ಯೋಚನಾ ಸಾಮರ್ಥ್ಯ, ಆತ್ಮವಿಶ್ವಾಸ ವೃದ್ಧಿಗೆ ಮಾತೃಭಾಷಾ ಶಿಕ್ಷಣ ಮಾಧ್ಯಮ ಅಗತ್ಯ

| Published : Apr 07 2024, 01:51 AM IST

ಯೋಚನಾ ಸಾಮರ್ಥ್ಯ, ಆತ್ಮವಿಶ್ವಾಸ ವೃದ್ಧಿಗೆ ಮಾತೃಭಾಷಾ ಶಿಕ್ಷಣ ಮಾಧ್ಯಮ ಅಗತ್ಯ
Share this Article
  • FB
  • TW
  • Linkdin
  • Email

ಸಾರಾಂಶ

ವಿದ್ಯಾಗಿರಿಯ ಕೆ.ವಿ.ಸುಬ್ಬಣ್ಣ ರಂಗಮಂದಿರದಲ್ಲಿ ಶನಿವಾರ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ 22ನೇ ಘಟಿಕೋತ್ಸವದಲ್ಲಿ 10 ಕಾಲೇಜುಗಳ 2023- 24ನೇ ವರ್ಷದ 2,023 ವಿದ್ಯಾರ್ಥಿಗಳ ಪದವಿ ಪ್ರದಾನ ಸಮಾರಂಭ ನಡೆಯಿತು.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ವಿದ್ಯಾರ್ಥಿಗಳಿಗೆ ಪ್ರಾದೇಶಿಕ ಭಾಷೆಯಲ್ಲೇ ಶಿಕ್ಷಣ ನೀಡಿ, ಅವರ ಭಾಷೆಯಲ್ಲೇ ಸಂವಹನ ನಡೆಸಿದಾಗ ಅವರ ಯೋಚನಾ ಸಾಮರ್ಥ್ಯ ಹಾಗೂ ಆತ್ಮವಿಶ್ವಾಸ ಹೆಚ್ಚಿಸಿದಂತಾಗುತ್ತದೆ. ಅಂತಹ ವಿದ್ಯಾರ್ಥಿಗಳಿಂದ ಉನ್ನತ ಸಾಧನೆ ಸಾಧ್ಯ. ಇದಕ್ಕಾಗಿ ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ (ಎಐಸಿಟಿಇ ) ಪ್ರಾದೇಶಿಕ ಭಾಷೆಯಲ್ಲಿ ತಾಂತ್ರಿಕ ಶಿಕ್ಷಣ ನೀಡುವ ಪಠ್ಯಕ್ರಮ, ಪಠ್ಯಪುಸ್ತಕ ಸಹಿತ ಪ್ರೋತ್ಸಾಹಿಸಲು ಆರಂಭಿಸಿದೆ ಎಂದು ನವದೆಹಲಿಯ ಎಐಸಿಟಿಇ ಅಧ್ಯಕ್ಷ ಪ್ರೊ.ಟಿ. ಜಿ. ಸೀತಾರಾಮ್ ಹೇಳಿದರು.

ಇಲ್ಲಿನ ವಿದ್ಯಾಗಿರಿಯ ಕೆ.ವಿ.ಸುಬ್ಬಣ್ಣ ರಂಗಮಂದಿರದಲ್ಲಿ ಶನಿವಾರ ನಡೆದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ 22ನೇ ಘಟಿಕೋತ್ಸವದಲ್ಲಿ 10 ಕಾಲೇಜುಗಳ 2023- 24ನೇ ವರ್ಷದ 2,023 ವಿದ್ಯಾರ್ಥಿಗಳ ಪದವಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ದೇಶದ 3 ಸಾವಿರಕ್ಕೂ ಅಧಿಕ ಕಾಲೇಜುಗಳಲ್ಲಿ 1.25 ಮಿಲಿಯನ್ ವಿದ್ಯಾರ್ಥಿಗಳು ಎಂಜಿನಿಯರಿಂಗ್ ಪದವೀಧರರಾಗುತ್ತಿದ್ದಾರೆ. ತಂತ್ರಜ್ಞಾನದ ಶಕ್ತಿಯೆದುರು ಯಶಸ್ಸು ಕಾಣಲು ವಿಶೇಷವಾಗಿ ಶಿಕ್ಷಕರು ನಿರಂತರ ಅಪ್ಗ್ರೇಡ್‌ ಆಗಬೇಕು. ವಿದ್ಯಾರ್ಥಿಗಳು ಉದ್ಯೋಗದ ಹಿಂದೆ ಓಡದೆ ಸಂಶೋಧಕರಾಗಿ, ಉದ್ಯೋಗದಾತರಾಗಬೇಕು. ವಿಮರ್ಶಾತ್ಮಕ ದೃಷ್ಟಿಕೋನ ಬೆಳೆಸಿಕೊಳ್ಳಿ. ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.

