ಸಾರಾಂಶ
ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಚಿಕ್ಕಮಗಳೂರಿನಲ್ಲಿ ಜಾಥಾ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುವಾಹನ ಸವಾರರು ಸುರಕ್ಷತಾ ನಿಯಮಗಳನ್ನು ಅಳವಡಿಸಿಕೊಂಡು ಸಂಚರಿಸಬೇಕು. ನಿಯಮ ಉಲ್ಲಂಘಿಸಿ ಸಂಚರಿಸಿದರೆ ದುರ್ಘಟನೆಗಳು ಸಂಭವಿಸಿ ಕುಟುಂಬ ಅನಾಥವಾಗಲಿದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಎಂ. ರಾಕೇಶ್‌ಕುಮಾರ್ ಹೇಳಿದರು.
ಜಿಲ್ಲಾಡಳಿತ, ಪ್ರಾದೇಶಿಕ ಸಾರಿಗೆ ಇಲಾಖೆ, ಪೊಲೀಸ್ ಇಲಾಖೆ, ರೋಟರಿ ಕಾಫಿ ಲ್ಯಾಂಡ್, ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಸಂಸ್ಥೆಗಳ ಸಹಯೋಗದಲ್ಲಿ ಶನಿವಾರ ಏರ್ಪಡಿಸಿದ್ಧ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು. ಕೆಲವು ಮಂದಿ ಅವಸರದ ಕೆಲಸಕ್ಕಾಗಿ ಸಂಚಾರಿ ನಿಯಮ ಉಲ್ಲಂಘಿಸುತ್ತಿದ್ದಾರೆ. ದಂಡ ಅಥವಾ ಇನ್ನಿತರೆ ಶಿಕ್ಷೆ ವಿಧಿಸಿದರೆ ಸಾಲದೆಂಬ ದೃಷ್ಟಿಯಿಂದ ಶಾಲಾ ಮಕ್ಕಳ ಮುಖಾಂತರ ಜಾಥಾ ಕೈಗೊಂಡು ವಾಹನ ಸವಾರರಿಗೆ ಜಾಗೃತಿ ಮೂಡಿಸುವ ಕೆಲಸದಲ್ಲಿ ಸಾರಿಗೆ ಇಲಾಖೆ ಕೈಜೋಡಿಸಿದೆ ಎಂದು ತಿಳಿಸಿದರು.ಮುಖ್ಯ ಕಚೇರಿ ಆದೇಶದಂತೆ ಇಂದು ಶಾಲಾ ಮಕ್ಕಳನ್ನು ಜಾಥಾದಲ್ಲಿ ತೊಡಗಿಸಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸುತ್ತಿದೆ. ಸಾರ್ವಜನಿಕ ಓಡಾಟ ಹೆಚ್ಚಿರುವಂಥ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣಗಳಲ್ಲಿ ಈ ತಿಂಗಳಲ್ಲಿ ಬೀದಿ ನಾಟಕ, ರಕ್ತದಾನ, ನೇತ್ರದಾನ ಶಿಬಿರ ಸೇರಿದಂತೆ ಅನೇಕ ಕಾರ್ಯಚಟುವಟಿಕೆ ರೂಪಿಸುತ್ತೇವೆ ಎಂದರು.
ಶಾಲಾ ಕಾಲೇಜುಗಳಲ್ಲಿ ಚಿತ್ರ ಬರಹ ಮತ್ತು ಹಲವು ರೀತಿ ಕಾರ್ಯಕ್ರಮ ರೂಪಿಸಿ ರಸ್ತೆ ಸುರಕ್ಷತೆ ಅರಿವು ಮೂಡಿಸುತ್ತೇವೆ. ಆಟೋ, ಟ್ಯಾಕ್ಸಿ, ಬಸ್ ನಿಲ್ದಾಣ ಒಂದೇ ಸ್ಥಳವಾವಾಗಿರುವ ಕಾರಣ ಸಾರ್ವಜನಿಕರು, ರೈತರು, ಬಸ್ ಚಾಲಕರಿಗೆ ಸುರಕ್ಷತಾ ನಿಯಮದ ಅರಿವು, ಬೀದಿ ನಾಟಕ ಮತ್ತು ಮಾಹಿತಿ ಶಿಬಿರ ನಡೆಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.ರೋಟರಿ ಕಾಫಿ ಲ್ಯಾಂಡ್ ಅಧ್ಯಕ್ಷ ತನೋಜ್ ನಾಯ್ಡು ಮಾತನಾಡಿ, 18 ವರ್ಷ ಮೇಲ್ಪಟ್ಟ ಯುವಕರು ಕಡ್ಡಾಯವಾಗಿ ಚಾಲನಾ ಪರವಾನಗಿ ಪಡೆದು ವಾಹನ ಚಲಾಯಿಸಬೇಕು. ಅಲ್ಲದೇ ಪಾಲಕರಿಲ್ಲದ ವೇಳೆಯಲ್ಲಿ ಬೈಕ್ ತೆಗೆದುಕೊಂಡು ಅಡ್ಡಾದಿಡ್ಡಿ ತೆರಳಿದರೆ ಪ್ರಾಣಕ್ಕೆ ಕುತ್ತು ಸಂಭವಿಸಿ ಇಡೀ ಕುಟುಂಬವೇ ದುಃಖದಲ್ಲಿ ಮುಳುಗುತ್ತದೆ ಎಂದು ಎಚ್ಚರಿಸಿದರು.
ಸಂಚಾರಿ ಪೊಲೀಸ್, ಪ್ರಾದೇಶಿಕ ಸಾರಿಗೆ ಇಲಾಖೆ ವಾಹನ ಸವಾರರ ಅನುಕೂಲಕ್ಕಾಗಿ ಕಟ್ಟು ನಿಟ್ಟಿನ ನಿಯಮ ರೂಪಿಸಿರುವ ಕಾರಣ ನಗರದಲ್ಲಿ ಸಂಚಾರ ಸುಗಮವಾಗುತ್ತಿದೆ. ಮಿತಿಮೀರಿ ಸಂಚರಿಸಿದರೆ ಜೀವನ ಪರ್ಯಂತ ನುಂಗಲಾರದ ನೋವು ಅನುಭವಿಸಿ ಕೊನೆ ತನಕ ಪಶ್ಚಾತ್ತಾಪ ಪಡಬೇಕಾಗುತ್ತದೆ ಎಂದರು.ಸಂಚಾರಿ ಟ್ರಾಫಿಕ್ ಅಧಿಕಾರಿ ಧನಂಜಯ್ ಮಾತನಾಡಿ, ಮುಖ್ಯವಾಗಿ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸಿ ಚಲಿಸಬೇಕು. ಕಾರುಗಳಲ್ಲಿ ಕಡ್ಡಾಯವಾಗಿ ಸೀಟ್ ಬೆಲ್ಟ್ ಸೇರಿದಂತೆ ಬಹುತೇಕ ನಿಯಮಗಳನ್ನು ಸವಾರರು ಪಾಲಿಸುವುದು ಮುಖ್ಯ. ಎಲ್ಲೆಂದರದಲ್ಲೇ ವಾಹನಗಳನ್ನು ಪಾರ್ಕಿಂಗ್ ಮಾಡದೇ ಸೂಚಿಸಿದ ಸ್ಥಳದಲ್ಲೇ ವಾಹನಗಳನ್ನು ಪಾರ್ಕಿಂಗ್ ಮಾಡಿದರೆ ಟ್ರಾ ಫಿಕ್ ಸಮಸ್ಯೆಗಳು ಉದ್ಬವಿಸುವುದಿಲ್ಲ ಎಂದು ಹೇಳಿದರು.
ಇದೇ ವೇಳೆ ತಾಲೂಕು ಕಚೇರಿ ಆವರಣದಿಂದ ಡೊಳ್ಳುಕುಣಿತದೊಂದಿಗೆ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಹಾಗೂ ಶಾಲಾ ಮಕ್ಕಳು, ಸಂಚಾರಿ ಪೊಲೀಸ್ ಅಧಿಕಾರಿಗಳು, ವಿವಿಧ ಸಂಘ - ಸಂಸ್ಥೆ ಪದಾಧಿಕಾರಿಗಳು ಆಜಾದ್ ಪಾರ್ಕ್ ವೃತ್ತದವರೆಗೆ ಮೆರವಣಿಗೆ ಜಾಥಾ ನಡೆಸಿ ಸಾರ್ವ ಜನಿಕರಿಗೆ ರಸ್ತೆ ಸುರಕ್ಷತೆ ಅರಿವು ಮೂಡಿಸಿದರು.ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ಡಿವೈಎಸ್ಪಿ ಎಚ್.ಎಂ.ಶೈಲೇಂದ್ರ, ಪ್ರಾದೇಶಿಕ ಸಾರಿಗೆ ಇಲಾಖೆ ಮೋಟಾರ್ ವಾಹನ ನಿರೀಕ್ಷಕರಾದ ನರಸೇಗೌಡ, ಶಿವಾನಂದ ಕಾರಜೋಳ, ಜಗದೀಶ್, ರೋಟರಿ ಕಾಫಿ ಲ್ಯಾಂಡ್‌ನ ಕಾರ್ಯದರ್ಶಿ ನಾಗೇಶ್, ಜಂಟಿ ಕಾರ್ಯದರ್ಶಿ ಆನಂದ್, ಸಹಾಯಕ ರಾಜ್ಯಪಾಲ ನಾಸೀರ್ ಹುಸೇನ್, ಸದಸ್ಯರಾದ ಗುರುಮೂರ್ತಿ, ರುದ್ರೇಶ್, ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಸಂಘಟನಾ ಸಂಚಾಲಕ ಕಿರಣ್‌ಕುಮಾರ್ ಹಾಜರಿದ್ದರು.
2 ಕೆಸಿಕೆಎಂ 1ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಚಿಕ್ಕಮಗಳೂರಿನಲ್ಲಿ ಶನಿವಾರ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಜಾಥಾ ನಡೆಯಿತು.