ವಾಹನ ಸವಾರರು ರಸ್ತೆ ನಿಯಮ ಪಾಲಿಸಲಿ

| Published : Dec 12 2024, 12:32 AM IST

ಸಾರಾಂಶ

ರಸ್ತೆ ನಿಯಮ ಉಲ್ಲಂಘನೆಯಿಂದ ಪ್ರತಿವರ್ಷ ರಾಜ್ಯದಲ್ಲಿ ಸುಮಾರು ಲಕ್ಷಕ್ಕೂ ಅಧಿಕ ಸಾವು ಪ್ರಕರಣಗಳು ವರದಿಯಾಗುತ್ತಿವೆ.

ಬಳ್ಳಾರಿ: ಸಾರ್ವಜನಿಕ ರಸ್ತೆಗಳಲ್ಲಿ ಸಂಚರಿಸುವ ಪ್ರತಿಯೊಬ್ಬರೂ ರಸ್ತೆ ನಿಯಮಗಳನ್ನು ಪಾಲಿಸಬೇಕು ಎಂದು ಸಂಚಾರ ಪೊಲೀಸ್ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ಅಯ್ಯನಗೌಡ ಪಾಟೀಲ್ ಕರೆ ನೀಡಿದರು.

ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರ ಹಾಗೂ ಸಾರಿಗೆ ಇಲಾಖೆಯ ಸಹಯೋಗದಲ್ಲಿ ನಗರದ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಆವರಣದಲ್ಲಿ ಮಂಗಳವಾರ ವಾಹನ ಬಳಕೆದಾರರಲ್ಲಿ ಹಾಗೂ ರಸ್ತೆ ಬಳಕೆದಾರರಲ್ಲಿ ರಸ್ತೆ ಸುರಕ್ಷತೆ ಕುರಿತು ಎಲ್‌ಇಡಿ ವಾಹನಗಳ ಮೂಲಕ ಅರಿವು ಮೂಡಿಸುವ ಜನಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ರಸ್ತೆ ನಿಯಮ ಉಲ್ಲಂಘನೆಯಿಂದ ಪ್ರತಿವರ್ಷ ರಾಜ್ಯದಲ್ಲಿ ಸುಮಾರು ಲಕ್ಷಕ್ಕೂ ಅಧಿಕ ಸಾವು ಪ್ರಕರಣಗಳು ವರದಿಯಾಗುತ್ತಿವೆ. ಇದರಲ್ಲಿ ಮನೆಗೆ ಆಧಾರಸ್ತಂಭವಾಗಿರುವ ಯುವಕರೇ ಆಗಿರುತ್ತಾರೆ. ಹಾಗಾಗಿ ಪ್ರತಿಯೊಬ್ಬರೂ ತಪ್ಪದೇ ರಸ್ತೆ ನಿಯಮಗಳನ್ನು ಪಾಲಿಸುವುದರೊಂದಿಗೆ ಸಂಭವಿಸುವ ಅನಾಹುತದಿಂದ ಪಾರಾಗಬೇಕು ಎಂದರು.

ಕಾರ್ಯಕ್ರಮ ವ್ಯವಸ್ಥಾಪಕಿ ರಮ್ಯಾ ರಂಗೋಲಿ ಮಾತನಾಡಿ, ರಸ್ತೆ ಸುರಕ್ಷತೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು 5 ಎಲ್.ಇ.ಡಿ ವಾಹನಗಳು ಜಿಲ್ಲೆಯಲ್ಲಿ 10 ದಿನಗಳ ಕಾಲ ಸಂಚರಿಸಲಿದ್ದು, ಸಾರ್ವಜನಿಕರು ರಸ್ತೆ ಸುರಕ್ಷತೆಯ ಬಗ್ಗೆ ಅರಿವು ಹೊಂದಬೇಕು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ರಸ್ತೆ ಸುರಕ್ಷತೆ ಕುರಿತು ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಚಾಲನೆ ವೇಳೆ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ-ಬೆಲ್ಟ್ ಕಟ್ಟಿಕೊಳ್ಳಿ, ಹೆಲ್ಮೆಟ್ ಜೀವ ಉಳಿಸುತ್ತದೆ, ರಸ್ತೆ ಸುರಕ್ಷತೆ ನಮ್ಮ ಆದ್ಯತೆ, ಕಾರು ಚಲಾಯಿಸುವಾಗ ಕಡ್ಡಾಯವಾಗಿ ಸೀಟ್ ಬೆಲ್ಟ್ ಧರಿಸಿ, ರಸ್ತೆ ನಿಯಮಗಳನ್ನು ಪಾಲಿಸಿ ಅಮೂಲ್ಯ ಜೀವಗಳನ್ನು ಉಳಿಸಿ, ಕಾರು ಚಾಲನೆ ವೇಳೆ ಮೊಬೈಲ್ ಫೋನ್ ಬಳಸದಿರಿ, ಮದ್ಯಪಾನ ಮಾಡಿ ವಾಹನ ಚಲಾಯಿಸಬೇಡಿ, ರಸ್ತೆ ನಿಯಮಗಳ ಅರಿವು ನಿಮಗಿರಲಿ, ರಸ್ತೆ ಅಪಘಾತ ತಡೆಯಿರಿ ಎನ್ನುವ ಘೋಷವಾಕ್ಯಗಳ ಜಾಗೃತಿ ಫಲಕ ಪ್ರದರ್ಶಸಲಾಯಿತು.

ಪ್ರಾದೇಶಿಕ ಸಾರಿಗೆ ಅಧಿಕಾರಿ ಶ್ರೀನಿವಾಸ ಗಿರಿ, ಸಂಚಾರಿ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ ಬಿ.ಶಫೀವುಲ್ಲಾ, ಹಿರಿಯ ಮೋಟಾರು ವಾಹನ ನಿರೀಕ್ಷಕ ರಫೀಕ್ ಅಹ್ಮದ್ ಸೇರಿದಂತೆ ಸಾರಿಗೆ ಇಲಾಖೆಯ ಸಿಬ್ಬಂದಿ ಹಾಗೂ ಇತರರು ಹಾಜರಿದ್ದರು.