ಪಾಸ್‌ಪೋರ್ಟ್ ಕೇಂದ್ರ ಮಂಡ್ಯಕ್ಕೆ ಸ್ಥಳಾಂತರಿಸಿ: ವೇಣುಗೋಪಾಲ್

| Published : Sep 10 2024, 01:39 AM IST

ಪಾಸ್‌ಪೋರ್ಟ್ ಕೇಂದ್ರ ಮಂಡ್ಯಕ್ಕೆ ಸ್ಥಳಾಂತರಿಸಿ: ವೇಣುಗೋಪಾಲ್
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದ ಇತರೆ ಜಿಲ್ಲೆಗಳಲ್ಲಿ ಪಾಸ್‌ಪೋರ್ಟ್ ಕೇಂದ್ರ ಜಿಲ್ಲಾ ಕೇಂದ್ರದಲ್ಲಿದ್ದರೆ ಮಂಡ್ಯದಲ್ಲಿ ಮಾತ್ರ ತಾಲೂಕು ಕೇಂದ್ರದಲ್ಲಿ ಸ್ಥಾಪನೆಗೊಂಡಿದೆ. ಕಳೆದ ಏಳು ವರ್ಷಗಳ ಹಿಂದೆ ರಾಜಕೀಯ ಒತ್ತಡಕ್ಕೆ ಮಣಿದು ಮಂಡ್ಯದಲ್ಲಿ ಸ್ಥಾಪನೆಯಾಗಬೇಕಿದ್ದ ಪಾಸ್‌ಪೋರ್ಟ್ ಕೇಂದ್ರವನ್ನು ಮದ್ದೂರಿಗೆ ಕೊಂಡೊಯ್ಯಲಾಯಿತು. ಇದರಿಂದ ಜಿಲ್ಲೆಯ ಜನರಿಗೆ ತೀವ್ರ ಅನಾನುಕೂಲವಾಗುತ್ತಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮದ್ದೂರು ತಾಲೂಕು ಕೇಂದ್ರದಲ್ಲಿರುವ ಪಾಸ್‌ಪೋರ್ಟ್ ಕೇಂದ್ರವನ್ನು ಮಂಡ್ಯ ಜಿಲ್ಲಾ ಕೇಂದ್ರಕ್ಕೆ ಸ್ಥಳಾಂತರಿಸಬೇಕೆಂದು ಮೈಷುಗರ್ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಸಾತನೂರು ವೇಣುಗೋಪಾಲ್ ಆಗ್ರಹಪಡಿಸಿದರು.

ರಾಜ್ಯದ ಇತರೆ ಜಿಲ್ಲೆಗಳಲ್ಲಿ ಪಾಸ್‌ಪೋರ್ಟ್ ಕೇಂದ್ರ ಜಿಲ್ಲಾ ಕೇಂದ್ರದಲ್ಲಿದ್ದರೆ ಮಂಡ್ಯದಲ್ಲಿ ಮಾತ್ರ ತಾಲೂಕು ಕೇಂದ್ರದಲ್ಲಿ ಸ್ಥಾಪನೆಗೊಂಡಿದೆ. ಕಳೆದ ಏಳು ವರ್ಷಗಳ ಹಿಂದೆ ರಾಜಕೀಯ ಒತ್ತಡಕ್ಕೆ ಮಣಿದು ಮಂಡ್ಯದಲ್ಲಿ ಸ್ಥಾಪನೆಯಾಗಬೇಕಿದ್ದ ಪಾಸ್‌ಪೋರ್ಟ್ ಕೇಂದ್ರವನ್ನು ಮದ್ದೂರಿಗೆ ಕೊಂಡೊಯ್ಯಲಾಯಿತು. ಇದರಿಂದ ಜಿಲ್ಲೆಯ ಜನರಿಗೆ ತೀವ್ರ ಅನಾನುಕೂಲವಾಗುತ್ತಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಅಂದು ಸಂಸದರಾಗಿದ್ದ ಎಲ್.ಆರ್.ಶಿವರಾಮೇಗೌಡರು ಮದ್ದೂರು ಶಾಸಕ ಡಿ.ಸಿ.ತಮ್ಮಣ್ಣನವರ ರಾಜಕೀಯ ಒತ್ತಡಕ್ಕೆ ಮಣಿದು ಮದ್ದೂರಿನಲ್ಲಿ ಪಾಸ್‌ಪೋರ್ಟ್ ಕೇಂದ್ರ ತೆರೆಯುವುದಕ್ಕೆ ಅವಕಾಶ ಮಾಡಿಕೊಟ್ಟರು. ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರದವರು ಪಾಸ್‌ಪೋರ್ಟ್ ಮಾಡಿಸುವುದಕ್ಕೆ ಮಂಡ್ಯಕ್ಕೆ ಬಂದು ಮದ್ದೂರಿಗೆ ತೆರಳಬೇಕಿದೆ. ಇದರಿಂದ ಸಮಯ ವ್ಯರ್ಥವಾಗುತ್ತಿದೆ ಎಂದು ದೂರಿದರು.

