ಚಳವಳಿ ಪ್ರಜ್ಞೆ, ಸಾಹಿತ್ಯದ ಪ್ರಜ್ಞೆ ಬೇರೆಯಲ್ಲ

| Published : Jul 28 2025, 12:30 AM IST

ಚಳವಳಿ ಪ್ರಜ್ಞೆ, ಸಾಹಿತ್ಯದ ಪ್ರಜ್ಞೆ ಬೇರೆಯಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

ಚಳವಳಿಯ ಪ್ರಜ್ಞೆ ಮತ್ತು ಸಾಹಿತ್ಯ ಪ್ರಜ್ಞೆ ಪರಸ್ಪರ ಬೇರೆಯಲ್ಲ ಎನ್ನುವ ತಿಳುವಳಿಕೆ ನಮಗೆ ಬಹಳ ಅಗತ್ಯವಿದೆ ಎಂದು ನಾಡೋಜ ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟಿದ್ದಾರೆ.

ಕನ್ನಡಪ್ರಭ ವಾರ್ತೆ, ತುಮಕೂರುಚಳವಳಿಯ ಪ್ರಜ್ಞೆ ಮತ್ತು ಸಾಹಿತ್ಯ ಪ್ರಜ್ಞೆ ಪರಸ್ಪರ ಬೇರೆಯಲ್ಲ ಎನ್ನುವ ತಿಳುವಳಿಕೆ ನಮಗೆ ಬಹಳ ಅಗತ್ಯವಿದೆ ಎಂದು ನಾಡೋಜ ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟಿದ್ದಾರೆ.ಬಂಡಾಯ ಸಂಘಟನೆ ತುಮಕೂರು ಘಟಕದಿಂದ ತುಮಕೂರಿನಲ್ಲಿ ಹಮ್ಮಿಕೊಂಡಿದ್ದ ಚಳವಳಿಯ ಸಂಗಾತಿಯಾಗಿ ಕನ್ನಡ ಸಾಹಿತ್ಯ ಎಂಬ ರಾಜ್ಯಮಟ್ಟದ ಸಾಹಿತ್ಯ ಸಂವಾದ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿ ಅವರು ಮಾತನಾಡಿದರು. ಚಳವಳಿಯಲ್ಲಿ ಭಾಗವಹಿಸಿದ ಕೂಡಲೇ ನಮ್ಮ ಸೃಜನಶೀಲ ಸ್ವಾತಂತ್ರ್ಯ ಕಳೆದುಹೋಗುತ್ತದೆ, ಸೃಜನಶೀಲ ತತ್ವಕ್ಕೆ ಧಕ್ಕೆ ಬರುತ್ತದೆ ಅಂತಾ ಆಗಲಿ ಭಾವಿಸಿಕೊಳ್ಳುವುದು ಒಂದು ಸಾಂಸ್ಕೃತಿಕ ಮೂಢನಂಬಿಕೆ. ಅನೇಕರು ಅದನ್ನು ಸಾಧಿಸಿ ತೋರಿಸಿದ್ದಾರೆ. ಹಾಗಾಗಿ ಒಂದು ಸಾಮಾಜಿಕ ಜವಾಬ್ದಾರಿಯಿಂದ, ಬದ್ಧತೆಯಿಂದ ಬರೆಯುತ್ತಿರುವವರು ಯಾರು ಇದ್ದಾರೆ. ಅವರು ಚಳವಳಿಯ ಜೊತೆಯಲ್ಲಿ ಗುರುತಿಸಿಕೊಂಡ ಕೂಡಲೇ ಅವರ ಸೃಜನಶೀಲ ಸ್ವಾತಂತ್ರ್ಯ ಮತ್ತು ಅದರ ತತ್ವ ಅದು ಕುಗ್ಗಿಹೋಗಿಲ್ಲ ಎನ್ನುವ ವಿಚಾರವನ್ನು ನಾವು 1979 ರಿಂದ ಮಾತನಾಡುತ್ತಲೇ ಬರುತ್ತಿದ್ದೇವೆ ಎಂದು ಹೇಳಿದರು.