ಸಾರಾಂಶ
ಮಗುವಿಗೆ ಎದೆ ಹಾಲು ನೀಡುವುದರಿಂದ ಸೌಂದರ್ಯ ಹಾಳಾಗುತ್ತದೆ ಎಂಬ ತಪ್ಪು ಕಲ್ಪನೆ ಅನೇಕ ಮಹಿಳೆಯರಿಗಿದೆ. ಇದು ಸರಿಯಲ್ಲ.
ನರಸಿಂಹರಾಜಪುರ: ತಾಯಿಯ ಎದೆ ಹಾಲು ಅಮೃತಕ್ಕೆ ಸಮಾನ ಎಂದು ಮೆಣಸೂರು ಗ್ರಾಮ ಪಂಚಾಯಿತಿ ಸದಸ್ಯ ಶ್ರೀನಾಥ್ ತಿಳಿಸಿದರು. ಅವರು ಶನಿವಾರ ಅಳಲಗೆರೆಯ ಅಂಗನವಾಡಿ ಕೇಂದ್ರದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಆರೋಗ್ಯ ಇಲಾಖೆಯ ಸಲಹೆಯಂತೆ ಮಗು ಹುಟ್ಟಿದ ತಕ್ಷಣ ತಾಯಿ ಎದೆ ಹಾಲು ನೀಡಬೇಕು, ಸಮಯಕ್ಕೆ ಸರಿಯಾಗಿ ಮಗುವಿಗೆ ಲಸಿಕೆ ನೀಡಬೇಕು. ಮಗು ಆರೋಗ್ಯವಾಗಿ ಬೆಳೆಯಬೇಕಾದರೆ ಮಗುವಿಗೆ ಎದೆ ಹಾಲು ಅವಶ್ಯಕವಾಗಿದೆ. ವಿಶ್ವಸ್ತನ್ಯಪಾನ ಸಪ್ತಾಹ ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯವರು ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ಎಲ್ಲಾ ಮಾಹಿತಿ ನೀಡುತ್ತಿದ್ದಾರೆ. ಈ ಭಾಗದ ಆಶಾ ಕಾರ್ಯಕರ್ತೆ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಮನೆ ಮನೆಗೆ ಹೋಗಿ ಆರೋಗ್ಯದ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ ಎಂದು ತಿಳಿಸಿದರು.
ಮುತ್ತಿನಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ವಿನಯ್ ಸ್ತನ್ಯಪಾನ ಮಹತ್ವದ ಬಗ್ಗೆ ಮಾಹಿತಿ ನೀಡಿ, ಮಗುವಿಗೆ ಎದೆ ಹಾಲು ನೀಡುವುದರಿಂದ ಸೌಂದರ್ಯ ಹಾಳಾಗುತ್ತದೆ ಎಂಬ ತಪ್ಪು ಕಲ್ಪನೆ ಅನೇಕ ಮಹಿಳೆಯರಿಗಿದೆ. ಇದು ಸರಿಯಲ್ಲ. ಮಗುವಿಗೆ ಎದೆ ಹಾಲು ಕುಡಿಸುವುದರಿಂದ ಮಗುವಿನಲ್ಲಿ ರೋಗ ನಿರೋಧಕ ಶಕ್ತಿ ಉಂಟಾಗಲಿದೆ. ಅಲ್ಲದೆ ಮಹಿಳೆಯರಿಗೆ ಎದೆ ಕ್ಯಾನ್ಸರ್ ಬರುವುದಿಲ್ಲ ಎಂದರು. ಅತಿಥಿಗಳಾಗಿ ಮೆಣಸೂರು ಗ್ರಾಮ ಪಂಚಾಯಿತಿ ಸದಸ್ಯೆ ಬಿಂದು, ಸಮುದಾಯ ಆರೋಗ್ಯ ಅಧಿಕಾರಿ ರಾಹೇಲ,ಅಳಲಗೆರೆ ಅಂಗನವಾಡಿ ಕಾರ್ಯಕರ್ತೆ ಸಾರಮ್ಮ, ದ್ವಾರಮಕ್ಕಿ ಅಂಗನವಾಡಿ ಕಾರ್ಯಕರ್ತೆ ಸುನಂದಮ್ಮ, ಆಶಾ ಕಾರ್ಯಕರ್ತೆ ವೇದಾವತಿ ಹಾಗೂ ಗರ್ಭಿಣಿಯರು ಇದ್ದರು.