ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಅಪಾರ ಜ್ಞಾನ, ಸಾಹಿತ್ಯ ಸಂಪತ್ತನ್ನು ಹೊಂದಿರುವ ಸಂಸ್ಕೃತ ಭಾಷೆಯನ್ನು ಉಳಿಸಿ ಬೆಳೆಸುವ ಹೊಣೆಗಾರಿಕೆ ಇಡೀ ಸಮಾಜದ ಮೇಲಿದೆ. ನಮ್ಮ ಮಕ್ಕಳಿಗೆ ಸ್ಥಳೀಯ ಭಾಷೆಯ ಜತೆಗೆ ಸಂಸ್ಕೃತ ಭಾಷೆ ಅಧ್ಯಯನ್ನೂ ವ್ಯಾಸಂಗ ಮಾಡಲು ಪ್ರೇರೇಪಿಸುವ ಅಗತ್ಯವಿದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಹೇಳಿದರು.ನಗರದ ಪುರಭವನದಲ್ಲಿ ಶುಕ್ರವಾರ ನಡೆದ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ 10 ಮತ್ತು 11ನೇ ಘಟಿಕೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಂಸ್ಕೃತ ಭಾಷೆಯಲ್ಲಿ ಅಪಾರ ಜ್ಞಾನ, ಸಾಹಿತ್ಯ, ಪಾಂಡಿತ್ಯ ಅಡಗಿದೆ. ಅದನ್ನು ಈ ತಲೆಮಾರಿಗೆ ನೀಡುವ ಅಗತ್ಯವಿದೆ. ಸಂಸ್ಕೃತ ಕಲಿತರೆ ಎಲ್ಲ ಕಡೆ ಸಲ್ಲುವ ವಾತಾವರಣ ಇಲ್ಲ ಎನ್ನುವುದು ತಪ್ಪು ಕಲ್ಪನೆ. ಸಂಸ್ಕೃತ, ವೇದ ಅಧ್ಯಯನ ಮಾಡಿದವರು ಇಂಗ್ಲೀಷ್ ಭಾಷೆ ಅಧ್ಯಯನ ಮಾಡಿ ಅಂತಾರಾಷ್ಟ್ರೀಯ ಮನ್ನಣೆ ಗಳಿಸಬಹುದು. ಹಾಗಾಗಿ ಪೋಷಕರು ಮಕ್ಕಳಿಗೆ ಸಂಸ್ಕೃತ ಕಲಿಯುವ ಅವಕಾಶ ಕಲ್ಪಿಸಬೇಕು ಎಂದರು.
ಉನ್ನತ ಶಿಕ್ಷಣ ಸಚಿವ ಡಾ। ಎಂ.ಸಿ.ಸುಧಾಕರ್ ಮಾತನಾಡಿ, ಹಿಂದೆ ಕೆಲವರು ಮಾತ್ರ ಅಧ್ಯಯನ ಮಾಡಲು ಯೋಗ್ಯವಾದ ಭಾಷೆ ಎಂಬ ಹಣೆಪಟ್ಟಿ ನೀಡಿದ್ದ ಸಂಸ್ಕೃತವನ್ನು ಈಗ ಪ್ರತಿಯೊಬ್ಬರೂ ಕಲಿಯುವಂತ ಅವಕಾಶವಿದೆ. ಈ ಉದ್ದೇಶದಿಂದಲೇ ಕರ್ನಾಟಕ ಸಂಸ್ಕೃತ ವಿವಿ ಸ್ಥಾಪಿಸಲಾಗಿದೆ. ಸಂಸ್ಕೃತ ವಿವಿ ಗುರಿ ಸಾಧನೆಗೆ ಸರ್ಕಾರ ಬೆಂಬಲವಾಗಿ ನಿಲ್ಲಲಿದೆ ಎಂದು ಹೇಳಿದರು.ಘಟಿಕೋತ್ಸವದಲ್ಲಿ ಒಟ್ಟು 1004 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ರಾಷ್ಟ್ರಪ್ರಶಸ್ತಿ ಪುರಸ್ಕೃತ ವಿದ್ವಾಂಸ ಡಾ.ಎಚ್.ವಿ.ನಾಗರಾಜ್, ಸಂಸ್ಕೃತ ವಿವಿ ಕುಲಪತಿ ಡಾ.ಎಸ್.ಅಹಲ್ಯಾ, ಕುಲಸಚಿವರಾದ ಪ್ರೊ.ವಿ.ಗಿರೀಶ್ ಚಂದ್ರ, ಡಾ.ಕೆ.ರಾಮಕೃಷ್ಣ ಭಟ್ ಮತ್ತಿತರರು ಉಪಸ್ಥಿತರಿದ್ದರು.
ವಿದ್ವಾಂಸರಿಗೆ ಗೌರವ ಡಿ.ಲಿಟ್ ಪ್ರದಾನಇದೇ ವೇಳೆ ಚಿತ್ರದುರ್ಗದ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ, ಚಿನ್ಮಯ ಇಂಟರ್ ನ್ಯಾಷನಲ್ ಫೌಂಡೇಷನ್‌ನ ಪ್ರೊ.ಗೌರಿ ಮಾಹುಲೀಕರ್, ಪಳ್ಳತ್ತಡ್ಕ ಘನಪಾಠೀ ಶಂಕರ ನಾರಾಯಣ ಭಟ್ಟ ಅವರಿಗೆ 2021-22 ನೇಸಾಲಿನ ಗೌರವ ಡಿ.ಲಿಟ್ ಮತ್ತು ಕಮರಿಮಠದ ಸದ್ಗುರು ದುಂಡೇಶ್ವರ ಸ್ವಾಮೀಜಿ, ಹಿತ್ಲಳ್ಳಿ ಆಚಾರ್ಯ ಸೂರ್ಯನಾರಾಯಣ ಭಟ್ಟ, ಆಚಾರ್ಯ ಎ.ಹರಿದಾಸ ಭಟ್ಟ ಅವರಿಗೆ 2022-23 ನೇ ಸಾಲಿನ ಗೌರವ ಡಿ.ಲಿಟ್ ನೀಡಿ ಗೌರವಿಸಲಾಯಿತು.
;Resize=(128,128))
;Resize=(128,128))
;Resize=(128,128))
;Resize=(128,128))