ಲೋಕಸಭೆ ಬಿಜೆಪಿ ಟಿಕೆಟ್‌ ಹಾಲಿಗೋ -ಮಾಜಿಗೋ?

| Published : Feb 12 2024, 01:34 AM IST

ಸಾರಾಂಶ

ಬಿಜೆಪಿಯ ಹಾಲಿ ಸಂಸದ ರಾಜಾ ಅಮರೇಶ್ವರ ನಾಯಕ, ಮಾಜಿ ಸಂಸದ ಬಿ.ವಿ.ನಾಯಕ ಕಸರತ್ತು. ಮಾಜಿ ಶಾಸಕರಿಂದಲೂ ಟಿಕೆಟ್‌ಗಾಗಿ ಕಸರತ್ತು, ಹೈಕಮಾಂಡ್‌ಗೆ ಯಾರಿಗೆ ಮಣೆ ಎನ್ನುವ ಕುತೂಲಹ ಮೂಡಿದೆ.

ರಾಮಕೃಷ್ಣ ದಾಸರಿ

ಕನ್ನಡಪ್ರಭ ವಾರ್ತೆ ರಾಯಚೂರು

ಇಷ್ಟರಲ್ಲಿಯೇ ಘೋಷಣೆಯಾಗಲಿರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್‌ ಪಡೆಯುವುದಕ್ಕಾಗಿ ಭಾರಿ ಪೈಪೋಟಿ ಎದುರಾಗಿದೆ.

ರಾಯಚೂರಿನ ಐದು ಮತ್ತು ಯಾದಗಿರಿಯ ಮೂರು ವಿಧಾನಸಭಾ ಕ್ಷೇತ್ರಗಳನ್ನೊಳಗೊಂಡ ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ಕಳೆದ ಬಾರಿ ಬಿಜೆಪಿಗೆ ಅಭೂತ ಪೂರ್ವ ಗೆಲವು ಸಿಕ್ಕ ಹಿನ್ನೆಲೆ ಪ್ರಸಕ್ತ ಸಾಲಿನ ಎಂಪಿ ಚುನಾವಣೆಯಲ್ಲಿ ಪಕ್ಷದಿಂದ ಟಿಕೆಟ್‌ ಪಡೆದು ಗೆಲುವನ್ನು ಮುಂದುವರಿಸಬೇಕು ಎನ್ನುವ ಆಸೆ ಆಕಾಂಕ್ಷಿಗಳಲ್ಲಿ ಸೃಷ್ಟಿಯಾಗಿದೆ.

ಹಾಲಿ ಸಂಸದ ರಾಜಾ ಅಮರೇಶ್ವರ ನಾಯಕ ಅವರೊಂದಿಗೆ ಮಾಜಿ (ಕಾಂಗ್ರೆಸ್) ಸಂಸದ ಬಿ.ವಿ.ನಾಯಕ, ಮಾಜಿ ಶಾಸಕರಾದ ತಿಪ್ಪರಾಜು ಹವಲ್ದಾರ್‌, ರಾಜೂಗೌಡ ಸೇರಿದಂತೆ ಅನೇಕರು ಟಿಕೆಟ್ ಆಕಾಂಕ್ಷಿಗಳಿದ್ದು, ಹೈಕಮಾಂಡ್‌ ಯಾರಿಗೆ ಮಣೆ ಹಾಕಲಿದೆ ಎನ್ನುವ ಕುತೂಲಹ ಮೂಡಿದೆ.

