ಸಾರಾಂಶ
ಬೆಂಗಳೂರು : ಚಲನಚಿತ್ರ ನಿರ್ಮಾಪಕ ಹಾಗೂ ಉದ್ಯಮಿ ಸೌಂದರ್ಯ ಜಗದೀಶ್ (52) ತಮ್ಮ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭಾನುವಾರ ನಡೆದಿದೆ.
ಮಹಾಲಕ್ಷ್ಮೀ ಲೇಔಟ್‌ನ ಮನೆಯಲ್ಲಿ ಈ ಘಟನೆ ನಡೆದಿದೆ. ಶನಿವಾರ ರಾತ್ರಿ ಕುಟುಂಬದ ಸದಸ್ಯರ ಜತೆಗೆ ಊಟ ಮಾಡಿ ತಮ್ಮ ಕೋಣೆಯಲ್ಲಿ ನಿದ್ದೆಗೆ ಜಾರಿದ್ದ ಜಗದೀಶ್, ಭಾನುವಾರ ಬೆಳಗಿನ ಜಾವ ಸುಮಾರು 3.30ಕ್ಕೆ ಕೋಣೆಯಿಂದ ಎದ್ದು ಹೊರಬಂದು ಅಡುಗೆ ಮನೆಯ ಪಕ್ಕದ ಪ್ಯಾಸೇಜ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬೆಳಗ್ಗೆ ಸುಮಾರು 8 ಗಂಟೆಗೆ ಪತ್ನಿ ರೇಖಾ ಎಚ್ಚರಗೊಂಡು ನೋಡಿದಾಗ ಜಗದೀಶ್ ಇರಲಿಲ್ಲ. ಎದ್ದು ಬಂದು ಹುಡುಕಾಡಿದಾಗ ಅಡುಗೆ ಮನೆಯ ಪಕ್ಕದ ಪ್ಯಾಸೇಜ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಜಗದೀಶ್ ಪತ್ತೆಯಾಗಿದ್ದಾರೆ. ಕೂಡಲೇ ರೇಖಾ ಅವರು ಪತಿಯ ಸ್ನೇಹಿತರಿಗೆ ಕರೆ ಮಾಡಿ ಮನೆಗೆ ಕರೆಸಿಕೊಂಡು ನೇಣಿನ ಕುಣಿಕೆಯಿಂದ ಜಗದೀಶ್‌ರನ್ನು ಬಿಡಿಸಿ ರಾಜಾಜಿನಗರದ ಸುಗುಣ ಆಸ್ಪತ್ರೆಗೆ ಕರೆತಂದಿದ್ದಾರೆ.
ಈ ವೇಳೆ ಪರೀಕ್ಷಿಸಿದ ವೈದ್ಯರು ಜಗದೀಶ್ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ. ಬಳಿಕ ಜಗದೀಶ್ ಸ್ನೇಹಿತರು ನೀಡಿದ ಮಾಹಿತಿ ಆಧರಿಸಿ ಮಹಾಲಕ್ಷ್ಮೀ ಲೇಔಟ್ ಠಾಣೆ ಪೊಲೀಸರು ಆಸ್ಪತ್ರೆಗೆ ಮತ್ತು ಮನೆಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
ಆರ್ಥಿಕ ಸಂಕಷ್ಟದಿಂದ ಮಾನಸಿಕ ನೋವು?:
ಜಗದೀಶ್ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಜಗದೀಶ್ ಸಿನಿಮಾ ನಿರ್ಮಾಣ, ವಿತರಣೆ, ರಿಯಲ್ ಎಸ್ಟೇಟ್ ವ್ಯವಹಾರ ಸೇರಿದಂತೆ ಹಲವು ಉದ್ಯಮಗಳಲ್ಲಿ ತೊಡಗಿಸಿಕೊಂಡಿದ್ದರು. ಸೌಂದರ್ಯ ಕನ್ಸ್‌ಸ್ಟ್ರಕ್ಷನ್ ಹೆಸರಿನ ರಿಯಲ್ ಎಸ್ಟೇಟ್ ಕಂಪನಿ ಮಾಲೀಕರಾಗಿದ್ದ ಜಗದೀಶ್, ಇತ್ತೀಚೆಗೆ ನಗರದ ಹೊರವಲಯದಲ್ಲಿ ಕೋಟ್ಯಂತರ ರು. ಹೂಡಿಕೆ ಮಾಡಿ ಲೇಔಟ್ ಅಭಿವೃದ್ಧಿಪಡಿಸುತ್ತಿದ್ದರು. ಈ ಯೋಜನೆಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಲಾಭ ಸಿಗದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕ್ಕಿದ್ದರು ಎನ್ನಲಾಗಿದೆ.
