ಸಾರಾಂಶ
ಕನ್ನಡಪ್ರಭ ವಾರ್ತೆ ಚಿಂಚೋಳಿ
ಕಲಬುರಗಿ ಮತ್ತು ಬೀದರ್ ಲೋಕಸಭೆ ಮತಕ್ಷೇತ್ರಗಳು ಕಾಂಗ್ರೆಸ್ ಪಕ್ಷಕ್ಕೆ ಪ್ರತಿಷ್ಠೆ ಕಣಗಳಾಗಿವೆ. ಕಾಂಗ್ರೆಸ್ ಪಕ್ಷದ ಎಐಸಿಸಿ(ಐ) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಚುನಾವಣೆ ನಡೆಯುತ್ತಿರುವುದರಿಂದ ಎರಡು ಲೋಕಸಭೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಬೇಕು ಈ ನಿಟ್ಟಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಒಗ್ಗಟ್ಟಿನಿಂದ ಶ್ರಮಿಸಬೇಕೆಂದು ಅರಣ್ಯ ಸಚಿವ ಸಚಿವ ಈಶ್ವರ ಖಂಡ್ರೆ ಹೇಳಿದರು.ಪಟ್ಟಣದ ವೀರೇಂದ್ರ ಪಾಟೀಲ ಪಬ್ಲಿಕ್ ಶಾಲೆ ಸಭಾಂಗಣದಲ್ಲಿ ಚಿಂಚೋಳಿ-ಕಾಳಗಿ ಮತಕ್ಷೇತ್ರಗಳ ಕಾಂಗ್ರೆಸ್ ಬೂತ್ ಮಟ್ಟದ ಅಧ್ಯಕ್ಷರ, ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿ ಬಿಜೆಪಿ ಡಬಲ್ ಇಂಜಿಂನ್ ಸರ್ಕಾರದ ದುರಾಡಳಿತ, ಜನವಿರೋಧಿ ನೀತಿ, ಅಲ್ಪಸಂಖ್ಯಾತರಿಗೆ ಕಿರುಕುಳಕೊಟ್ಟು ಜಾತಿ ಮತ್ತು ಧರ್ಮಗಳ ಮಧ್ಯೆ ಒಡೆದಾಳು ನೀಡಿ ನಡೆಸಿದ್ದರಿಂದ ೨೦೨೩ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ರಾಜ್ಯದ ಜನತೆ ತಕ್ಕಪಾಠ ಕಲಿಸಿ ಬುಡಸಮೇತವಾಗಿ ಕಿತ್ತು ಹಾಕಿದ್ದರಿಂದ ಕಾಂಗ್ರೆಸ್ ೧೩೬ ಸ್ಥಾನಗಳಲ್ಲಿ ಗೆಲುವು ಸಾಧಿಸಿ ಅಧಿಕಾರಕ್ಕೆ ಬಂದಿದೆ ಎಂದರು.ರಾಜ್ಯದ ಜನತೆಗೆ ನೀಡಿದ ೫ ಗ್ಯಾರಂಟಿ ಭರವಸೆಗಳನ್ನು ಈಡೇರಿಸುತ್ತಿದ್ದೇವೆ. ೧೩೦ಕೋಟಿ ಕುಟುಂಬಕ್ಕೆ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ೨ ಸಾವಿರ ರು. ಕೊಡಲಾಗುತ್ತಿದೆ. ಇದಕ್ಕಾಗಿ ೨೫೦೦ ಕೋಟಿ ನೀಡಲಾಗಿದ್ದು, ೭೦ ಕೋಟಿ ಬೀದರ್ ಜಿಲ್ಲೆಗೆ ಮತ್ತು ಕಲಬುರಗಿ ಜಿಲ್ಲೆಗೆ ೧೦೦ ಕೋಟಿ ರು. ನೀಡಲಾಗುತ್ತಿದ್ದು ವರ್ಷಕ್ಕೆ ೮೦೦ ಕೋಟಿ ರು. ಅನುದಾನವನ್ನು ಘೋಷಣೆ ಮಾಡಲಾಗಿದೆ. ಶಕ್ತಿ ಯೋಜನೆಯಿಂದ ಲಕ್ಷಾಂತರ ಮಹಿಳೆಯರಿಗೆ ಲಾಭವಾಗುತ್ತಿದೆ. ಬೀದರ್ ಜಿಲ್ಲೆಗೆ ೧೨ಲಕ್ಷ ಜನರಿಗೆ ಮತ್ತು ಕಲಬುರಗಿ ಜಿಲ್ಲೆಯಲ್ಲಿ ೧೬ಲಕ್ಷ ಜನರಿಗೆ ಲಾಭವಾಗುತ್ತಿದೆ. ಆದರೆ ಬಿಜೆಪಿಯವರ ಅಚ್ಛೇದಿನ್ ಇನ್ನುವರೆಗೆ ಬರಲಿಲ್ಲವೆಂದು ಟೀಕಿಸಿದರು.
