ಸಾರಾಂಶ
ಮಕ್ಕಳ ಅಕಾಡೆಮಿ ವತಿಯಿಂದ ನಗರದ ಪಾಲಾಕ್ಷ ಪೋದ್ದಾರ ಶಾಲೆಯಲ್ಲಿ ಮಂಗಳವಾರ ದಂತ ತಪಾಸಣಾ ಶಿಬಿರ ನಡೆಯಿತು.
ಧಾರವಾಡ: ವಿಶ್ವದಾದ್ಯಂತ ಸುಮಾರು 621 ಮಿಲಿಯನ್ ಮಕ್ಕಳಿಗೆ ದಂತ ಕ್ಷಯವಿದೆ ಎಂದು ಹಿರಿಯ ಮಕ್ಕಳ ವೈದ್ಯ ಡಾ. ರಾಜನ್ ದೇಶಪಾಂಡೆ ಹೇಳಿದರು.
ಮಕ್ಕಳ ಅಕಾಡೆಮಿ ವತಿಯಿಂದ ನಗರದ ಪಾಲಾಕ್ಷ ಪೋದ್ದಾರ ಶಾಲೆಯಲ್ಲಿ ಮಂಗಳವಾರ ನಡೆದ ದಂತ ತಪಾಸಣಾ ಶಿಬಿರದಲ್ಲಿ ಮಾತನಾಡಿ, ಭಾರತದಲ್ಲೂ 5-14 ವರ್ಷದೊಳಗಿನ ಮಕ್ಕಳಲ್ಲಿ ಶೇ. 50ರಿಂದ ಶೇ.60 ಮಕ್ಕಳಲ್ಲಿ ದಂತ ಕ್ಷಯವಿದೆ. ಬಾಯಿಯ ಸ್ವಚ್ಛತೆ ಕಾಪಾಡಿಕೊಳ್ಳಲು ಮಕ್ಕಳು ದಿನಕ್ಕೆ ಎರಡು ಬಾರಿ ಹಲ್ಲುಜ್ಜುವುದು ಅತ್ಯಗತ್ಯ. ದೇಹದ ಎಲ್ಲ ಕಾಯಿಲೆಗಳಿಗೆ ಬಾಯಿಯೇ ಹೆಬ್ಬಾಗಿಲು. ಈ ಹಿನ್ನೆಲೆಯಲ್ಲಿ ಬಾಯಿ ಆರೋಗ್ಯವನ್ನು ಪ್ರತಿಯೊಬ್ಬರ ಉತ್ತಮವಾಗಿಟ್ಟುಕೊಳ್ಳಬೇಕು ಎಂದರು.ಬೆಳಗ್ಗೆ ಎದ್ದಾಗಿನಿಂದಲೂ ರಾತ್ರಿ ಮಲಗುವ ವರೆಗೂ ಮಕ್ಕಳಾದಿಯಾಗಿ ನಾವೆಲ್ಲರೂ ಆಗಾಗ ತಿಂಡಿ, ಊಟ, ಚಾಟ್ಸ್, ಚಾಕ್‌ಲೇಟ್, ಐಸಕ್ರೀಮ್ ಅಂತಹ ಕೆಲವು ಬೇಡವಾದ ಆಹಾರ ಸಹ ಸೇವಿಸುತ್ತೇವೆ. ಅದಕ್ಕೆ ತಕ್ಕಂತೆ ಬಾಯಿ ಸ್ವಚ್ಛತೆ ಮಾಡಿಕೊಳ್ಳುವುದಿಲ್ಲ. ಹೀಗಾಗಿ, ಆಹಾರದ ತುಣುಕು, ಸಿಹಿ ವಸ್ತುಗಳು ಹಲ್ಲಿನಲ್ಲಿ ಬಹಳ ಸಮಯ ಕಾಲ ಕೂತು ಹಲ್ಲು ನೋವು, ಹಲ್ಲು ಕ್ಷಯರೋಗಕ್ಕೆ ಕಾರಣವಾಗುತ್ತದೆ. ಈ ಹಿನ್ನೆಲೆಯಲ್ಲಿ ಆಗಾಗ ಬಾಯಿ, ಹಲ್ಲು ಸ್ವಚ್ಛ ಮಾಡುತ್ತಿರಬೇಕು. ಈ ಕಾರಣದಿಂದ 10 ಸಾವಿರ ಮಕ್ಕಳ ದಂತ ತಪಾಸಣೆ ಮಾಡಬೇಕು ಎಂಬುದು ಅಕಾಡೆಮಿ ಪಣ ಎಂದರು.
ಶಿಬಿರದಲ್ಲಿ ದಂತ ಶಸ್ತ್ರಚಿಕಿತ್ಸಕರು ಸುಮಾರು 650ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಪರೀಕ್ಷಿಸಿದರು. ಹಲವರಿಗೆ ದಂತ ಕ್ಷಯವಿತ್ತು. ಹಲ್ಲು ಕೊಳೆಯುವುದನ್ನು ತಪ್ಪಿಸಲು ಸಕ್ಕರೆ ಆಹಾರ, ಆಮ್ಲೀಯ ವಸ್ತುಗಳು ಮತ್ತು ತಂಪು ಪಾನೀಯ ಸೇವನೆಯಿಂದ ದೂರವಿರಲು ವೈದ್ಯರು ಸಲಹೆ ನೀಡಿದರು.ಡಾ. ಬಲರಾಮ ನಾಯಕ ಮಾತನಾಡಿದರು. ಡಾ. ವಿಜಯ್ ತ್ರಾಸಾದ್ ಮತ್ತು ತಂಡ ದಂತ ತಪಾಸಣೆ ನಡೆಸಿದರು. ಪಂಕಜ್ ದೇಸಾಯಿ ಸ್ವಾಗತಿಸಿದರು. ಡಾ. ಎಂ.ವೈ. ಸಾವಂತ್, ಡಾ. ಪಲ್ಲವಿ ದೇಶಪಾಂಡೆ, ಡಾ. ಸ್ನೇಹಾ ಜೋಶಿ, ಉಪ ಪ್ರಾಂಶುಪಾಲರಾದ ಕ್ಯಾರೋಲಿನ್ ಇದ್ದರು.