ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ನಮ್ಮನ್ನೆಲ್ಲ ಹೆತ್ತು, ಹೊತ್ತು, ಬೆಳೆಸಿ ವಿದ್ಯಾವಂತರನ್ನಾಗಿಸಿದ ತಾಯಿಗೆ ಜಗತ್ತಿನಲ್ಲಿಯೇ ಅತ್ಯಂತ ಪೂಜ್ಯನೀಯ ಸ್ಥಾನ ನೀಡಿರುವುದು ಭಾರತೀಯ ಸಂಸ್ಕೃತಿಯ ಹೆಮ್ಮೆಯ ಸಂಗತಿ ಎಂದು ಆರ್ಟ್ ಆಫ್ ಲಿವಿಂಗ್‌ನ ಡಾ.ಬಿ.ಎಂ.ಪಾಟೀಲ ಗುರೂಜಿ ನುಡಿದರು.ನಗರದ ಹೊರವಲಯದ ಕೃಷಿ ವಿಜ್ಞಾನ ಕೇಂದ್ರದಲ್ಲಿ ವಿಜಯಪುರ ಕೃಷಿ ವಿಜ್ಞಾನ ಕೇಂದ್ರ, ಜುವಾರಿ ರಸಗೊಬ್ಬರಗಳ ನಿಯಮಿತ ಹಾಗೂ ಭಾರತೀಯ ಹೈದರಾಬಾದನ ಸಿರಿಧಾನ್ಯ ಸಂಶೋಧನಾ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಜರುಗಿದ ಅಂತಾರಾಷ್ಟ್ರೀಯ ಮಹಿಳಾ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹೆಣ್ಣು ಸಂಸಾರದ ಕಣ್ಣು. ಇಂದು ಎಲ್ಲ ಕ್ಷೇತ್ರದಲ್ಲಿ ಗಂಡಿಗೆ ಸಮಾನವಾಗಿ ಮಹಿಳೆ ಬೆಳೆದಿದ್ದಾಳೆ. ಸಮಾಜದಲ್ಲಿ ತನ್ನದೇ ಆದ ಛಾಪು ಮೂಡಿಸಿ, ತಾನು ಯಾರಿಗೆ ಕಡಿಮೆ ಇಲ್ಲ ಎನ್ನುವುದನ್ನು ಸಾಬೀತುಪಡಿಸಿದ್ದಾಳೆ. ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಮತ್ತು ರಾಜಕೀಯವಾಗಿ ಸಾಧನೆ ಮಾಡಿರುವ ಮಹಿಳೆಯರನ್ನು ಗುರುತಿಸಿ ಸನ್ಮಾನಿಸಲಾಗುತ್ತಿದೆ. ಇಂದು ಕೃಷಿ ವಿಜ್ಞಾನ ಕೇಂದ್ರದವರು ಕೃಷಿ ಮತ್ತು ಕೃಷಿಯೇತರ ಚಟುವಟಿಕೆಗಳಲ್ಲಿ ಸಾಧನೆ ಮಾಡಿದ ರೈತ ಮಹಿಳೆ ಹಾಗೂ ಮಹಿಳಾ ಉದ್ಯಮಿಗಳನ್ನು ಸನ್ಮಾನಿಸುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಶ್ಲಾಘಿಸಿದರು.
ಸಹ ಸಂಶೋಧನಾ ನಿರ್ದೇಶಕ ಡಾ.ಎಸ್.ಬಿ.ಜಗ್ಗಿನ್ನವರ ಮಾತನಾಡಿ, ಎಲ್ಲ ರಂಗಗಳಂತೆ ಕೃಷಿ ರಂಗದಲ್ಲಿಯೂ ಮಹಿಳೆಯರು ಮಾಡಿರುವ ಸಾಧನೆ ಅಪಾರ. ಕೃಷಿಯ ಎಲ್ಲ ಚಟುವಟಿಕೆಗಳಲ್ಲಿ ಮಹಿಳೆಯರು ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ. ಅದಕ್ಕಾಗಿಯೇ ಆಹಾರ ಉತ್ಪಾದನೆಯಲ್ಲಿ ನಾವೆಲ್ಲ ಸ್ವಾವಲಂಬಿಗಳಾಗಿದ್ದೇವೆ ಎಂದು ಸ್ಮರಿಸಿದರು.ಸಹ ವಿಸ್ತರಣಾ ನಿರ್ದೇಶಕ ಡಾ.ರವೀಂದ್ರ ಬೆಳ್ಳಿ ಮಾತನಾಡಿ, ಪ್ರತಿ ವರ್ಷ ಮಹಿಳಾ ದಿನವನ್ನು ಒಂದು ಧ್ಯೇಯ ವಾಕ್ಯದೊಂದಿಗೆ ಆಚರಿಸಲಾಗುತ್ತಿದ್ದು, ಈ ಸಲದ ಥೀಮ್ ಕ್ರಿಯಾಶೀಲತೆಯಾಗಿದೆ. ಇದು ಮಹಿಳೆಯರ ಹಕ್ಕುಗಳು, ಸಮಾನತೆ ಮತ್ತು ಸಬಲೀಕರಣವನ್ನು ಆಧರಿಸಿದೆ. ಮಹಿಳೆಯರ ಜೀವನವನ್ನು ಸುಧಾರಿಸಲು ಮತ್ತು ಅವರ ಪ್ರಗತಿ ಮತ್ತು ಸಮಾನಾವಕಾಶಗಳನ್ನು ಕಲ್ಪಿಸಲು ಕ್ರಮಗಳನ್ನು ಕೈಗೊಳ್ಳುವಂತೆ ಪ್ರೇರೇಪಿಸುತ್ತಿರುವುದಾಗಿ ತಿಳಿಸಿದರು.