ಇತ್ತೀಚೆಗೆ ಅವರ ಅತ್ತೆ ವಯೋಸಹಜ ಕಾಯಿಲೆಗಳಿಂದ ಬಳಲಿ ಮೃತಪಟ್ಟಿದ್ದರು. ಆರ್ಥಿಕ ಸಂಕಷ್ಟ ಹಾಗೂ ಅತ್ತೆಯ ಸಾವಿನಿಂದ ಜಗದೀಶ್ ಕೊಂಚ ಮಾನಸಿಕವಾಗಿ ನೊಂದಿದ್ದರು ಎನ್ನಲಾಗಿದೆ. ಈ ಕಾರಣಗಳಿಂದ ಅವರು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಡೆತ್‌ನೋಟ್ ಸಿಕ್ಕಿಲ್ಲ:ಘಟನಾ ಸ್ಥಳದಲ್ಲಿ ಯಾವುದೇ ಮರಣಪತ್ರ ಪತ್ತೆಯಾಗಿಲ್ಲ. ಸದ್ಯ ಸೌಂದರ್ಯ ಜಗದೀಶ್ ಅವರ ಮೊಬೈಲ್ ಜಪ್ತಿ ಮಾಡಲಾಗಿದೆ. ಇನ್ನು ಸಾಲ ಕೊಟ್ಟಿದ್ದ ಹಣಕಾಸು ಸಂಸ್ಥೆಯವರು ಮನೆ ಜಪ್ತಿ ವಿಚಾರವಾಗಿ ನೋಟಿಸ್ ನೀಡಿದ್ದರು ಎನ್ನಲಾಗಿದೆ. ಆದರೆ, ಈ ಬಗ್ಗೆ ಖಚಿತ ಮಾಹಿತಿ ಇಲ್ಲ. ಇತ್ತೀಚೆಗೆ ಜಗದೀಶ್ ಆರ್ಥಿಕ ನಷ್ಟ ಅನುಭವಿಸಿದ್ದರು ಎಂದು ತಿಳಿದು ಬಂದಿದೆ. ಈ ಬಗ್ಗೆ ಕುಟುಂಬದ ಸದಸ್ಯರಿಂದ ಮಾಹಿತಿ ಪಡೆಯಲಾಗುವುದು. ಈ ಘಟನೆ ಸಂಬಂಧ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದ್ದು, ಎಲ್ಲಾ ಆಯಾಮಗಳಲ್ಲೂ ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.-ಬಾಕ್ಸ್-
ಸೌಂದರ್ಯ ಜಗದೀಶ್‌ಗೆ ಸಿನಿಮಾ ನಂಟುಮೃತ ಸೌಂದರ್ಯ ಜಗದೀಶ್ ಸಿನಿಮಾ ಕ್ಷೇತ್ರದಲ್ಲಿ ನಿರ್ಮಾಪಕ, ವಿತರಕರಾಗಿ ಗುರುತಿಸಿಕೊಂಡಿದ್ದರು. ತಮ್ಮ ಪುತ್ರ ಸ್ನೇಹಿತ್ ಮುಖ್ಯಭೂಮಿಕೆಯಲ್ಲಿದ್ದ ‘ಅಪ್ಪು ಪಪ್ಪು’, ಚಿರಂಜೀವಿ ಸರ್ಜಾ ನಟನೆಯ ‘ರಾಮಲೀಲಾ’, ಸುದೀಪ್ ನಟನೆಯ ‘ಮಸ್ತ್ ಮಜಾ ಮಾಡಿ’ ಸಿನಿಮಾ ಸೇರಿದಂತೆ ಕೆಲ ಸಿನಿಮಾಗಳನ್ನು ನಿರ್ಮಿಸಿದ್ದರು. ಕನ್ನಡದ ಹಲವು ಕಲಾವಿದರೊಂದಿಗೆ ಉತ್ತಮ ಒಡನಾಟ ಹೊಂದಿದ್ದರು.-ಬಾಕ್ಸ್-
ವಿವಾದ- ಆರೋಪಗಳಿಗೆ ಗುರಿ
ಮೃತ ಸೌಂದರ್ಯ ಜಗದೀಶ್ ಅವರು ಒರಾಯನ್ ಮಾಲ್ ಸಮೀಪ ತಮ್ಮ ಪತ್ನಿ ರೇಖಾ ಮಾಲೀಕತ್ವದಲ್ಲಿ ಜೆಟ್‌ಲಾಗ್ ಪಬ್ ನಡೆಸುತ್ತಿದ್ದರು. ಇತ್ತೀಚೆಗೆ ‘ಕಾಟೇರ’ ಸಿನಿಮಾ ಯಶಸ್ವಿಯಾದ ಹಿನ್ನೆಲೆಯಲ್ಲಿ ಜೆಟ್‌ಲಾಗ್ ಪಬ್‌ನಲ್ಲಿ ನಟ ದರ್ಶನ್, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಸೇರಿದಂತೆ ಹಲವು ನಟರಿಗೆ ನಿಯಮಬಾಹಿರವಾಗಿ ತಡರಾತ್ರಿವರೆಗೂ ಪಾರ್ಟಿ ಮಾಡಲು ಅವಕಾಶ ನೀಡಿದ ಆರೋಪ ಕೇಳಿ ಬಂದಿತ್ತು. ಅಬಕಾರಿ ನಿಯಮ ಉಲ್ಲಂಘಿಸಿದ ಆರೋಪದಡಿ ಪಬ್‌ನ ಪರವಾನಗಿಯನ್ನು 25 ದಿನ ಅಮಾನತುಗೊಳಿಸಲಾಗಿತ್ತು. ಅಂತೆಯೇ ಮಹಾಲಕ್ಷ್ಮೀ ಲೇಔಟ್‌ನಲ್ಲಿ ನೆರೆ ಮನೆಯವರ ಜತೆಗೆ ಗಲಾಟೆ, ಬೆದರಿಕೆ ಸೇರಿ ಜಗದೀಶ್ ಕುಟುಂಬದ ವಿರುದ್ಧ ಹಲವು ಆರೋಪಗಳು ಕೇಳಿ ಬಂದಿದ್ದವು.