ಮಾತೆಯರು ಪ್ರಕೃತಿಯ ಪ್ರತೀಕ

| Published : May 14 2024, 01:05 AM IST

ಸಾರಾಂಶ

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಭಾನ್ಕುಳಿಯಲ್ಲಿ ನಡೆಯುತ್ತಿರುವ ಶಂಕರ ಪಂಚಮೀ ಉತ್ಸವದ ಮಾತೃತ್ವಮ್ ಸಮಾವೇಶ, ದಾನಿಗಳಿಗೆ ದಾನಮಾನ ಅನುಗ್ರಹ ಕಾರ್ಯಕ್ರಮ ನಡೆಯಿತು.

ಸಿದ್ದಾಪುರ: ಮಾತೆಯರು ಪ್ರಕೃತಿಯ ಪ್ರತೀಕ. ಹೆಣ್ಣಿನ ವಾತ್ಸಲ್ಯ, ಅನುರಾಗಕ್ಕೆ ಬೆಲೆಕಟ್ಟಲಾಗದು. ಮಾತೆ ನಮ್ಮನ್ನು ಹೊಟ್ಟೆಯಲ್ಲಿ, ಮಡಿಲಲ್ಲಿ ಇಟ್ಟುಕೊಂಡು ಸಾಕಿ, ಸಲಹಿದ್ದಾಳೆ. ಇಂತಹ ಮಾತೆಯನ್ನು ತಲೆಯ ಮೇಲೆ ಇಟ್ಟುಕೊಂಡ, ಇಟ್ಟುಕೊಳ್ಳಬೇಕಾದ ಸಮಾಜ ನಮ್ಮದು ಎಂದು ರಾಮಚಂದ್ರಾಪುರಮಠದ ರಾಘವೇಶ್ವರ ಭಾರತೀ ಶ್ರೀಗಳು ಹೇಳಿದರು.

ಅವರು ತಾಲೂಕಿನ ಭಾನ್ಕುಳಿಯಲ್ಲಿ ನಡೆಯುತ್ತಿರುವ ಶಂಕರ ಪಂಚಮೀ ಉತ್ಸವದ ಮಾತೃತ್ವಮ್ ಸಮಾವೇಶದ ಸಾನ್ನಿಧ್ಯ ವಹಿಸಿ, ದಾನಿಗಳಿಗೆ ದಾನಮಾನ ಅನುಗ್ರಹಿಸಿ, ಆಶೀರ್ವಚನ ನೀಡಿದರು. ಶಾಸ್ತ್ರಗಳ ಪ್ರಕಾರ ತಾಯಿ, ಪತ್ನಿ ಸೇರಿದಂತೆ ಯಾವ ಸ್ತ್ರೀಯನ್ನೂ ನೋಯಿಸಬಾರದು ಎಂದಿದೆ. ಮನೆಯಲ್ಲಿ ಹೆಣ್ಣು ಕಣ್ಣೀರು ಹಾಕಿದರೆ ಆ ಮನೆ ಹಾಳಾಗುತ್ತದೆ ಎಂಬ ಮಾತಿದೆ. ರಾವಣ ಸತ್ತಿದ್ದು ರಾಮನ ಬಾಣದಿಂದಲ್ಲ, ಬದಲಿಗೆ ಸೀತೆಯ ವೇದನೆಯಿಂದ. ಸೀತೆಗಾದ ನೋವಿನಿಂದಲೇ ರಾವಣ ಸರ್ವನಾಶವಾಗಿದ್ದ, ಹತನಾಗಿದ್ದ ಎಂದು ಹಿರಿಯರು ವಿಶ್ಲೇಷಿಸಿದ್ದಾರೆ. ಭಾರತದ ಪರಿಭಾಷೆಯಲ್ಲಿ ಸ್ವಾತಂತ್ರ್ಯ ಎಂದರೆ ರಕ್ಷಣೆ ಎಂದರ್ಥ. ಸ್ತ್ರೀಯರನ್ನು ಕಾಪಾಡುವ ಹೊಣೆಗಾರಿಕೆ ಪುರುಷರ ಮೇಲಿದೆ. ಸ್ತ್ರೀಯರನ್ನು ಕೇವಲ ಭೋಗದ ವಸ್ತುವಾಗಿ ಕಾಣುವಂತಾಗಿದೆ. ಈ ವಾತಾವರಣ ಮರೆಯಾಗಬೇಕು, ಸ್ತ್ರೀಯರಿಗೆ ಮನೆ ಬೆಳಗಲು ಮುಕ್ತ ವಾತಾವರಣ ದೊರೆಯಬೇಕು ಎಂದರು.

ಮಾತೃತ್ವಮ್‌ನ ಪ್ರಮುಖರಾದ ಈಶ್ವರೀ ಶ್ಯಾಮ ಬೇರ್ಕಡವು ಮಾತನಾಡಿ, ಗುರುವಿನ ಆದೇಶದಂತೆ ಗೋಸೇವೆಯಲ್ಲಿ ತೊಡಗಿಕೊಂಡು ತಮಗಾದ ಅನುಭವವನ್ನು ಹಂಚಿಕೊಂಡರು. ನಾಗರತ್ನಾ ಗಜಾನನ ಶರ್ಮ ಅವಲೋಕನ ನಡೆಸಿಕೊಟ್ಟರು.