ರಸ್ತೆಯಿಂದ ಹಿಂದಕ್ಕೆ ಸರಿದು ಬೀದಿಬದಿ ವ್ಯಾಪಾರ ನಡೆಸಿ

| Published : Jul 19 2025, 01:00 AM IST

ಸಾರಾಂಶ

ಪಟ್ಟಣದಲ್ಲಿ ಸುಗಮ ಸಂಚಾರ ವ್ಯವಸ್ಥೆ ರೂಪಿಸಬೇಕಾಗಿದೆ. ಬೀದಿಬದಿ ವ್ಯಾಪಾರಕ್ಕೆ ಪರ್ಯಾಯ ವ್ಯವಸ್ಥೆ ಮಾಡುವವರೆಗೆ ವ್ಯಾಪಾರಿಗಳು ರಸ್ತೆ ಬದಿಯಿಂದ ಸ್ವಲ್ಪ ಹಿಂದಕ್ಕೆ ಸರಿದು, ತಮ್ಮ ವ್ಯಾಪಾರ ಮಾಡಲು ಸೂಚಿಸಬೇಕು ಎಂದು ಪುರಸಭಾ ಸದಸ್ಯ ಧರ್ಮಪ್ಪ ಹೇಳಿದ್ದಾರೆ.

- ಹೊನ್ನಾಳಿ ಪುರಸಭೆ ತುರ್ತು ಸಭೆಯಲ್ಲಿ ಅಧ್ಯಕ್ಷರಿಗೆ ಸದಸ್ಯ ಧರ್ಮಪ್ಪ ಆಗ್ರಹ । ಮಳಿಗೆಗಳ ಮುಂಗಟ್ಟು ತೆರವಿಗೂ ಒತ್ತಾಯ

- - -

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಪಟ್ಟಣದಲ್ಲಿ ಸುಗಮ ಸಂಚಾರ ವ್ಯವಸ್ಥೆ ರೂಪಿಸಬೇಕಾಗಿದೆ. ಬೀದಿಬದಿ ವ್ಯಾಪಾರಕ್ಕೆ ಪರ್ಯಾಯ ವ್ಯವಸ್ಥೆ ಮಾಡುವವರೆಗೆ ವ್ಯಾಪಾರಿಗಳು ರಸ್ತೆ ಬದಿಯಿಂದ ಸ್ವಲ್ಪ ಹಿಂದಕ್ಕೆ ಸರಿದು, ತಮ್ಮ ವ್ಯಾಪಾರ ಮಾಡಲು ಸೂಚಿಸಬೇಕು ಎಂದು ಪುರಸಭಾ ಸದಸ್ಯ ಧರ್ಮಪ್ಪ ಹೇಳಿದರು.

ಹೊನ್ನಾಳಿ ಜೆಎಂಎಫ್‌ಸಿ ನ್ಯಾಯಾಧೀಶರು ಹೊನ್ನಾಳಿ ಪಟ್ಟಣದ ಶಾಂತ ಟಾಕೀಸ್ ರಸ್ತೆ, ತುಮ್ಮಿನಕಟ್ಟೆ ಹಾಗೂ ನ್ಯಾಮತಿ ರಸ್ತೆಯಲ್ಲಿ ವ್ಯಾಪಾರ ಮಾಡಲು ಸಂತೆ ಮೈದಾನದಲ್ಲಿ ಅವಕಾಶ ಮಾಡಿಕೊಡಿ ಹಾಗೂ ಖಾಸಗಿ ಬಸ್ ನಿಲ್ದಾನದಲ್ಲಿರುವ ಮಳಿಗೆಗಳ ಮುಂಭಾಗದಲ್ಲಿರುವ ಮೇಲ್ಚಾವಣಿ ತೆರವುಗೊಳಿಸುವ ಬಗ್ಗೆ ಮೌಖಿಕವಾಗಿ ಪುರಸಭೆ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ. ಈ ಹಿನ್ನಲೆ ಈ ಬಗ್ಗೆ ಚರ್ಚಿಸಲು ಪುರಸಭೆ ಅಧ್ಯಕ್ಷ ಮೈಲಪ್ಪ ಅಧ್ಯಕ್ಷತೆಯಲ್ಲಿ ಕರೆದ ತುರ್ತು ಸಭೆಯಲ್ಲಿ ಅವರು ಮಾತನಾಡಿದರು.

