ಸುರಕ್ಷತೆಗಾಗಿ ಜಾರಿಗೆ ತಂದ ಕಾನೂನುಗಳನ್ನು ವಾಹನ ಸವಾರರು ಪಾಲನೆ ಮಾಡಲಿ: ಜಿ.ಎಸ್. ಪಾಟೀಲ

| Published : Mar 12 2024, 02:05 AM IST

ಸುರಕ್ಷತೆಗಾಗಿ ಜಾರಿಗೆ ತಂದ ಕಾನೂನುಗಳನ್ನು ವಾಹನ ಸವಾರರು ಪಾಲನೆ ಮಾಡಲಿ: ಜಿ.ಎಸ್. ಪಾಟೀಲ
Share this Article
  • FB
  • TW
  • Linkdin
  • Email

ಸಾರಾಂಶ

ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ ಅಡಿಯಲ್ಲಿ ಸೋಮವಾರ ಗಜೇಂದ್ರಗಡದ ಕಾಲಕಾಲೇಶ್ವರ ವೃತ್ತದಲ್ಲಿ ಥರ್ಡ್ ಐ ಸಿಸಿ ಕ್ಯಾಮೆರಾಗಳಿಗೆ ಶಾಸಕ ಜಿ.ಎಸ್. ಪಾಟೀಲ್ ಚಾಲನೆ ನೀಡಿದರು.

ಗಜೇಂದ್ರಗಡ: ಜನತೆಯ ಸುರಕ್ಷತೆ ಜತೆಗೆ ಸಂಚಾರ ನಿಯಮಗಳ ಪಾಲನೆಗಾಗಿ ಥರ್ಡ್ ಐ ಸಿಸಿ ಕ್ಯಾಮೆರಾ ಪಟ್ಟಣದಲ್ಲಿ ಅಳವಡಿಸಿದ್ದು, ಬೆಂಗಳೂರು ನಂತರ ಗದಗ ಜಿಲ್ಲೆಯಲ್ಲಿ ಥರ್ಡ್ ಐ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.

ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ ಅಡಿಯಲ್ಲಿ ಸೋಮವಾರ ಸ್ಥಳೀಯ ಕಾಲಕಾಲೇಶ್ವರ ವೃತ್ತದಲ್ಲಿ ಥರ್ಡ್ ಐ ಸಿಸಿ ಕ್ಯಾಮೆರಾಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸರ್ಕಾರಗಳು ಜಾರಿಗೆ ತರುವ ಪ್ರತಿ ಕಾನೂನು ಹಾಗೂ ಯೋಜನೆಗಳಲ್ಲಿ ಜನರ ಸುರಕ್ಷತೆ ಜತೆಗೆ ಅಭಿವೃದ್ಧಿಯನ್ನು ಬಯಸುತ್ತವೆ. ಹೀಗಾಗಿ ಜನತೆ ಯೋಜನೆಗಳ ಲಾಭವನ್ನು ಪಡೆಯಲು ತೋರುವ ಹಿತಾಸಕ್ತಿಯನ್ನು ಕಾನೂನು ಪಾಲನೆಯಲ್ಲಿಯೂ ತೋರಬೇಕು ಎಂದು ಹೇಳಿದರು. ಸಂಚಾರ ನಿಯಮಗಳು ವಾಹನ ಸವಾರರ ಹಿತ ಕಾಪಾಡುವ ಜತೆಗೆ ಪಾದಚಾರಿಗಳ ಜೀವ ರಕ್ಷಣೆಗೂ ಸಹಕಾರಿಯಾಗಿರುತ್ತವೆ. ಹೀಗಾಗಿ ವಾಹನ ಚಾಲನೆ ಮಾಡುವ ಸಂದರ್ಭದಲ್ಲಿ ಮೂಬೈಲ್ ಬಳಕೆ ಮಾಡಬಾರದು. ಹೆಲ್ಮೆಟ್ ಧರಿಸುವುದು ಹಾಗೂ ಬೆಲ್ಟ್ ಹಾಕಿಕೊಳ್ಳುವುದು ಜೀವ ರಕ್ಷಣೆಗೆ ಸಹಾಯಕವಾಗಿದ್ದು, ಜನತೆ ಕಾನೂನುಗಳನ್ನು ಪಾಲನೆ ಮಾಡುವ ಮೂಲಕ ಸುಗಮ ಸಂಚಾರಕ್ಕೆ ಆದ್ಯತೆ ನೀಡಬೇಕು ಎಂದರು.ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ಪ್ರತಿ ಕುಟುಂಬವನ್ನು ಸಹ ತಲುಪಿದ್ದು, ಜನತೆ ಕಾಂಗ್ರೆಸ್ ಆಡಳಿತ ಮೆಚ್ಚಿಕೊಂಡಿದ್ದಾರೆ. ಪರಿಣಾಮ ಜನರ ವಿಶ್ವಾಸ ಗಳಿಸಿರುವ ಕಾಂಗ್ರೆಸ್‌ನ ಜನಪ್ರಿಯತೆ ಸಹಿಸಿಕೊಳ್ಳದ ವಿಪಕ್ಷಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ರಾಜ್ಯ ಕಾಂಗ್ರೆಸ್ ಸರ್ಕಾರದ ಮೇಲೆ ಸುಳ್ಳು ಆರೋಪಗಳನ್ನು ಮಾಡುತ್ತಿರುವುದು ವಿಪರ್ಯಾಸ. ಹೀಗಾಗಿ ಲೋಕಸಭಾ ಚುನಾವಣೆಗೆ ಕಾಯುತ್ತಿರುವ ಜನತೆ ವಿಪಕ್ಷಗಳಿಗೆ ತಕ್ಕಪಾಠ ಕಲಿಸುವ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್‌ನ ಅಭ್ಯರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ, ಡಿವೈಎಸ್‌ಪಿ ಪ್ರಭುಗೌಡ ಕಿರೇದಳ್ಳಿ, ತಹಸೀಲ್ದಾರ್ ಕಿರಣಕುಮಾರ ಕುಲಕರ್ಣಿ, ಸಿಪಿಐ ಎಸ್.ಎಸ್. ಬೀಳಗಿ, ಪಿಎಸ್‌ಐ ಸೋಮನಗೌಡ ಗೌಡ್ರ, ಪುರಸಭೆ ಸದಸ್ಯರಾದ ಶಿವರಾಜ ಘೋರ್ಪಡೆ, ರಾಜು ಸಾಂಗ್ಲೀಕರ, ಮುರ್ತುಜಾ ಡಾಲಾಯತ್, ವೆಂಕಟೇಶ ಮುದಗಲ್, ಉಮೇಶ ರಾಠೋಡ ಹಾಗೂ ಅಶೋಕ ಬಾಗಮಾರ, ಸಿದ್ದಣ್ಣ ಬಂಡಿ, ಎಚ್.ಎಸ್. ಸೋಂಪುರ, ಎ.ಡಿ. ಕೋಲಕಾರ, ಶ್ರೀಧರ ಬಿದರಳ್ಳಿ, ಅರಿಹಂತ ಬಾಗಮಾರ, ಶರಣಪ್ಪ ಚಳಗೇರಿ ಹಾಗೂ ಉಮೇಶ ಲಮಾಣಿ, ರಾಘವೇಂದ್ರ ಮಂತಾ ಸೇರಿ ಇತರರು ಇದ್ದರು.