ಸಂಸದ ಅನಂತಕುಮಾರ ಹೆಗಡೆ ನಮ್ಮ ನಾಯಕ: ವಿಶ್ವೇಶ್ವರ ಹೆಗಡೆ ಕಾಗೇರಿ

| Published : Mar 27 2024, 01:03 AM IST

ಸಂಸದ ಅನಂತಕುಮಾರ ಹೆಗಡೆ ನಮ್ಮ ನಾಯಕ: ವಿಶ್ವೇಶ್ವರ ಹೆಗಡೆ ಕಾಗೇರಿ
Share this Article
  • FB
  • TW
  • Linkdin
  • Email

ಸಾರಾಂಶ

ಇದು ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನಡೆಯುವ ಚುನಾವಣೆ ಎಂದು ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.

ಶಿರಸಿ: ಸಂಸದ ಅನಂತಕುಮಾರ ಹೆಗಡೆ ನಮ್ಮ ಕ್ಷೇತ್ರದ ಜತೆ ರಾಜ್ಯದ ೨೮ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ನಿಶ್ಚಿತ ಕೊಡುಗೆ ನೀಡಲಿದ್ದಾರೆ. ಅಲ್ಲದೇ ಸಂಸದ ಅನಂತಕುಮಾರ ಹೆಗಡೆ ನಮ್ಮ ನಾಯಕರು ಎಂದು ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.

ಮಂಗಳವಾರ ಬಿಡ್ಕಿಬೈಲ್‌ನ ಜಾತ್ರೆ ಗದ್ದುಗೆಯಲ್ಲಿ ಮಾರಿಕಾಂಬೆಯ ದರ್ಶನ ಪಡೆದು ಮಾಧ್ಯಮದವರ ಜತೆ ಮಾತನಾಡಿ, ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕೆಂಬ ಆಸೆ ಜನಸಮುದಾಯಲ್ಲಿದೆ. ತಾಯಿ ಮಾರಿಕಾಂಬೆಯ ದರ್ಶನ ಪಡೆದು ದಾಖಲೆಯ ಮತಗಳ ಅಂತರದಿಂದ ಕ್ಷೇತ್ರದ ಜನ ಆಯ್ಕೆ ಮಾಡುತ್ತಾರೆ ಎಂಬ ವಿಶ್ವಾಸವಿದ್ದು, ಅನಂತಕುಮಾರ ಹೆಗಡೆ ನಿರಂತರವಾಗಿ ನಮ್ಮ ಕ್ಷೇತ್ರವನ್ನು ಪ್ರತಿನಿಧಿಸಿ, ಒಮ್ಮೆ ಕೇಂದ್ರ ಸಚಿವರಾಗಿಯೂ ಕೆಲಸ ಮಾಡಿ, ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಅವರನ್ನು ವೈಯಕ್ತಿಕವಾಗಿ ಭೇಟಿ ಮಾಡಿ, ಅವರ ಮಾರ್ಗದರ್ಶನ, ಸಲಹೆ- ಸೂಚನೆ ಪಡೆಯುತ್ತೇನೆ ಎಂದರು.

ಇದು ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನಡೆಯುವ ಚುನಾವಣೆ. ದೇಶದ ಹಿತ ದೃಷ್ಟಿಯಿಂದ ನರೇಂದ್ರ ಮೋದಿ ಪ್ರಧಾನಿಯಾಗುವುದರ ಜತೆ ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಜತೆಗೆ ನಾಡಿನ ೨೮ ಕ್ಷೇತ್ರವನ್ನು ಬಿಜೆಪಿ ಗೆಲ್ಲಲಿದೆ. ಈಗಾಗಲೇ ಪ್ರಚಾರ ಕಾರ್ಯದಲ್ಲಿ ಕಾರ್ಯಕರ್ತರು ತಮ್ಮ ಕೆಲಸವನ್ನು ಆರಂಭಿಸಿದ್ದಾರೆ. ನಾನು ಸಹ ಎಲ್ಲ ಕಡೆ ಭೇಟಿ ನೀಡುತ್ತಿದ್ದೇನೆ. ಈ ವರ್ಷ ದಾಖಲೆಯ ಗೆಲುವಿಗೆ ಜನರು ಆಶೀರ್ವಾದ ಮಾಡುತ್ತಾರೆ ಎಂಬ ನಂಬಿಕೆ ಇದೆ ಎಂದ ಅವರು, ಕಾಂಗ್ರೆಸ್ ಸರ್ಕಾರದಿಂದ ಜನರು ಭ್ರಮನಿರಸನಗೊಂಡಿದ್ದಾರೆ. ಅಭಿವೃದ್ಧಿ ಕಾರ್ಯಗಳು ಶೂನ್ಯವಾಗಿದೆ. ಆಡಳಿತದಲ್ಲಿ ಭ್ರಷ್ಟಾಚಾರವೇ ತುಂಬಿಕೊಂಡಿದೆ ಎಂದು ಕಿಡಿಕಾರಿದರು.

ಅನಂತಕುಮಾರ ಹೆಗಡೆ ನಡೆ ನೋಡಿ ಕಾಂಗ್ರೆಸ್ ಮುಂದಿನ ನಡೆ ನಿರ್ಧರಿಸುತ್ತದೆ ಎಂಬ ದೇಶಪಾಂಡೆ ಹೇಳಿಕೆಗೆ ಪ್ರತಿಕ್ರಿಯಿಸಿದ ಕಾಗೇರಿ, ಆರ್.ವಿ. ದೇಶಪಾಂಡೆ ಯಾವ ಕಾರಣಕ್ಕೆ ಹಾಗೆ ಹೇಳಿದ್ದಾರೆ ಎಂಬುದು ಗೊತ್ತಿಲ್ಲ. ಸಂಸದ ಅನಂತಕುಮಾರ ಹೆಗಡೆ ನಮ್ಮ ನಾಯಕರು. ಅವರ ಮರ್ಗದರ್ಶನದಲ್ಲಿ ಚುನಾವಣೆ ಎದುರಿಸುತ್ತೇವೆ. ಕಳೆದ ೪೦ ವರ್ಷದಿಂದ ಸಾಮಾಜಿಕ ಜೀವನದಲ್ಲಿದ್ದೇನೆ. ಶಿಕ್ಷಣ ಸಚಿವನಾಗಿ, ಸಭಾಧ್ಯಕ್ಷನಾಗಿದ್ದ ವೇಳೆ ನಾನು ಮಾಡಿದ ಕಾರ್ಯವನ್ನು ಕ್ಷೇತ್ರದ, ನಾಡಿನ ಜನತೆ ಗುರುತಿಸಿದ್ದಾರೆ ಎಂದರು.