ಹೊನ್ನಾಳಿಯ ಪ್ರಮುಖ ರಸ್ತೆಗಳ ಬೀದಿಯಲ್ಲಿ ವ್ಯಾಪಾರ ಮಾಡುವವರಿಗೆ ಸೂಕ್ತ ವ್ಯವಸ್ಥೆಯನ್ನು ಸ್ವಲ್ಪ ಸಮಯದಲ್ಲೇ ಕಲ್ಪಿಸುವ ಬಗ್ಗೆ ಈಗಾಗಲೇ ಶಾಸಕರ ಅಧ್ಯಕ್ಷತೆಯಲ್ಲಿ ಚರ್ಚೆ ನೆಡೆದಿರುವ ಬಗ್ಗೆ ನ್ಯಾಯಾಧೀಶರ ಗಮನಕ್ಕೆ ತನ್ನಿ ಎಂದು ಪುರಸಭೆ ಮುಖ್ಯಾಧಿಕಾರಿ ಲೀಲಾವತಿ ಅವರಿಗೆ ಸದಸ್ಯರು ತಿಳಿಸಿದರು.

ಪುರಸಭೆಗೆ ಸೇರಿದ ಮಳಿಗೆ ಪಡೆದಿರುವ ಬಾಡಿಗೆದಾರರು ತಮ್ಮ ಅಂಗಡಿಯಿಂದ ಮುಂದಕ್ಕೆ ಬಂದಿದ್ದಾರೆ. ಅವರಿಗೂ ತಿಳಿಹೇಳಿ, ಪುರಸಭೆ ಬಾಡಿಗೆ ನೀಡಿರುವ ಮಳಿಗೆಯಿಂದ ಸ್ವಲ್ಪವೇ ಮಾತ್ರ ಮುಂದಕ್ಕೆ ಇರಬೇಕು. ಅದಕ್ಕಿಂತ ಮುಂದೆ ಇರುವ ಮಳಿಗೆಗಳ ಮಾಲೀಕರಿಗೆ ತಿಳಿಸಿ, ಮುಂದಕ್ಕೆ ಚಾಚಿರುವ ನಿರ್ಮಾಣಗಳನ್ನು ತೆರವುಗೊಳಿಸುವುದಕ್ಕೆ ನಮ್ಮ ಅಭ್ಯಂತರ ಇಲ್ಲ ಎಂದು ಸಭೆಯಲ್ಲಿದ್ದ ಎಂ.ಸುರೇಶ್ ಇತತರ ಸದಸ್ಯರು ಸ್ಪಷ್ಟಪಡಿಸಿದರು.

ಅಧ್ಯಕ್ಷರ ವಿರುದ್ದ ತಿರುಗಿ ಬಿದ್ದರು:

ಅಧ್ಯಕ್ಷರು ತಮ್ಮ ವಾರ್ಡಿನಲ್ಲಿ ಪ್ರತಿ 15 ದಿನಗಳಿಗೊಮ್ಮೆ ಸ್ವಚ್ಛತೆ ಮಾಡಿಸುತ್ತಾರೆ. ಆದರೆ ನಮ್ಮ ವಾರ್ಡಿನಲ್ಲಿ 4 ತಿಂಗಳಾದರೂ ಸ್ವಚ್ಛತೆ ಮಾಡಿಸಲ್ಲ, ಇದ್ಯಾವ ನ್ಯಾಯ ಎಂದು ಪುರಸಭಾ ಮಾಜಿ ಅಧ್ಯಕ್ಷ ಬಾಬು ಹೋಬಳದಾರ್ ಹಾಗೂ ರಂಗನಾಥ್ ಏರುಧ್ವನಿಯಲ್ಲಿ ಪ್ರಶ್ನಿಸಿದರು. ನಾವು ನಮ್ಮ ವಾರ್ಡಿನ ಜನರಿಗೆ ಏನು ಉತ್ತರ ಕೊಡಬೇಕು ಹೇಳಿ ಎಂದು ಹೇಳಿದರು.