ಹಾಲಿ-ಮಾಜಿ ಕಸರತ್ತು: ಈ ಹಿಂದೆ ಕಾಂಗ್ರೆಸ್‌ನಲ್ಲಿದ್ದು ಎಂಬತ್ತರಿಂದ ಹತ್ತು ವರ್ಷಗಳ ಕಾಲ ಜನಸಂಪರ್ಕದಿಂದ ದೂರವಿದ್ದ ರಾಜಾ ಅಮರೇಶ್ವರ ನಾಯಕ ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಬಿಟ್ಟು ಬಿಜೆಪಿ ಸೇರಿ ಟಿಕೆಟ್‌ ಪಡೆದು ಮೋದಿ ವರ್ಚಸ್ಸಿನ ಅಲೆಯಲ್ಲಿ ಕಾಂಗ್ರೆಸ್‌ನ ಬಿ.ವಿ.ನಾಯಕ ವಿರುದ್ಧ ಗೆದ್ದು ಮೊದಲ ಬಾರಿಗೆ ಸಂಸದರಾಗಿ ಐದು ವರ್ಷ ಸೇವೆ ಸಲ್ಲಿಸಿದ್ದಾರೆ. ಬದಲಾದ ಪರಿಸ್ಥಿತಿಯಲ್ಲಿ ವಿಧಾನಸಭಾ ಚುನಾವಣೆ ಸಮಯದಲ್ಲಿ ಕಾಂಗ್ರೆಸ್‌ನಲ್ಲಿದ್ದ ಬಿ.ವಿ.ನಾಯಕ ಪಕ್ಷಕ್ಕೆ ಗುಡ್‌ ಬೈ ಹೇಳಿ ಬಿಜೆಪಿ ಸೇರಿ ಮಾನ್ವಿಯಲ್ಲಿ ಸ್ಪರ್ಧಿಸಿ ಸೋಲುಂಡಿದ್ದು ಇದೀಗ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್‌ ಗಿಟ್ಟಿಸಿಕೊಳ್ಳಲು ಕಸರತ್ತು ನಡೆಸಿದ್ದಾರೆ. ಹಾಲಿ ಮತ್ತು ಮಾಜಿ ಸಂಸದರ ನಡುವೆ ಟಿಕೆಟ್‌ ಪೈಪೋಟಿ ಜೋರಾಗಿಯೇ ಸಾಗಿದೆ. ಜೊತೆಗೆ ಇತರೇ ಆಕಾಂಕ್ಷಿಗಳೂ ತಾವೇನೂ ಕಮ್ಮಿ ಇಲ್ಲ ಎಂದು ತಮ್ಮದೇ ಆದ ರೀತಿಯಲ್ಲಿ ಕಸರತ್ತು ನಡೆಸಿದ್ದಾರೆ.

ದೆಹಲಿಯಲ್ಲಿ ಟಿಕಾಣಿ: ದೆಹಲಿಯಲ್ಲಿ ಇತ್ತೀಚೆಗೆ ನಡೆದ ಕೇಂದ್ರ ಸರ್ಕಾರ ಕೊನೆ ಅಧಿವೇಶನದಲ್ಲಿ ಹಾಲಿ ಸಂಸದ ರಾಜಾ ಅಮರೇಶ್ವರ ನಾಯಕ ಪಕ್ಷದ ಹಿರಿಯರನ್ನು ಭೇಟಿಯಾಗಿ ತಮಗೆ ಮತ್ತೊಮ್ಮೆ ಸ್ಪರ್ಧಿಸಲು ಅವಕಾಶ ಕಲ್ಪಿಸಬೇಕು ಎಂದು ಕೋರಿದ್ದಾರೆ ಎನ್ನುವ ಮಾಹಿತಿ ಇದೆ. ಬಿ.ವಿ.ನಾಯಕ ಸಹ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಅಮಿತ್‌ ಶಾ, ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿ ಹಲವರನ್ನು ಭೇಟಿಯಾಗಿದ್ದಾರೆ. ಇದರ ಜೊತೆಗೆ ಮಾಜಿ ಶಾಸಕ ತಿಪ್ಪರಾಜು ಹವಲ್ದಾರ್‌ ಸಹ ಸ್ಪರ್ಧೆಯಲ್ಲಿದ್ದಾರೆ.

ಒಟ್ಟಿನಲ್ಲಿ ಮೂರನೇ ಬಾರಿ ಮೋದಿ ಸರ್ಕಾರ ಘೋಷಣೆಯಡಿ ಲೋಕಸಭೆ ಚುನಾವಣೆಯ ಪೂರ್ವ ಸಿದ್ಧತೆಯಲ್ಲಿ ತೊಡಗಿರುವ ಬಿಜೆಪಿಗರು ಹೊಸ ಹುಮಸ್ಸಿನೊಂದಿಗೆ ಪಕ್ಷದ ಸಂಘಟನೆ ಜತೆ ಟಿಕೆಟ್ ಗಿಟ್ಟಿಸಲು ಕಸರತ್ತು ನಡೆಸಿದ್ದಾರೆ.ದೆಹಲಿಯಲ್ಲಿ ಬಿಜೆಪಿ ಪ್ರಮುಖ ನಾಯಕರು, ಮುಖಂಡರನ್ನು ಭೇಟಿಯಾಗಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕಲ್ಪಿಸಲು ಕೋರಲಾಗಿದೆ.

ಬಿ.ವಿ.ನಾಯಕ. ಮಾಜಿ ಸಂಸದ