ಒಂದು ಪರಂಪರೆಯ ಪ್ರಜ್ಞೆಯಲ್ಲೇ ಒಂದು ಚಳವಳಿಯಿದೆ. ಕನ್ನಡ ಸಾಹಿತ್ಯ ಪರಂಪರೆಯನ್ನು ನೋಡುತ್ತಾ ಬಂದರೆ, ಅದರ ಒಳಗಡೆ ಸಹ ಚಳವಳಿ ಇದೆ. ಹಾಗಾದರೆ ಚಳವಳಿಯ ಪ್ರಜ್ಞೆ ಹೇಗಿರಬಹುದು ಎಂಬುದನ್ನು ನೋಡಿದರೆ ಸಾಹಿತ್ಯವೇ ಒಂದು ಚಳವಳಿಯಾಗಬಹುದು. ಅದು ಒಂದು ಮಾದರಿ. ಇನ್ನೊಂದು ಸಾಹಿತ್ಯೇತರ ಚಳವಳಿಗಳಿಂದ ಸಾಹಿತ್ಯ ಪ್ರಭಾವಕ್ಕೆ ಒಳಗಾಗಬಹುದು. ಸಾಹಿತ್ಯೇತರ ಚಳವಳಿ ಅಂದರೆ ಅದು ರೈತ, ದಲಿತ, ಮಹಿಳೆ ಚಳವಳಿ ಹೀಗೆ ವಿವಿಧ ರೀತಿಯ ಚಳವಳಿಗಳೇನಿದೆ ಆ ಚಳವಳಿಗಳಿಂದ ಸಾಹಿತ್ಯ ಪ್ರಭಾವಿತವಾಗುವುದು ಇನ್ನೊಂದು ವಿಧಾನ ಇದೆ ಎಂದರು.ಇನ್ನೊಂದು ಸಾಹಿತಿಗಳೇ ನೇರವಾಗಿ ಚಳವಳಿಗಳಲ್ಲಿ ಗುರುತಿಸಿಕೊಳ್ಳುವುದು, ಹೀಗೆ ಬೇರೆ ಬೇರೆ ರೀತಿಯಲ್ಲಿ ಅಂದಿನಿಂದ ಇಂದಿನವರೆಗೂ ಅಭಿವ್ಯಕ್ತಗೊಳ್ಳುತ್ತಲೇ ಬರುತ್ತಿವೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಅನೇಕರು ನೇರವಾಗಿ ಚಳವಳಿಗಳಲ್ಲಿ ಭಾಗವಹಿಸಿದವರೂ ಇದ್ದಾರೆ. ಅವರೂ ಕೂಡ ಒಳ್ಳೆಯ ಸಾಹಿತ್ಯವನ್ನೇ ಬರೆದಿದ್ದಾರೆ. ಆದರೆ ಅದನ್ನು ನೋಡುವ ಕಣ್ಣು ಇದೆಯಲ್ಲ ಅದು ಬಹಳ ಮುಖ್ಯವಾದುದು. ಕೆಲವರು ಚಳವಳಿಗಳಲ್ಲಿ ಭಾಗವಹಿಸಿರುವುದಿಲ್ಲ. ಆದರೆ ಆವರ ಸಾಹಿತ್ಯದ ಒಳಗಡೆ ಚಳವಳಿ ಇರುತ್ತದೆ ಎಂದು ವಿವರಿಸಿದರು.