ಭಾರತೀಯರ ಕಾಲ: ನಾವು ಜಗತ್ತಿಗೆ ಶೂನ್ಯದಿಂದ ಪ್ಲಾಸ್ಟಿಕ್ ಸರ್ಜರಿ ತನಕದ ವಿದ್ಯೆ ನೀಡಿದ್ದೇವೆ. ‘ಭಾರತೀಯ ಎಂಬ ಹೆಮ್ಮೆ ಇರಲಿ ಎಂದ ಅವರು, ಶಾಲೆಗೆ ಸೇರಿದ100 ರಲ್ಲಿ 28 ವಿದ್ಯಾರ್ಥಿಗಳು ಮಾತ್ರ ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ. ಇದು ಶೇ.50 ಕ್ಕೆ ಹೆಚ್ಚಬೇಕು ಎಂದರು.

ದೇಶದಲ್ಲಿ ಪ್ರತಿ ವರ್ಷ ಐದು ಮಿಲಿಯ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕೆ ಹಂಬಲಿಸುತ್ತಾರೆ. ಕೌಶಲವನ್ನು ಪದವಿಯಲ್ಲೇ ಪಡೆಯಬೇಕು. ಬಳಿಕ ಅಲ್ಲ. ಇದು ತಂತ್ರಜ್ಞಾನದ ಯುಗ. ನಿಮಗೆ ಹಲವು ಸವಾಲುಗಳಿವೆ. ಇಲ್ಲಿನ ಕಲಿಕೆ ನಿಮಗೆ ನೆರವಾಗಲಿದೆ. ನಿರಂತರವಾಗಿ ಜ್ಞಾನ, ಕೌಶಲದ ಉನ್ನತೀಕರಣ ಅವಶ್ಯ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಪ್ರೊ.ಟಿ. ಜಿ. ಸೀತಾರಾಮ್ ಅವರ ಪತ್ನಿ ಅನುರಾಧಾ ಸೀತಾರಾಮ್ , ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ, ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ, ಡಾ.ವಿನಯ್ ಆಳ್ವ, ಆಳ್ವಾಸ್ ಫಿಸಿಯೋಥೆರಪಿ, ನರ್ಸಿಂಗ್ , ಆಯುರ್ವೇದ , ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ, ಹೋಮಿಯೋಪತಿ ,ಸಂಯುಕ್ತ ಆರೋಗ್ಯ ವಿಜ್ಞಾನ, ಎಂಜಿನಿಯರಿಂಗ್ , ಪದವಿ ,ಶಿಕ್ಷಣ ಮಹಾವಿದ್ಯಾಲಯ ಮತ್ತು ಆಳ್ವಾಸ್ ದೈಹಿಕ ಶಿಕ್ಷಣ ಕಾಲೇಜುಗಳ ಪ್ರಾಂಶುಪಾಲರು ಉಪಸ್ಥಿತರಿದ್ದರು.

ಉಪನ್ಯಾಸ ರಾಜೇಶ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು. ಆಳ್ವಾಸ್ ಎಂಜಿನಿಯರಿಂಗ್ ಕಾಲೇಜು ಪ್ರಾಂಶುಪಾಲ ಡಾ.ಪೀಟರ್ ಫೆರ್ನಾಂಡಿಸ್ ಪದವಿ ಘೋಷಣೆ ಮಾಡಿದರು.

ದೃಷ್ಟಿಹೀನ ತ್ರಿವಳಿಗಳ ಪದವಿ ಸಾಧನೆ!ಹುಟ್ಟಿನಿಂದ ಬರೇ ಶೇ.10 ದೃಷ್ಟಿ ಸಾಮರ್ಥ್ಯ ಇದ್ದರೂ ಆತ್ಮವಿಶ್ವಾಸದಿಂದ ಕಲಿತು, ಆಳ್ವಾಸ್ ಕಾಲೇಜಿನಲ್ಲಿ ದತ್ತು ವಿದ್ಯಾರ್ಥಿಗಳಾಗಿ ಬಿ.ಕಾಂ ಪದವೀಧರರಾದ ಸಾಧಕ ವಿದ್ಯಾರ್ಥಿಗಳು ಎನ್ನುವ ಕೀರ್ತಿಗೆ ಜಿತೇಶ್, ಜೀವನ್, ಜಯೇಶ್‌ ಪಾತ್ರರಾಗಿದ್ಧಾರೆ. ಸುರತ್ಕಲ್ ಕೃಷ್ಣಾಪುರದ ವಿಶ್ವನಾಥ್ ಶೆಟ್ಟಿಗಾರ್ - ಊರ್ಮಿಳಾ ದಂಪತಿಯ ಈ ಮೂವರು ಮಕ್ಕಳು ಇದೀಗ ಸಿಎ ಪದವೀಧರರಾಗುವ ನಿಟ್ಟಿನಲ್ಲೂ ಮುನ್ನಡೆಯುತ್ತಿದ್ದಾರೆ.