ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕೃಷಿ ಇಲಾಖೆ ವತಿಯಿಂದ ಸಿರಿಧಾನ್ಯದ ಮಹತ್ವ ಕುರಿತು ಜಾಗೃತಿ ಹಾಗೂ ಮರೆತು ಹೋದ ಖಾದ್ಯಗಳ ಪಾಕ ಸ್ಪರ್ಧೆ ಪ್ರಯುಕ್ತ ಮಂಗಳವಾರ ಜಾಥಾ ನಡೆಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕೃಷಿ ಇಲಾಖೆ ವತಿಯಿಂದ ಸಿರಿಧಾನ್ಯದ ಮಹತ್ವ ಕುರಿತು ಜಾಗೃತಿ ಹಾಗೂ ಮರೆತು ಹೋದ ಖಾದ್ಯಗಳ ಪಾಕ ಸ್ಪರ್ಧೆ ಪ್ರಯುಕ್ತ ಮಂಗಳವಾರ ಜಾಥಾ ನಡೆಯಿತು.

ನಗರದ ಕೋಟೆ ಆವರಣದಲ್ಲಿ ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ ಚಾಲನೆ ನೀಡಿ, ಸಿರಿಧಾನ್ಯ ಬಳಕೆಯಿಂದ ಪೌಷ್ಟಿಕಾಂಶಗಳು ಹೆಚ್ಚಿದ್ದು, ಈ ಬಗ್ಗೆ ಜಾಗೃತಿ ಮೂಡಿಸುವಂತಾಗಬೇಕು ಎಂದರು.

ಸಿರಿಧಾನ್ಯ ಉಪಯೋಗದಿಂದ ದೇಹದಲ್ಲಿ ಆಹಾರದ ಸಮತೋಲನ ಕಾಯ್ದುಕೊಳ್ಳಬಹುದು. ಮಧುಮೇಹ ಮತ್ತು ರಕ್ತದೊತ್ತಡದಿಂದ ದೂರವಿರಬಹುದು ಎಂದು ಜಿ.ಪಂ.ಸಿಇಒ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಜಾಥಾದಲ್ಲಿ ಜಂಟಿ ನಿರ್ದೇಶಕರಾದ ಚಂದ್ರಶೇಖರ್, ಉಪ ನಿರ್ದೇಶಕರಾದ ಸೋಮಶೇಖರ್, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಾದ ಶಶಿಧರ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರು, ತಾಂತ್ರಿಕ ಸಹಾಯಕರು, ಎನ್‌ಸಿಸಿ ವಿದ್ಯಾರ್ಥಿಗಳು, ಕೃಷಿಕರು ಇತರರು ಪಾಲ್ಗೊಂಡಿದ್ದರು.

ಜಾಥವು ನಗರದ ಕೋಟೆ ಆವರಣದಿಂದ ಗಾಂಧಿ ಮೈದಾನದವರೆಗೆ ನಡೆಯಿತು. ಬಳಿಕ ಕೃಷಿ ಇಲಾಖೆ ಜಂಟಿ ನಿರ್ದೇಶಕರ ಕಚೇರಿ ಸಭಾಂಗಣದಲ್ಲಿ ಸಿರಿಧಾನ್ಯ ಹಾಗೂ ಮರೆತು ಹೋದ ಖಾದ್ಯಗಳ ಪಾಕ ಸ್ಪರ್ಧಾ ಪ್ರದರ್ಶನ ನಡೆಯಿತು. ಸ್ಪರ್ಧೆಯಲ್ಲಿ 60 ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದರು.

ಸಿರಿಧಾನ್ಯಗಳಾದ ಜೋಳ, ರಾಗಿ, ನವಣೆ, ಸಜ್ಜೆ, ಹಾರಕ, ಬರಗು, ಸಾಮೆ ಮತ್ತಿತರದಿಂದ ಮಾಡಿರುವ ವಿವಿಧ ರೀತಿಯ ತಿಂಡಿ ತಿನಿಸುಗಳು ಪ್ರದರ್ಶನದಲ್ಲಿ ನೋಡುಗರ ಬಾಯಲ್ಲಿ ನೀರು ತರಿಸಿತು.

ಜಿಲ್ಲಾ ಮಟ್ಟಕ್ಕೆ ಖಾರ ತಿನಿಸು, ಸಿಹಿ ತಿನಿಸು ಮತ್ತು ಮರೆತು ಹೋದ ಖಾದ್ಯಗಳಿಗೆ ಪ್ರತ್ಯೇಕವಾಗಿ ಪ್ರಥಮ ಬಹುಮಾನವಾಗಿ ರೂ. 5 ಸಾವಿರ, ದ್ವಿತೀಯ ಬಹುಮಾನವಾಗಿ ರೂ. 3 ಸಾವಿರ ಹಾಗೂ ತೃತೀಯ ಬಹುಮಾನವಾಗಿ ರು. 2 ಸಾವಿರ ನೀಡಲಾಯಿತು.

ಈ ಸಂದರ್ಭ ಮಾತನಾಡಿದ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಚಂದ್ರಶೇಖರ್ ಅವರು ಸಿರಿಧಾನ್ಯ ಉಪಯೋಗದಿಂದ ಹಲವು ರೀತಿಯ ಪೋಷಕಾಂಶಗಳು ದೊರೆಯಲಿದ್ದು, ಇವುಗಳನ್ನು ಬಳಸುವಂತಾಗಬೇಕು ಎಂದು ಸಲಹೆ ಮಾಡಿದರು.

ಸಿರಿಧಾನ್ಯ ಬಳಕೆಯಿಂದ ಮೂಳೆಯು ಸಹ ಗಟ್ಟಿಯಾಗಲಿದೆ. ಕ್ಯಾಲ್ಸಿಯಂ ದೊರೆಯಲಿದೆ. ಆದ್ದರಿಂದ ಸಿರಿಧಾನ್ಯ ಬಳಕೆ ಅತ್ಯಗತ್ಯ ಎಂದರು.