3 ಮಕ್ಕಳಿಗೆ ವಿಷ ಕುಡಿಸಿ ಆತ್ಮಹತ್ಯೆಗೆ ಯತ್ನಿಸಿದ ತಾಯಿ

| Published : Oct 22 2024, 12:16 AM IST

3 ಮಕ್ಕಳಿಗೆ ವಿಷ ಕುಡಿಸಿ ಆತ್ಮಹತ್ಯೆಗೆ ಯತ್ನಿಸಿದ ತಾಯಿ
Share this Article
  • FB
  • TW
  • Linkdin
  • Email

ಸಾರಾಂಶ

ಗಂಡ ಹೆಂಡತಿಯ ನಡುವಿನ ಗಲಾಟೆ ವಿಕೋಪಕ್ಕೆ ಹೋಗಿ ಆತ್ಮಹತ್ಯೆಗೆ ಗೀತಾ ಯತ್ನ. ಕ್ಷುಲ್ಲಕ ಕಾರಣಗಳಿಗೆ ಗಂಡ-ಹೆಂಡತಿ ಮಧ್ಯೆ ಆಗಾಗ ಮಾತಿನ ಚಕಮಕಿ ನಡೆಯುತ್ತಿತ್ತು ಎನ್ನಲಾಗಿದೆ. ದಾರುಣ ಘಟನೆ ಜಿಲ್ಲೆಯ ಚಿಂಚೋಳಿ ತಾಲೂಕಿನ ಜಂಗ್ಲಿಪೀರ್ ತಾಂಡಾದಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಗಂಡ ಹೆಂಡತಿ ಮಧ್ಯೆ ಸಣ್ಣ ಮಾತಿನ ಚಕಮಕಿ ನಡೆದ ಬೆನ್ನಲ್ಲೇ ಸ್ವತಃ ತಾಯಿಯೇ ತನ್ನ ಮೂವರು ಮಕ್ಕಳಿಗೆ ತಂಪು ಪಾನೀಯದಲ್ಲಿ ವಿಷ ಬೆರೆಸಿ ಕುಡಿಸಿ, ತಾನೂ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ದಾರುಣ ಘಟನೆ ಜಿಲ್ಲೆಯ ಚಿಂಚೋಳಿ ತಾಲೂಕಿನ ಜಂಗ್ಲಿಪೀರ್ ತಾಂಡಾದಲ್ಲಿ ನಡೆದಿದೆ.

ಗೀತಾಬಾಯಿ ಸಂತೋಷ್ ರಾಠೋಡ್ (೩೦) ಗಂಡನ ಮೇಲಿನ ಸಿಟ್ಟಿಗೆ ಪ್ರತಿಯಾಗಿ ಬೆಳೆಗಳಿಗೆ ಸಿಂಪಡಿಸುವ ಕ್ರಿಮಿನಾಶಕ ಸೇವಿಸಿ ಮಕ್ಕಳಾದ ಚೈತನ್ಯ (೪) ಧನುಷ್ (೩) ಲಕ್ಷ್ಮಿ ಗೆ (ಒಂದುವರೆ ತಿಂಗಳು) ಇವರಿಗೂ ಅದನ್ನೇ ಕುಡಿಸಿದ್ದಾಳೆ.

ವಿಷ ಕುಡಿದ ಬಳಿಕ ಹೊಟ್ಟೆ ನೋವಿನಿಂದ ಚೀರಾಡುತ್ತಿದ್ದ ಮಕ್ಕಳನ್ನು ಕಂಡು ತಾಂಡಾದಲ್ಲಿನ ನೆರೆ ಹೊರೆಯವರು ಗಾಬರಿಯಾಗಿದ್ದಾರೆ. ತಕ್ಷಣ ತಾಂಡಾದ ಅಕ್ಕ ಪಕ್ಕದ ನಿವಾಸಿಗಳು ಗಂಡನಿಗೆ ವಿಷಯ ಮುಟ್ಟಿಸಿ ನೋವಿನಿಂದ ಒದ್ದಾಡುತ್ತಿದ್ದ ಮಕ್ಕಳನ್ನೆಲ್ಲ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಇವರೆಲ್ಲರೂ ಪಕ್ಕದ ಬೀದರ್‌ನ ಬ್ರಿಮ್ಸ್‌ನಲ್ಲಿ ದಾಖಲಾಗಿದ್ದು ಚಿಕಿತ್ಸೆ ಮುಂದುವರಿದಿದೆ. ಈ ಪೈಕಿ ಹಸುಗೂಸು ಲಕ್ಷ್ಮಿ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕ್ಷುಲ್ಲಕ ಕಾರಣಗಳಿಗೆ ಗಂಡ-ಹೆಂಡತಿ ಮಧ್ಯೆ ಆಗಾಗ ಮಾತಿನ ಚಕಮಕಿ ನಡೆಯುತ್ತಿತ್ತು ಎನ್ನಲಾಗಿದೆ. ಭಾನುವಾರ ಸಹ ಇದೇ ರೀತಿ ದಂಪತಿ ಮಧ್ಯೆ ಪರಸ್ಪರ ವಾಗ್ವಾದ ನಡೆದ ಬಳಿಕ ಸಂತೋಷ್ ಹೊರಗೆ ಕೆಲಸಕ್ಕೆ ತೆರಳಿದ ನಂತರ ಗೀತಾ ಗಂಡನ ಮೇಲಿನ ಸಿಟ್ಟಿನಿಂದ ಮನನೊಂದು ಇಂತಹ ಕೃತ್ಯ ಎಸಗಿದ್ದಾಳೆ ಎಂದು ಹೇಳಲಾಗುತ್ತಿದೆ.

ಬೀದರ್‌ ಆಸ್ಪತ್ರೆಯಲ್ಲಿ ಮುಂದುವರಿದ ಚಿಕಿತ್ಸೆ

ವಿಷ ಕುಡಿದ ಬಳಿಕ ತೀವ್ರ ಸ್ವರೂಪದ ಹೊಟ್ಟೆ ನೋವು ಹಾಗೂ ಅಸಹನೀಯ ಸಂಕಟದಿಂದ ಮಕ್ಕಳು ಚೀರಾಡುತ್ತಿರುವುದನ್ನು ಗಮನಿಸಿದ ನೆರೆಹೊರೆಯ ಮಂದಿ, ಗೀತಾ ತಾನೂ ವಿಷ ಕುಡಿದು ಮಕ್ಕಳಿಗೂ ವಿಷ ಕುಡಿಸಿರುವುದು ಗೊತ್ತಾಗುತ್ತಿದ್ದಂತೆಯೇ ಆಕೆಯ ಪತಿ ಸಂತೋಷನಿಗೆ ಮಾಹಿತಿ ತಲುಪಿಸಿ ತಕ್ಷಣ ತಾಯಿ-ಮಕ್ಕಳನ್ನು ಚಿಂಚೋಳಿಯ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಚಿಂಚೋಳಿ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಎಲ್ಲರನ್ನೂ ಬೀದರ್ ಸರ್ಕಾರಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.