ಸಾರಾಂಶ
ಕನ್ನಡಪ್ರಭವಾರ್ತೆ ಸೋಮವಾರಪೇಟೆ
ವಿದ್ಯಾರ್ಜನೆಯೊಂದಿಗೆ ಕ್ರೀಡೆಯಲ್ಲಿಯೂ ಉತ್ತಮ ಆಸಕ್ತಿ ಬೆಳೆಸಿಕೊಂಡಲ್ಲಿ ಮಾತ್ರ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ ಎಂದು ಶಾಸಕ ಡಾ.ಮಂತರ್‌ಗೌಡ ಅಭಿಪ್ರಾಯ ಪಟ್ಟರು.ಭಾನುವಾರ ಪಟ್ಟಣದ ಜೂನಿಯರ್ ಕಾಲೇಜಿನ ಸಿಂಥೆಟಿಕ್ ಟರ್ಫ್ ಮೈದಾನದಲ್ಲಿ ಕಳೆದ ಒಂದು ತಿಂಗಳಿನಿಂದ ಡಾಲ್ಪಿನ್ಸ್ ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ನಡೆದ ಹಾಕಿ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮಕ್ಕಳ ಭವಿಷ್ಯ ರೂಪಿಸುವಲ್ಲಿ ತಾಯಂದಿರ ಪಾತ್ರ ಪ್ರಮುಖವಾದುದು. ತಾಯಂದಿರು ಮನಸು ಮಾಡಿದಲ್ಲಿ ಪ್ರತಿ ಮನೆಯಲ್ಲಿಯೂ ಉತ್ತಮ ಕ್ರೀಡಾಪಟು ಇಲ್ಲವೇ ಉನ್ನತ ಉದ್ಯೋಗ ಪಡೆಯಲು ಸಾಧ್ಯವಾಗುತ್ತದೆ. ರಾಜ್ಯ ಮತ್ತು ರಾಷ್ಟ್ರಮಟ್ಟದ ಹಾಕಿ ಪಂದ್ಯಾವಳಿಯನ್ನು ನಡೆಸಿದರೆ ಮಕ್ಕಳಲ್ಲಿ ಕ್ರೀಡೆಯ ಬಗ್ಗೆ ಹೆಚ್ಚು ಆಸಕ್ತಿ ಮೂಡುತ್ತದೆ. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ರಾಜ್ಯ ಅಥವಾ ರಾಷ್ಟ್ರಮಟ್ಟದ ಹಾಕಿ ಪಂದ್ಯಾವಳಿಯನ್ನು ಆಯೋಜಿಸಲು ಡಾಲ್ಫಿನ್ಸ್ ಸ್ಪೋರ್ಟ್ಸ್ ಕ್ಲಬ್‌ನೊಂದಿಗೆ ಕೈಜೋಡಿಸುವುದಾಗಿ ಭರವಸೆ ನೀಡಿದರು. ಭಾರತ ಹಾಕಿ ತಂಡದ ಮಾಜಿ ನಾಯಕ ಅರ್ಜುನ್ ಹಾಲಪ್ಪ ಮಾತನಾಡಿ, ತಮ್ಮ ಬಾಲ್ಯದ ದಿನಗಳಲ್ಲಿ ಟರ್ಫ್ ಮೈದಾನವಿರಲಿಲ್ಲ. ಅದರೆ ಈಗಿನ ಮಕ್ಕಳಿಗೆ ಅದರ ಅವಕಾಶ ಸಿಕ್ಕಿದೆ. ಹೀಗಾಗಿ ಹಾಕಿಯಲ್ಲಿ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.ಡಾಲ್ಫಿನ್ಸ್ ಕ್ಲಬ್‌ನ ಅಧ್ಯಕ್ಷ ಅಶೋಕ್ ಮಾತನಾಡಿ, 2010ರಲ್ಲಿ ಕ್ಲಬ್ ಆರಂಭವಾದಗಿನಿಂದ ಈವರೆಗೆ 130 ಕ್ಕೂ ಅಧಿಕ ಕ್ರೀಡಾಪಟುಗಳು ರಾಜ್ಯದ ವಿವಿಧ ಕ್ರೀಡಾ ಹಾಸ್ಟೆಲ್‌ಗಳಲ್ಲಿ ಸೇರಿ ತಮ್ಮ ಭವಿಷ್ಯವನ್ನು ರೂಪಿಸಿಕೊಂಡಿದ್ದಾರೆ. ಅಲ್ಲದೇ ಹತ್ತು ಹಲವು ರಾಜ್ಯ ಮತ್ತು ರಾಷ್ಟ್ರಮಟ್ಟದ ಆಟಗಾರರನ್ನು ರೂಪಿಸಿರುವ ಕೀರ್ತಿ ತಮ್ಮ ಸಂಸ್ಥೆಗಿದೆ. ಕೋವಿಡ್ ದಿನಗಳನ್ನು ಹೊರತುಪಡಿಸಿ ಪ್ರತಿವರ್ಷ ಶಿಬಿರ ಆಯೋಜಿಸಲಾಗಿದೆ ಎಂದು ಹೇಳಿದರು.
ಮೂಲತಃ ಸೋಮವಾರಪೇಟೆಯವರಾದ ಅಂತಾರಾಷ್ಟ್ರಿಯ ಹಾಕಿ ಆಟಗಾರ ವಿಕ್ರಂ ಕಾಂತ್, ಭಾರತ ಕಿರಿಯರ ಪುರುಷರ ಹಾಕಿ ತಂಡದ ಕೋಚ್ ಸಿ.ಬಿ.ಜನಾರ್ಧನ, ಆರ್ಮಿ ಹಾಗೂ ಸರ್ವಿಸಸ್ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸಿದ್ದ ಸಿ.ಬಿ.ದೇವದಾಸ್ ಅವರು ಶಿಬಿರಾರ್ಥಿಗಳಿಗೆ ಹಲವು ಸಲಹೆಗಳನ್ನು ನೀಡಿದರು.ಹಿರಿಯ ಹಾಕಿ ಆಟಗಾರರಾದ ಬಿ.ಕೆ.ಹಾಲಪ್ಪ, ಲಕ್ಷ್ಮೀಕಾಂತ್, ಡಾಲ್ಫಿನ್ಸ್ ಕ್ಲಬ್‌ನ ಕಾರ್ಯದರ್ಶಿ ಕೆ.ಎಸ್.ಪ್ರಕಾಶ್ ಮತ್ತು ಪದಾಧಿಕಾರಿಗಳು ಇದ್ದರು. ಶಿಬಿರದಲ್ಲಿ ಪಾಲ್ಗೊಂಡ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರವನ್ನು ಶಾಸಕರು ಮತ್ತು ಅತಿಥಿಗಳು ವಿತರಿಸಿದರು.