ಎಂದರು.ಹಿಂದೂ ಎಂದರೇ ಸ್ವಂತಕ್ಕೆ ಏನೂ ಇಲ್ಲ ಎಂದರ್ಥ. ಹೆಣ್ಣು ಕ್ಷಮಾ ದರಿತ್ರೆ ಅವಳು ಹೀಗಾಗಿ ಹಿರಿಯರು ಭೂಮಿಗೆ ಮಾತೃ ಭೂಮಿ ಎಂದರು. ವಿದ್ಯಾಭಾರತಿ ಶಾಲೆಯಲ್ಲಿ ಕಲಿಯುವ ಮಕ್ಕಳಲ್ಲಿ ಸಂಸ್ಕಾರ ಹಾಗೂ ಸಂಸ್ಕೃತಿ ಕಾಣಬಹುದು. ಇಂದಿನ ಮಹಿಳೆಯರು ಧಾರವಾಹಿ ಹಾಗೂ ಮೊಬೈಲ್‌ನಲ್ಲಿ ಕಾಲ ಕಳೆಯುತ್ತಿರುವುದರಿಂದ ಮಕ್ಕಳೋಂದಿಗೆ ಮಮತೆಯಿಂದ ಬದಕುವುದು ಕಡಿಮೆಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.ಜಿಲ್ಲಾ ಶಿಶು ವಾಟಿಕಾ ಹಾಗೂ ಮಾತೃ ಭಾರತಿ ಪ್ರಮುಖಿ ಶಾಂತಾ ಮಾತಾಜಿ ಮಾತನಾಡಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ನೂರು ವರ್ಷ ತುಂಬಿದ ಹಿನ್ನೆಲೆಯಲ್ಲಿ ಸಂಘದ ಶತಾಬ್ಧಿ ಅಂಗವಾಗಿ ಜಿಲ್ಲೆಯಾದ್ಯಂತ ವಿದ್ಯಾಭಾರತಿ ಅಡಿಯಲ್ಲಿ ಮಾತೆಯರಿಗಾಗಿ ಸಪ್ತಶಕ್ತಿ ಸಂಗಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದರ ಉದ್ದೇಶ ಸಮೃದ್ಧ ಭಾರತಕ್ಕಾಗಿ ಸಪ್ತ ಶಕ್ತಿಗಳನ್ನು ಜಾಗೃತಗೊಳಿಸಿಕೊಳ್ಳುವುದು ಮತ್ತು ಸಾಮಾಜಿಕ ಪರಿವರ್ತನೆಯನ್ನು ಮಾಡುವ ಸಂಕಲ್ಪವಾಗಿದೆ. ಈ ಕಾರ್ಯಕ್ರಮದ ಮೂಲಕ ನಾವೆಲ್ಲರೂ ಸ್ವಾವಲಂಬಿಗಳಾಗಿ ಮಾತೃ ಮಂಡಳಿ ಮೂಲಕ ಶಕ್ತಿಯನ್ನು ತೋರಿಸುವುದಾಗಿದೆ ಎಂದರು.ಕಾರ್ಯಕ್ರಮದಲ್ಲಿ ಶ್ರೀ, ವಾಕ್, ಸ್ಮೃತಿ, ಮೇಧಾ, ಧೃತಿ, ಕ್ಷಮ ಕೀರ್ತಿ ಹೀಗೆ ಏಳು ಶಕ್ತಿಯನ್ನು ಬಿಂಬಿಸುವ ದೇವಿ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿತ್ತು. ಶಾಲೆಯ ಬಾಲಕಿಯರು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹಿಳೆಯರ ವೇಷಭೂಷಣಗಳನ್ನು ಧರಿಸಿ ವೇದಿಕೆ ಮೇಲೆ ರಾರಾಜಿಸಿದರು.ಈ ವೇಳೆ ಮಾತೃ ಮಂಡಳಿ ಹಿರಿಯ ಸದಸ್ಯರಾದ ನಿರ್ಮಲಾ ಶೀಲವಂತ, ವಿದ್ಯಾವತಿ ಔರಸಂಗ, ಶಾಂತಕ್ಕ ಹರನಟ್ಟಿ, ಬೋರಮ್ಮ ಪತಂಗಿ ಮಾತನಾಡಿದರು. ಸಂಗಮೇಶ್ವರ ವಿ ವ ಸಂಘದ ನಿರ್ದೇಶಕಿ ಸುನಂದಾಬಾಯಿ ಗಿಡ್ಡಪ್ಪಗೋಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಶಿಕ್ಷಕಿ ವೈಷ್ಣವಿ ಕುಲಕರ್ಣಿ ಇದ್ದರು. ಕಾರ್ಯಕ್ರಮದಲ್ಲಿ ನೂರಕ್ಕೂ ಅಧಿಕ ಮಾತೆಯರು ಭಾಗವಹಿಸಿದ್ದರು. ಶೈಲಾ ಬಿರಾದಾರ ಮಾತೆಯರಿಗೆ ಸಂಕಲ್ಪ ಬೋಧಿಸಿದರು. ನಿಂಗಮ್ಮ ಜೈನಾಪೂರ ಪ್ರಾರ್ಥಿಸಿದರು. ಪ್ರಿಯಾ ಕಾಖಂಡಕಿ ಸ್ವಾಗತಿಸಿದರು. ಶೃತಿ ಬೀಳಗಿ ವಂದಿಸಿದರು. ಯಶೋಧಾ ಗಡ್ಡಿ ಕಾರ್ಯಕ್ರಮ ನಡೆಸಿಕೊಟ್ಟರು.