ಬಾಳೂರು ಮೀಸಲು ಅರಣ್ಯದಲ್ಲಿ ಮೋಟಾರ್ ರೇಸ್

| Published : Sep 01 2024, 01:54 AM IST

ಸಾರಾಂಶ

ಬಾಳೂರು ಮೀಸಲು ಅರಣ್ಯ ವ್ಯಾಪ್ತಿಯ ಬೈರಾಪುರ ಹೊಸಕೆರೆ ವ್ಯಾಪ್ತಿಯಲ್ಲಿ 80ಕ್ಕೂ ಹೆಚ್ಚು ಜೀಪ್‌ಗಳಲ್ಲಿ ಚಿಕ್ಕಮಗಳೂರು ಪ್ರಾದೇಶಿಕ ವಿಭಾಗದ, ಮೂಡಿಗೆರೆ ವಲಯದ ಬಾಳೂರು ಮೀಸಲು ಅರಣ್ಯ ವ್ಯಾಪ್ತಿಯ ಎತ್ತಿನ ಭುಜ ದಟ್ಟಾರಣ್ಯ ರಸ್ತೆಯಲ್ಲಿ ಶನಿವಾರ ಫೋರ್ ವೀಲ್ ಡ್ರೈವ್ ಮೋಟಾರು ರ್‍ಯಾಲಿ ನಡೆಯಿತು.

ಕನ್ನಡಪ್ರಭ ವಾರ್ತೆ ಕೊಟ್ಟಿಗೆಹಾರ

ಬಾಳೂರು ಮೀಸಲು ಅರಣ್ಯ ವ್ಯಾಪ್ತಿಯ ಬೈರಾಪುರ ಹೊಸಕೆರೆ ವ್ಯಾಪ್ತಿಯಲ್ಲಿ 80ಕ್ಕೂ ಹೆಚ್ಚು ಜೀಪ್‌ಗಳಲ್ಲಿ ಚಿಕ್ಕಮಗಳೂರು ಪ್ರಾದೇಶಿಕ ವಿಭಾಗದ, ಮೂಡಿಗೆರೆ ವಲಯದ ಬಾಳೂರು ಮೀಸಲು ಅರಣ್ಯ ವ್ಯಾಪ್ತಿಯ ಎತ್ತಿನ ಭುಜ ದಟ್ಟಾರಣ್ಯ ರಸ್ತೆಯಲ್ಲಿ ಶನಿವಾರ ಫೋರ್ ವೀಲ್ ಡ್ರೈವ್ ಮೋಟಾರು ರ್‍ಯಾಲಿ ನಡೆಯಿತು.

ಅರಣ್ಯ ಇಲಾಖೆ ಅನುಮತಿ ಇಲ್ಲದೆ, ಗುಪ್ತವಾಗಿ ರ್‍ಯಾಲಿ ಆಯೋಜಿಸಲಾಗಿದೆ. ಈ ಕುರಿತು ಮೂಡಿಗೆರೆ ವಲಯ ಅರಣ್ಯಾಧಿಕಾರಿಯಾಗಲೀ ಅಥವಾ ತಳಮಟ್ಟದ ಸಿಬ್ಬಂದಿಯಾಗಲೀ ಯಾವುದೇ ಕ್ರಮ ಕೈಗೊಂಡಿಲ್ಲ.

ಸಕಲೇಶಪುರ, ಚಿಕ್ಕಮಗಳೂರು, ಮೂಡಿಗೆರೆ ತಾಲ್ಲೂಕಿನ ಜನರು ಮೋಜಿನ ಕ್ರೀಡೆಯಲ್ಲಿ ಭಾಗಿಯಾಗುವುದರ ಮೂಲಕ ಅರಣ್ಯ ಕಾನೂನುಗಳನ್ನು ಗಾಳಿಗೆ ತೂರುತ್ತಿದ್ದಾರೆ. ಅತೀ ವೇಗದ ವಾಹನಗಳ ಸದ್ದು ವನ್ಯ ಜೀವಿಗಳಿಗೆ ಕಂಟಕವಾಗಲಿದೆ. ಈ ಭಾಗವು ಆನೆ ಕಾರಿಡಾರ್ ಆಗಿದ್ದು, ಆನೆಗಳು ಅಕ್ಕಪಕ್ಕದ ಹಳ್ಳಿಗಳಿಗೆ ನುಗ್ಗುವ ಸಾಧ್ಯತೆ ಇದೆ. ಅಲ್ಲಿನ ಅರಣ್ಯ ಇಲಾಖೆ ಅಧಿಕಾರಿಗಳು ತನಗೂ ಇದಕ್ಕೂ ಸಂಬಂಧವೇ ಇಲ್ಲದಂತಿದ್ದಾರೆ. ತುರ್ತಾಗಿ ವಾಹನಗಳನ್ನು ಜಪ್ತಿ ಮಾಡಿ, ಅಕ್ರಮವಾಗಿ ಅರಣ್ಯ ಪ್ರವೇಶ ಮಾಡಿದವರ ಮೇಲೆ ಕಠಿಣ ಕ್ರಮ ಜರುಗಿಸಲು ಪರಿಸರ ಪ್ರೇಮಿಗಳು ಸಾರ್ವಜನಿಕರು ಒತ್ತಾಯ ಮಾಡುತ್ತಿದ್ದಾರೆ.

ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ರ್‍ಯಾಲಿ ಬಂದ 80ಕ್ಕೂ ಹೆಚ್ಚು ಜೀಪ್‌ಗಳು ಸಾರಿಗೆ ನಿಯಮಗಳನ್ನು ಗಾಳಿಗೆ ತೂರಿದ್ದು ಕಂಡು ಬಂದಿದೆ. ವಾಹನದ ಮೂಲ ಸ್ವರೂಪವನ್ನು ಬದಲಾಯಿಸಬಾರದೆಂಬ ನಿಯಮವಿದ್ದರೂ ಜೀಪ್ ಮಾಲೀಕರು ಮೂಲ ಸ್ವರೂಪವನ್ನು ಬದಲಾಯಿಸಿ ರ್‍ಯಾಲಿಗೆ ಭಾಗವಹಿಸಿದ್ದರು. ಕರ್ಕಶ ಶಬ್ಧದೊಂದಿಗೆ ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ವಾಹನಗಳು ಓಡಾಡಿದ್ದರಿಂದ ಪ್ರಾಣಿಗಳು ಬೇರೆಗೆ ಹೋಗಿರುವ ಶಂಕೆ ವ್ಯಕ್ತವಾಗಿದೆ.