ಕುಂದಾಪುರ: ಇಲ್ಲಿನ ಮೂಡ್ಲಕಟ್ಟೆ ನರ್ಸಿಂಗ್ ಕಾಲೇಜಿನ (ಎಂಸಿಎನ್‌) ಇದರ ಟ್ರೈನಿಂಗ್ ಅಂಡ್ ಪ್ಲೇಸ್ಮೆಂಟ್ ವಿಭಾಗವು 2025-26ನೇ ಸಾಲಿನ ಉದ್ಯೋಗ ನಿಯೋಜನೆ ಅಭಿಯಾನವನ್ನು ಯಶಸ್ವಿಯಾಗಿ ಆಯೋಜಿಸಿತು.

ಭಾರತದ ಪ್ರಮುಖ ಮಲ್ಟಿ ಸ್ಪೆಷಾಲಿಟಿ ಆರೋಗ್ಯ ಸಂಸ್ಥೆಗಳಲ್ಲಿ ಒಂದಾದ ಹೈದರಾಬಾದ್‌ ಹೈಟೆಕ್ ಸಿಟಿಯ ಯಶೋದಾ ಆಸ್ಪತ್ರೆಯ ಸಹಯೋಗದಲ್ಲಿ ಈ ನೇಮಕಾತಿ ಅಭಿಯಾನವನ್ನು ನಡೆಸಲಾಯಿತು.ಯಶೋಧಾ ಆಸ್ಪತ್ರೆಯ ಮುಖ್ಯ ಪ್ರಬಂಧಕಿ ಸ್ವಾತಿ ಮೇದಾ, ಆಸ್ಪತ್ರೆಯ ನರ್ಸಿಂಗ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥೆ ಪ್ರತ್ಯುಷಾ ಚೌಧರಿ ಅವರು ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಯಶೋದಾ ಆಸ್ಪತ್ರೆಯನ್ನು ವಿದ್ಯಾರ್ಥಿಗಳನ್ನು ಪರಿಚಯಿಸಿದ ಅವರು, ನೇಮಕಾತಿ ಪ್ರಕ್ರಿಯೆ, ಅರ್ಹತಾ ಮಾನದಂಡಗಳು, ತರಬೇತಿ ಅವಕಾಶಗಳು ಮತ್ತು ಹೊಸದಾಗಿ ನೇಮಕಗೊಂಡ ದಾದಿಯರಿಂದ ನಿರೀಕ್ಷೆಗಳನ್ನು ವಿವರಿಸಿದರು.

ಈ ಸಂದರ್ಭ ಹೈದರಾಬಾದ್‌ ಹೈಟೆಕ್ ಸಿಟಿಯಲ್ಲಿರುವ ಜೆಎಂಜೆ ಸಂಸ್ಥೆಗಳು ಮತ್ತು ಯಶೋದಾ ಆಸ್ಪತ್ರೆಗಳ ನಡುವೆ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಐಎಂಜೆ ಸಂಸ್ಥೆಗಳ ಶೈಕ್ಷಣಿಕ ನಿರ್ದೇಶಕ ಡಾ. ಎಸ್ ಎನ್ ಭಟ್, ಎಂಸಿಎನ್ ಪ್ರಾಂಶುಪಾಲೆ ಪ್ರೊ ಜೆನ್ನಿಫರ್ ಪ್ರೀಡಾ ಮ್ಯಾನೇಜಸ್ ಉಪಸ್ಥಿತರಿದ್ದರು.ಉಭಯ ಸಂಸ್ಥೆಗಳ ಮಧ್ಯೆ ಶೈಕ್ಷಣಿಕ ಮತ್ತು ವೃತ್ತಿಪರ ಸಹಯೋಗವನ್ನು ಬಲಪಡಿಸಲು, ವಿದ್ಯಾರ್ಥಿ ನಿಯೋಜನೆಗಳನ್ನು ಸುಗಮಗೊಳಿಸಲು, ತರಬೇತಿ ಅವಕಾಶಗಳನ್ನು ಒದಗಿಸಲು, ಜ್ಞಾನ ವಿನಿಮಯವನ್ನು ಉತ್ತೇಜಿಸಲು ಮತ್ತು ನರ್ಸಿಂಗ್ ವಿದ್ಯಾರ್ಥಿಗಳಿಗೆ ವೃತ್ತಿ ಅಭಿವೃದ್ಧಿ ನಿರೀಕ್ಷೆಗಳನ್ನು ಹೆಚ್ಚಿಸಲು ಈ ಒಪ್ಪಂದವು ಮಹತ್ವದ ಬೆಳವಣಿಗೆಯಾಗಿದೆ.