ಹಿರಿಯ ಕ್ಷೇತ್ರ ಅಧೀಕ್ಷಕ ಡಾ.ಆರ್.ಬಿ.ಜೊಳ್ಳಿ, ಮಹಿಳೆಯರಿಗಿರುವ ವಿಪುಲ ಅವಕಾಶಗಳು ಡಾ.ಎಸ್.ಎಸ್.ಕರಭಂಟನಾಳ ಸಿರಿಧಾನ್ಯಗಳ ಸಂಸ್ಕರಣೆ ಹಾಗೂ ಮೌಲ್ಯವರ್ಧನೆ, ಜುವಾರಿ ಪ್ರಾದೇಶಿಕ ವ್ಯವಸ್ಥಾಪಕ ಮಹೇಶ್ವರ ಹಿರೇಮಠ ಲಘುಪೋಷಕಾಂಶಗಳ ಮಹತ್ವ ಕುರಿತು ಮಾತನಾಡಿದರು.ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ.ಎಸ್.ಎಂ.ವಸ್ತ್ರದ ಪ್ರಾಸ್ತಾವಿಕವಾಗಿ ಮಾತನಾಡಿ, ಕೃಷಿ ವಿಜ್ಞಾನ ಕೇಂದ್ರದಲ್ಲಿ ಪ್ರತಿ ವರ್ಷ ಈ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಕೃಷಿಯಲ್ಲಿ ಅವಶ್ಯವಿರುವ ಕೃಷಿ ಸಲಕರಣೆಗಳನ್ನು ವಿತರಿಸಿ, ತಾಂತ್ರಿಕ ಜ್ಞಾನವನ್ನು ನೀಡಲಾಗುತ್ತಿದೆ ಎಂದರು.ಈ ಸಂದರ್ಭದಲ್ಲಿ ಪ್ರಗತಿಪರ ರೈತ ಮಹಿಳೆ ಸುನೀತಾ ರಾಠೋಡ, ಮಹಿಳಾ ಉದ್ಯಮಿ ಶ್ವೇತಾ ಗುನ್ನಾಳಕರ, ಪತ್ರಕರ್ತೆ ರಶ್ಮಿ ಪಾಟೀಲ, ಕಾರ್ಮಿಕ ಕಲ್ಯಾಣ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷೆ ನಿರ್ಮಲಾ ಪುರಾಣಿಕಮಠ ಅವರನ್ನು ಸನ್ಮಾನಿಸಲಾಯಿತು. ಅವರು ತಮ್ಮ ಸಾಧನೆಗೆ ನಡೆದು ಬಂದ ದಾರಿಯ ಕುರಿತು ತಮ್ಮ ಅನುಭವ ಹಂಚಿಕೊಂಡರು. ಈ ಸಂದರ್ಭದಲ್ಲಿ ರೈತ ಮಹಿಳೆಯರಿಗೆ ಸಿರಿಧಾನ್ಯ ಬೀಜ ಸಾಮಗ್ರಿ, ತರಕಾರಿ ಹಾಗೂ ಲಘುಪೋಷಕಾಂಶಗಳ ಕಿಟ್ ವಿತರಿಸಲಾಯಿತು.ಡಾ.ಕಿರಣ ಸಾಗರ.ಡಿ.ಸಿ, ಡಾ.ಶಿವರಾಜ ಕಾಂಬಳೆ, ಮುತ್ತಣ್ಣ ಬ್ಯಾಗೆಳ್ಳಿ, ರಾಜಶ್ರೀ ಹೊಸಮನಿ, ಈರವ್ವ ಆಹೇರಿ, ಸಾವಿತ್ರಿ ಮಾದರ, ಕಸ್ತೂರಿಬಾಯಿ ಚಲವಾದಿ, ಲಕ್ಷ್ಮೀ ಜೋಗಿನ, ಚಂದ್ರಶೇಖರ ಸಿಂದೂರ, ಶಾಂತಗೌಡ ಪಾಟೀಲ, ಮಾಳಪ್ಪ ಪೂಜಾರಿ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು. ಶ್ರೀಶೈಲ ರಾಠೋಡ ನಿರೂಪಿಸಿದರು. ಡಾ.ವಿಜಯಲಕ್ಷ್ಮೀ ಮುಂದಿನಮನಿ ಸ್ವಾಗತಿಸಿದರು, ಡಾ.ಶಿಲ್ಪಾ ಚೊಗಟಾಪುರ ವಂದಿಸಿದರು.