ಪಂಪ ಮತ್ತು ಬಸವಣ್ಣ ಆಧುನಿಕ ಪೂರ್ವ ಸಾಹಿತ್ಯದಲ್ಲಿ ಇವರಿಬ್ಬರನ್ನು ಸಾಂಕೇತಿಕವಾಗಿ ಉದಾಹರಿಸುತ್ತೇನೆ. ಪಂಪ ನೇರವಾಗಿ ಚಳವಳಿಯನ್ನು ಕಟ್ಟಲಿಲ್ಲ ನಿಜ. ಆದರೆ ಬಸವಣ್ಣನವರು ನೇರವಾಗಿ ಒಂದು ಚಳವಳಿಗೆ ಕಾರಣರಾದರು. ಪಂಪನ ಕೃತಿಗಳು ಇಡೀ ಕನ್ನಡ ಸಾಹಿತ್ಯದಲ್ಲಿ, ಇಡೀ ಕರ್ನಾಟಕದ ಒಳಗಡೆ ಕುಲಪದ್ಧತಿಯನ್ನು ವಿರೋಧಿಸಿ ಮೊದಲು ಮಾತನಾಡಿದ ಕವಿ ಎಂದರೆ ಪಂಪನೇ. ಆದರೆ ಆ ಪಂಪನನ್ನು ಇಂದು ಗೌಣವಾಗಿಸಿದ್ದಾರೆ. ಪಂಪ ಮಾಡಿದ ಚಳವಳಿ ಪ್ರಭುತ್ವದ ಜೊತೆ ನಾವು ಹೇಗಿರಬೇಕು. ಸೃಜನಶೀಲ ಸ್ವಾತಂತ್ರ್ಯವನ್ನು ಬಿಟ್ಟುಕೊಡದೆ ಪ್ರಭುತ್ವದ ಜೊತೆ ಮುಖಾಮುಖಿಯಾಗುವುದು ಹೇಗೆ ಹೇಳಿಕೊಟ್ಟಿದ್ದಾನೆ ಎಂದರು.ಬಸವಣ್ಣನವರು ಹೊಸ ಹುಟ್ಟಿಗೆ ಕಾರಣರಾದವರು, ಬಸವಣ್ಣನವರು ನೇರವಾಗಿ ಚಳವಳಿಗೆ ಪ್ರೇರಣೆ ಒದಗಿಸಿಕೊಟ್ಟವರು. ಇಡೀ ಕನ್ನಡ ಸಾಹಿತ್ಯದಲ್ಲಿ ಕಥನವಿಲ್ಲದ ಕಾವ್ಯವನ್ನು ಕೊಟ್ಟದ್ದು ವಚನ ಸಾಹಿತ್ಯ ಎಂಬುದನ್ನು ನಾವು ಮರೆಯಬಾರದು ಪಂಪ, ಕುವೆಂಪು, ಬೇಂದ್ರೆ, ಕಾರಂತರಂಥವರು ನೇರವಾಗಿ ಚಳವಳಿಗೆ ಇಳಿಯಲಿಲ್ಲ. ಘೋಷಣೆ ಕೂಗಲಿಲ್ಲ. ಆದರೆ ಅವರ ಕೃತಿಗಳ ಒಳಗಡೆ ಮನಾತ್ಮಕ ಚಳವಳಿ ಇದೆ. ಬಸವಣ್ಣನವರ ನಂತರ ಬಂದ ಎಲ್ಲಾ ಚಳವಳಿಗಳೂ ಕ್ರಿಯಾತ್ಮಕ ಚಳವಳಿಗಳು ಎಂದು ನುಡಿದರು.ಸಾಹಿತಿ ಡಾ.ಕರೀಗೌಡ ಬೀಚನಹಳ್ಳಿ ಮಾತನಾಡಿದರು. ಜನಪರ ಚಿಂತಕ ಕೆ.ದೊರೈರಾಜ್ ಕಾರ್ಯದಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾದಂಬರಿಕಾರ ಡಾ.ಓ.ನಾಗರಾಜ್ ಪ್ರಾಸ್ತಾವಿಕ ಮಾತನಾಡಿದರು. ಡಾ. ನಾಗಭೂಷಣ ಬಗ್ಗನಡು ನಿರೂಪಿಸಿದರು.