ಸಾರಾಂಶ
ನಮ್ಮಲ್ಲಿ ಜಾತಿ- ಜಾತಿಗಳ ನಡುವೆ ದೇಶ- ದೇಶಗಳ ನಡುವೆ ಹಿಂಸೆ ಮತ್ತು ಅಸಹನೆಯ ಮನೋಭಾವ ಹೆಚ್ಚಾಗುತ್ತಿರುವುದರಿಂದ ಯುದ್ಧದಂತಹ ಸನ್ನಿವೇಶಗಳು ಸೃಷ್ಟಿಯಾಗುತ್ತಿವೆ. ಇದರಿಂದ ನಮ್ಮನ್ನು ನಾವೇ ನಾಶಮಾಡಿಕೊಳ್ಳುವ ವಿನಾಶದ ಕಡೆಗೆ ಸಾಗುತ್ತಿದ್ದೇವೆ.
ಕನ್ನಡಪ್ರಭ ವಾರ್ತೆ ಮಂಡ್ಯ
ಜಾತಿ, ಧರ್ಮ, ಜನಾಂಗ ಮತ್ತು ಪ್ರದೇಶದ ಶ್ರೇಷ್ಠತೆಯಿಂದ ಬಳಲುತ್ತಾ ನಮ್ಮೊಳಗೆ ಹಿಂಸೆಯನ್ನು ಬೆಳೆಸಿಕೊಳ್ಳುತ್ತಿರುವುದು ಅಪಾಯಕಾರಿ ಬೆಳವಣಿಗೆ. ಸಮಾಧಾನ ಮತ್ತು ಸಮಾನತೆ ಕಡೆಗೆ ಸಾಗಬೇಕಾದ ಅನಿವಾರ‍್ಯತೆ ಇದೆ ಎಂದು ಕವಿ, ಉಪನ್ಯಾಸಕ ಕೆ.ಪಿ.ಮೃತ್ಯುಂಜಯ ಆಶಿಸಿದರು.ಸಮೀಪದ ಬೇಲೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಮಂಗಳವಾರ ನಡೆದ ಕೋಮು ಏಕತಾ ದಿವಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ನಮ್ಮಲ್ಲಿ ಜಾತಿ- ಜಾತಿಗಳ ನಡುವೆ ದೇಶ- ದೇಶಗಳ ನಡುವೆ ಹಿಂಸೆ ಮತ್ತು ಅಸಹನೆಯ ಮನೋಭಾವ ಹೆಚ್ಚಾಗುತ್ತಿರುವುದರಿಂದ ಯುದ್ಧದಂತಹ ಸನ್ನಿವೇಶಗಳು ಸೃಷ್ಟಿಯಾಗುತ್ತಿವೆ. ಇದರಿಂದ ನಮ್ಮನ್ನು ನಾವೇ ನಾಶಮಾಡಿಕೊಳ್ಳುವ ವಿನಾಶದ ಕಡೆಗೆ ಸಾಗುತ್ತಿದ್ದೇವೆ. ಈ ಹಂತದಲ್ಲಿ ಎಚ್ಚೆತ್ತುಕೊಂಡು ಪರಸ್ಪರ ಪ್ರೀತಿಯನ್ನು ಹಂಚಿಕೊಳ್ಳುತ್ತಾ ಅಹಿಂಸಾ ಮಾರ್ಗದಲ್ಲಿ ಸಾಗಬೇಕಾದ ಅನಿವಾರ‍್ಯತೆ ಇದೆ ಎಂದು ಪ್ರತಿಪಾದಿಸಿದರು.
ರಾಷ್ಟ್ರದಲ್ಲಿ ಇಂದಿರಾಗಾಂಧಿ, ರಾಜೀವ್‌ಗಾಂಧಿ ಮತ್ತು ಮಹಾತ್ಮಗಾಂಧಿ ಸೇರಿದಂತೆ ಅನೇಕರ ಹತ್ಯೆಗಳು ರಾಜಕೀಯ ಪ್ರೇರಿತವಾಗಿಯೇ ನಡೆದಿವೆ. ಈ ಹತ್ಯೆಗಳನ್ನು ಆಳವಾಗಿ ಅಧ್ಯಯನ ಮಾಡುತ್ತಾ ಹೋದರೆ ಅಸಂಖ್ಯಾತ ಹಿಂಸೆಯ ಬೇರುಗಳು ನಮಗೆ ಸಿಗುತ್ತವೆ. ಆ ಬೇರುಗಳು ಇಂದು ಗಿಡವಾಗಿ ಮರವಾಗಿ, ಹೆಮ್ಮರವಾಗಿ ಬೆಳೆದು ಆವರಿಸಿಕೊಳ್ಳುತ್ತಿದ್ದು, ದೇಶದಲ್ಲಿ ಜಾತಿ, ಧರ್ಮ ಮತ್ತು ಅಧಿಕಾರದ ಹಿಂಸೆಯನ್ನು ತೊಲಗಿಸಲು ಪ್ರೀತಿ ಮತ್ತು ಸಮಾನತೆಯ ಅಹಿಂಸಾ ಧರ್ಮವನ್ನು ಅನುಸರಿಸಬೇಕು ಎಂದರು.ಜೈ ಕರ್ನಾಟಕ ಪರಿಷತ್ ರಾಜ್ಯಾಧ್ಯಕ್ಷ ಎಸ್ ನಾರಾಯಣ್ ಮಾತನಾಡಿ, ಮಹನೀಯರು ಎಲ್ಲ ವರ್ಗದ ಜನರನ್ನು ಒಂದುಗೂಡಿಸಲು ಪ್ರಯತ್ನಿಸಿದರೆ ರಾಜಕೀಯ ವ್ಯಕ್ತಿಗಳು ಮತ ಹಾಕಿಸಿಕೊಳ್ಳಲು ಕೋಮುಗಳನ್ನು ಸೃಷ್ಟಿಸುತ್ತಾರೆ ಎಂದರು.
ಕಾರ್ಯಕ್ರಮದಲ್ಲಿ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕಿ ಶಿವಕುಮಾರಿ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಅಭಿವೃದ್ಧಿ ಅಧ್ಯಕ್ಷ ಕೃಷ್ಣ ನೆಹರು. ಯುವ ಕೇಂದ್ರ ಲೆಕ್ಕ ಮತ್ತು ಕಾರ್ಯಕ್ರಮ ಸಹಾಯಕ ಸಿ. ರವಿಚಂದ್ರನ್. ಭಾರತ್ ಸೇವಾದಳದ ಜಿಲ್ಲಾ ಸಂಘಟಕ ಸಿ ಎಸ್ ಗಣೇಶ್. ದೈಹಿಕ ಶಿಕ್ಷಕಿ ಉಷಾರಾಣಿ ಭಾಗವಹಿಸಿದ್ದರು.