ಸಾರಾಂಶ
ಗದಗ: ಪ್ರತ್ಯೇಕ ದಕ್ಷಿಣ ಭಾರತದ ಬೇಡಿಕೆ ಇಟ್ಟ ಸಂಸದ ಡಿ.ಕೆ. ಸುರೇಶ್ ದಕ್ಷಿಣ ರಾಜ್ಯಗಳಿಗೆ ಆಗುತ್ತಿರುವ ಅನ್ಯಾಯವನ್ನು ಗಮನಿಸಿ ನೋವಿನಿಂದ ಹಾಗೆ ಹೇಳಿದ್ದಾರೆ ಅಷ್ಟೇ ಎಂದು ಸಾರಿಗೆ, ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಹೇಳಿದರು. ಅವರು ಶನಿವಾರ ಸಂಜೆ ಮಾಧ್ಯಮಗಳೊಂದಿಗೆ ಮಾತನಾಡಿ, ದಕ್ಷಿಣ ಭಾಗದ ಐದು ರಾಜ್ಯಗಳಿಗೆ ಬಜೆಟ್ ನಲ್ಲಿ ಅನುದಾನ ತಾರತಮ್ಯ ಮಾಡಿದ್ದಾರೆ. ಇದರಿಂದ ಡಿ.ಕೆ. ಸುರೇಶ್ ಅವರಿಗೆ ನೋವಾಗಿದೆ. ಹಾಗಾಗಿ ನೋವಿನಿಂದ ಹಾಗೆ ಮತನಾಡಿದ್ದಾರೆ. ಬಜೆಟ್‌ನಲ್ಲಿ ದಕ್ಷಿಣ ಭಾರತದ 5 ರಾಜ್ಯಗಳಿಗೆ ಕೇವಲ 1.8 ಲಕ್ಷ ಕೋಟಿ ಕೇಂದ್ರ ಸರ್ಕಾರ ನೀಡಿದೆ. ಆದರೆ, ಉತ್ತರ ಪ್ರದೇಶ ಒಂದೇ ರಾಜ್ಯಕ್ಕೆ ರು. 2 ಲಕ್ಷ ಕೋಟಿ ನೀಡಿದೆ. ಈ ತಾರತಮ್ಯ ಏತಕ್ಕೆ? ಇದನ್ನು ಪ್ರಶ್ನಿಸಬಾರದಾ? ಎಂದರು.ಕರ್ನಾಟಕದಿಂದ 4 ಲಕ್ಷ ಕೋಟಿ ಜಿಎಸ್ ಟಿ ಕೇಂದ್ರ ಸರ್ಕಾರಕ್ಕೆ ಹೋಗುತ್ತದೆ. ಆದರೆ, ಬಜೆಟ್‌ನಲ್ಲಿ ಕೇವಲ 50 ಸಾವಿರ ಕೋಟಿ ಮಾತ್ರ ಕರ್ನಾಟಕಕ್ಕೆ ಮೀಸಲಿಟ್ಟಿದ್ದಾರೆ ಎಂದರೆ ತಿಳಿಯುತ್ತದೆ ಅಲ್ಲವೇ? ನಮ್ಮ ದೇಶ ಅಖಂಡವಾಗಿಯೇ ಇರಬೇಕು, ಅದರಲ್ಲಿ ಎರಡು ಮಾತಿಲ್ಲ, ಆದರೆ ನಮಗೆ ಕೊಡಬೇಕಾಗಿದ್ದನ್ನು ಕೊಡಲೇಬೇಕು. ರಾಜ್ಯದ 123 ತಾಲೂಕಿನಲ್ಲಿ ತೀವ್ರ ಬರಗಾಲವಿದೆ. ಕೇಂದ್ರದಿಂದ ಇದುವರೆಗೂ ಒಂದು ಬಿಡಿಗಾಸು ಬಂದಿಲ್ಲ. ಮಲತಾಯಿ ಧೋರಣೆಯಿಂದ ಡಿ.ಕೆ. ಸುರೇಶ್ ಹೇಳಿದ್ದಾರೆ ಎಂದು ಪರೋಕ್ಷವಾಗಿ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡರು.