ಅಂಗವಿಕಲರಿದ್ದರೂ ಮಹತ್ತರ ಸಾಧನೆಗಳನ್ನು ಮಾಡಿ ಸೈ ಎನಿಸಿಕೊಂಡವರು ನಮ್ಮ ಸುತ್ತಮುತ್ತಲಿದ್ದಾರೆ. ಅಂಗವಿಕಲರು ಆತ್ಮವಿಶ್ವಾಸದಿಂದ ಮುನ್ನಡೆಯಬೇಕು.
ಹುಬ್ಬಳ್ಳಿ:
ಅಂಗವೈಕಲ್ಯ ಶಾಪವಲ್ಲ ಎಂದು ತಿಳಿದುಕೊಂಡು ಆತ್ಮವಿಶ್ವಾಸ, ಮನೋಸ್ಥೈರ್ಯದಿಂದ ಮುನ್ನೆಡೆದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಮಜೇಥಿಯಾ ಫೌಂಡೇಷನ್ ಚೇರಮನ್ ಜೀತೇಂದ್ರ ಮಜೇಥಿಯಾ ಅಭಿಪ್ರಾಯಪಟ್ಟರು.ವಿಶ್ವ ಅಂಗವಿಕಲರ ದಿನದಂಗವಾಗಿ ಮಜೇಥಿಯಾ ಫೌಂಡೇಶನ್ ಇಲ್ಲಿನ ಮೂರುಸಾವಿರ ಮಠದ ಸಭಾಂಗಣದಲ್ಲಿ ಆಯೋಜಿಸಿದ್ದ ಕೃತಕ ಕಾಲು, ಕೈ ಜೋಡಣಾ ಶಿಬಿರದಲ್ಲಿ ಮಾತನಾಡಿದ ಅವರು, ಅಂಗವಿಕಲರಿದ್ದರೂ ಮಹತ್ತರ ಸಾಧನೆಗಳನ್ನು ಮಾಡಿ ಸೈ ಎನಿಸಿಕೊಂಡವರು ನಮ್ಮ ಸುತ್ತಮುತ್ತಲಿದ್ದಾರೆ. ಅಂಗವಿಕಲರು ಆತ್ಮವಿಶ್ವಾಸದಿಂದ ಮುನ್ನಡೆಯಬೇಕು. ಅಂದಾಗ ಎಂಥ ಸಾಧನೆಯನ್ನಾದರೂ ಮಾಡಿ ತೋರಿಸಬಹುದು ಎಂದರು.
ಮಜೇಥಿಯಾ ಫೌಂಡೇಶನ್ ಹತ್ತು, ಹಲವು ಸಾಮಾಜಿಕ ಕಾರ್ಯ ಮಾಡುತ್ತಾ ಬಂದಿದೆ ಎಂದು ಹಾಸ್ಪೈಸ್ ಸೆಂಟರ್, ಗೋಶಾಲೆ ಸೇರಿದಂತೆ ವಿವಿಧ ಸಾಮಾಜಿಕ ಕಾರ್ಯಗಳ ಬಗ್ಗೆ ವಿವರಿಸಿದರು.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಂಡು ಕುಲಕರ್ಣಿ ಮಾತನಾಡಿ, ಮಜೇಥಿಯಾ ಫೌಂಡೇಶನ್‌ನಿಂದ ಸಾಮಾಜಿಕ ಕಾರ್ಯಗಳು ನಿರಂತರವಾಗಿ ನಡೆಯುತ್ತಲೇ ಇರುತ್ತವೆ. ಅದರಲ್ಲೂ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಸ್ಥಾಪಿಸಿರುವ ಹಾಸ್ಪೈಸ್ ಸೆಂಟರ್ ರೋಗಿಗಳಿಗೆ ನೆಮ್ಮದಿ ತಾಣವೆನಿಸಿದೆ ಎಂದರು.
ಈ ವೇಳೆ 11 ಜನ ಅಂಗವಿಕಲರಿಗೆ ಕೃತಕ ಕಾಲು ಹಾಗೂ ಕೈ ಜೋಡಿಸಲಾಯಿತು. ಹುಟ್ಟಿನಿಂದ ಕೈ ಇಲ್ಲದ ಮನಸೂರಿನ ವ್ಯಕ್ತಿಯೊಬ್ಬರಿಗೆ ಕೃತಕ ಕೈ ಜೋಡಿಸಿದ್ದರಿಂದ ಸಂತಸಗೊಂಡ ಆತ ಕೈ ಇಲ್ಲ ಎಂಬ ಕೊರಗು ಈ ಕ್ಷಣದಿಂದ ಮರೆಯಾದಂತಾಯಿತು ಎಂದು ಕೆಲಕ್ಷಣ ಭಾವುಕನಾಗಿದ.ಕಾರ್ಯಕ್ರಮದಲ್ಲಿ ಮಜೇಥಿಯಾ ಫೌಂಡೇಶನ್ ಕಾರ್ಯದರ್ಶಿ ಅಮರೇಶ ಹಿಪ್ಪರಗಿ ಪ್ರಾಸ್ತಾವಿಕ ಮಾತನಾಡಿದರು. ಫೌಂಡೇಶನ್ ಸಿಇಒ ಸುನೀಲಕುಮಾರ ಕುಕನೂರ, ಸಾಧನಾ ಪೂಜಾರ, ಶ್ವೇತಾ ಜೈನ್, ಕವಿತಾ ಮೊಹರೆ, ರೇಖಾ ಅಪ್ಟೆ, ಪತ್ರಕರ್ತರ ಸಂಘದ ಉಪಾಧ್ಯಕ್ಷರಾದ ಶಿವಾನಂದ ಗೊಂಬಿ, ಬಸವರಾಜ ವಿಜಾಪುರ, ಪ್ರಕಾಶ ಚಳಗೇರಿ, ಖಜಾಂಚಿ ತನುಜಾ ನಾಯಕ, ಕಾರ್ಯದರ್ಶಿಗಳಾದ ಶಿವಶಂಕರ ಕಂಠಿ, ಪ್ರಸನ್ನ ಹಿರೇಮಠ ಸೇರಿದಂತೆ ಹಲವರಿದ್ದರು.