ಮಧ್ಯ ಪ್ರವೇಶಿಸಿದ ಮುಖ್ಯಾಧಿಕಾರಿ ಲೀಲಾವತಿ, ಕೆಲವೇ ದಿನಗಳಲ್ಲಿ ಎಲ್ಲ ವಾರ್ಡ್‌ಗಳ ಸ್ವಚ್ಛತೆ ಮಾಡಿಸುತ್ತೇವೆ ಎಂದು ಸಭೆಗೆ ಭರವಸೆ ನೀಡಿದರು. ನಾನು ನನ್ನ ವಾರ್ಡಿನ ಸ್ವಚ್ಛತೆ ಮಾತ್ರವೇ ಮಾಡಲು ತಿಳಿಸಿಲ್ಲ. ಪಟ್ಟಣದ 18 ವಾರ್ಡ್‌ಗಳಲ್ಲೂ ಸ್ವಚ್ಛತಾ ಕ್ರಮ ಕೈಗೊಳ್ಳಬೇಕು ಎಂದು ಆರೋಗ್ಯ ನಿರೀಕ್ಷರಿಗೆ ಸೂಚಿಸಿದ್ದೇನೆ ಎಂದು ಪುರಸಭಾ ಅಧ್ಯಕ್ಷ ಮೈಲಪ್ಪ ಹೇಳಿದರು.

ಪುರಸಭಾ ಹಿರಿಯ ಸದಸ್ಯ ಬಾವಿಮನೆ ರಾಜಪ್ಪ, ರಾಜೇಂದ್ರ ಮಾತನಾಡಿದರು. ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ್ ಹೊಸಕೇರಿ.ರಂಜಿತ ವಡ್ಡಿ ಚನ್ನಪ್ಪ, ನಾಮಿನಿ ಸದಸ್ಯರಾದ ಮಾದಪ್ಪ, ಚಂದ್ರಪ್ಪ, ರವಿ, ಎಂಜಿನಿಯರ್ ದೇವರಾಜ್ ಇತರರು ಇದ್ದರು.

- - -

(ಕೋಟ್‌) ಖಾಸಗಿ ಬಸ್ ನಿಲ್ದಾಣದಲ್ಲಿ ಒಳಗೆ ಎಲ್ಲೆಂದರಲ್ಲಿ ದ್ವಿಚಕ್ರ ವಾಹನಗಳನ್ನು ನಿಲ್ಲಿಸುತ್ತಾರೆ. ಬಸ್ ನಿಲ್ದಾಣದ ಒಳಗೆ ನಿಲ್ಲಿಸದರೆ ಬಸ್‌ಗಳಿಗೆ ಹಾಗೂ ಪ್ರಯಾಣಿಕರಿಗೂ ತೀವ್ರ ತೊಂದರೆಯಾಗುತ್ತದೆ. ಸ್ಕೂಟರ್ ಹಾಗೂ ಬೈಕ್‌ಗಳನ್ನು ನಿಲ್ಲಿಸದಂತೆ ಕ್ರಮ ಕೈಗೊಳ್ಳಿ. ಅದಕ್ಕೂ ಬಗ್ಗದಿದ್ದರೆ ಹೋಂ ಗಾರ್ಡ್‌ಗಳನ್ನು ನಿಯೋಜಿಸಿ, ನಿಯಂತ್ರಣಕ್ಕೆ ತನ್ನಿ.

- ಸಾವಿತ್ರಮ್ಮ ವಿಜೇಂದ್ರಪ್ಪ, ಉಪಾಧ್ಯಕ್ಷೆ

- - -

-18ಎಚ್.ಎಲ್.ಐ1.ಜೆಪಿಜಿ:

ಪುರಸಭೆಯಲ್ಲಿ ನಡೆದ ತುರ್ತು ಸಭೆಯಲ್ಲಿ ಮುಖ್ಯಾಧಿಕಾರಿ ಲೀಲಾವತಿ ಮಾತನಾಡಿದರು. ಅಧ್ಯಕ್ಷ ಮೈಲಪ್ಪ, ಉಪಾಧ್ಯಕ್ಷೆ ಸಾವಿತ್ರಮ್ಮ ವಿಜೇಂದ್ರಪ್ಪ, ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ್‌, ಸದಸ್ಯರು ಇದ್ದರು.