ಆಡಳಿತಾತ್ಮಕ ಮತ್ತು ಸೇವಾ ವಲಯಕ್ಕೆ ಸಂಬಂಧಿಸಿದಂತೆ ಪ್ರಧಾನ ಕಚೇರಿಗಳು ಜಿಲ್ಲಾ ಕೇಂದ್ರದಲ್ಲಿವೆ. ಇದರಿಂದ ಸಾರ್ವಜನಿಕರಿಗೆ ಜಿಲ್ಲಾ ಕೇಂದ್ರದಲ್ಲೇ ಸೌಲಭ್ಯಗಳು ಸಿಗುತ್ತಿವೆ. ಹಾಗಾಗಿ ಸಾರ್ವಜನಿಕರ ಹಿತದೃಷ್ಟಿಯಿಂದ ಜಿಲ್ಲಾ ಕೇಂದ್ರದಲ್ಲೇ ಪಾಸ್‌ಪೋರ್ಟ್ ಕೇಂದ್ರ ತೆರೆಯಬೇಕು ಎಂದು ಮನವಿ ಮಾಡಿದರು.

ಪಾಸ್‌ಪೋರ್ಟ್ ಕೇಂದ್ರ ಸ್ಥಳಾಂತರಿಸಿದರೆ ಹೊರಾಟ ನಡೆಸುವುದಾಗಿ ಮದ್ದೂರು ಶಾಸಕ ಕೆ.ಎಂ.ಉದಯ್ ಅವರು ಎಚ್ಚರಿಸಿದ್ದಾರೆ. ಇದರಲ್ಲಿ ಸಾರ್ವಜನಿಕರ ಹಿತಾಸಕ್ತಿ ಅಡಗಿದೆಯೇ ವಿನಃ ಪ್ರತಿಷ್ಠೆಯಲ್ಲ. ಜಿಲ್ಲಾ ಕೇಂದ್ರದಲ್ಲಿರಬೇಕಾದ ಪಾಸ್‌ಪೋರ್ಟ್ ಕೇಂದ್ರ ತಾಲೂಕು ಕೇಂದ್ರದಲ್ಲಿರುವುದರಿಂದ ಜಿಲ್ಲೆಗೆ ಇರುಸು-ಮುರುಸಾಗುತ್ತಿದೆ. ಇದನ್ನು ಜನಪ್ರತಿನಿಧಿಗಳಾದವರು ಅರಿಯಬೇಕು. ಜನರಿಗೆ ಅನುಕೂಲ ಕಲ್ಪಿಸಿಕೊಡುವುದು ಶಾಸಕರಾದವರ ಕರ್ತವ್ಯ. ಅದಕ್ಕಾಗಿ ಮದ್ದೂರು ತಾಲೂಕು ಕೇಂದ್ರದಲ್ಲಿರುವ ಪಾಸ್‌ಪೋರ್ಟ್ ಕೇಂದ್ರವನ್ನು ಮಂಡ್ಯ ಜಿಲ್ಲಾ ಕೇಂದ್ರಕ್ಕೆ ಸ್ಥಳಾಂತರಿಸುವುದಕ್ಕೆ ಅವಕಾಶ ಮಾಡಿಕೊಡುವಂತೆ ಕೋರಿದರು.

ಹಿಂದಿನಿಂದಲೂ ಪಾಸ್‌ಪೋರ್ಟ್ ಕೇಂದ್ರವನ್ನು ಮಂಡ್ಯಕ್ಕೆ ಸ್ಥಳಾಂತರಿಸುವಂತೆ ಸಂಬಂಧಪಟ್ಟ ಜನಪ್ರತಿನಿಧಿಗಳು, ಅಧಿಕಾರಿವರ್ಗದವರು, ಸಂಸದರಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಇದೀಗ ಸಂಸದ ಎಚ್‌. ಡಿ. ಕುಮಾರಸ್ವಾಮಿ ಅವರೇ ಪಾಸ್‌ಪೋರ್ಟ್ ಕೇಂದ್ರವನ್ನು ಮಂಡ್ಯದಲ್ಲಿ ಸ್ಥಾಪಿಸುವುದಕ್ಕೆ ಆಸಕ್ತಿ ತೋರಿದ್ದಾರೆ. ಅವರ ಆಲೋಚನೆ ಉತ್ತಮವಾಗಿದೆ. ಪಾಸ್‌ಪೋರ್ಟ್ ಕೇಂದ್ರದ ಸೌಲಭ್ಯಗಳು ಜಿಲ್ಲೆಯ ಎಲ್ಲಾ ತಾಲೂಕಿನ ಜನರಿಗೂ ದೊರೆಯಬೇಕಿದೆ. ಅದಕ್ಕಾಗಿ ಪಾಸ್‌ಪೋರ್ಟ್ ಕೇಂದ್ರವನ್ನು ಮಂಡ್ಯ ಜಿಲ್ಲಾ ಕೇಂದ್ರಕ್ಕೆ ಸ್ಥಳಾಂತರಿಸುವ ನಿಟ್ಟಿನಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಕಾರ್ಯೋನ್ಮುಖರಾಗಬೇಕು ಎಂದು ಒತ್ತಾಯಿಸಿದರು.

ಗೋಷ್ಠಿಯಲ್ಲಿ ಒಕ್ಕೂಟದ ಗೌರವಾಧ್ಯಕ್ಷ ಎಸ್.ಕೃಷ್ಣ, ಗ್ರಾಮೀಣ ಕನ್ನಡಿಗರ ಸಂಘಟನೆ ಮುಖಂಡ ಅಭಿಗೌಡ, ಜೈ ಕರ್ನಾಟಕ ಪರಿಷತ್ತಿನ ಎಸ್.ಪಿ.ನಾರಾಯಣಸ್ವಾಮಿ, ಮಂಡ್ಯ ಜಿಲ್ಲಾ ರೈತ ಸಂಘದ ಅಧ್ಯಕ್ಷ ಶಿವಳ್ಳಿ ಚಂದ್ರಶೇಖರ್ ಉಪಸ್ಥಿತರಿದ್ದರು.