೨೦೧೯ ಲೋಕಸಭೆ ಚುನಾವಣೆಯಲ್ಲಿ ಚುನಾವಣೆ ಎದುರಿಸಲು ಸಿದ್ದತೆಯನ್ನು ಮಾಡಿಕೊಂಡಿರಲಿಲ್ಲ. ಇದರಿಂದ ಕಡಿಮೆ ಮತಗಳಿಂದ ಸೋಲು ಅನುಭವಿಸಬೇಕಾಯಿತು. ದೇಶದಲ್ಲಿ ನಕಲಿ ದೇಶಭಕ್ತಿ ದೇಶ ಪ್ರೇಮ ಹೆಚ್ಚಾಗಿದೆ. ಆರ್.ಎಸ್.ಎಸ್. ಯಾರು ಗುತ್ತಿಗೆ ಕೊಟ್ಟಿಲ್ಲ ಬಿಜೆಪಿ ಬಾಯಲ್ಲಿ ರಾಮ ರಾಮ, ಬಗಲಿನಲ್ಲಿ ಚೂರಿ ಇದೆ. ತಾಲೂಕಿನ ಐನಾಪೂರ ಏತನೀರಾವರಿ ಯೋಜನೆಗೆ ಅನುದಾನ ನೀಡುವುದಕ್ಕಾಗಿ ಪ್ರಯತ್ನ ಮಾಡುತ್ತೇವೆ. ಬೀದರ್-ಕಲಬುರಗಿ ಲೋಕಸಭೆ ಮತಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲವು ಖಚಿತವಾಗಿದೆ. ಬಿಜೆಪಿ ತಿಪ್ಪರಲಾಗ ಹಾಕಿದರೂ ಏನೂ ಮಾಡಲಾಗುವುದಿಲ್ಲ. ಬಿಜೆಪಿ ಭ್ರಮಾ ಲೋಕದಲ್ಲಿದೆ. ಹಿಂದುಳಿದ ಪ್ರದೇಶದ ಅಭಿವೃದ್ಧಿಗೆ ಸರಕಾರ ಬದ್ಧವಾಗಿದೆ. ಸರಕಾರದ ಯೋಜನೆಗಳು ಮನೆ ತನಕ ತಲುಪಿಸುವ ಕಾರ್ಯವನ್ನು ಕಾರ್ಯಕರ್ತರು ಮಾಡಬೇಕಾಗಿದೆ. ಕಾರ್ಯಕರ್ತರಿಗೆ ಸರಕಾರದ ಸಮಿತಿಗಳಲ್ಲಿ ನಾಮನಿರ್ದೇಶನ ಮಾಡಿ ಅವರಿಗೆ ಸ್ಥಾನಮಾನ ಕೊಡುತ್ತೇವೆ. ಬೀದರ್ ಮತ್ತು ಕಲಬುರಗಿ ಲೋಕಸಭೆ ಮತಕ್ಷೇತ್ರಗಳ ಕಾಂಗ್ರೆಸ ಅಭ್ಯರ್ಥಿಗಳ ಗೆಲವಿಗೆ ಶ್ರಮಿಸಬೇಕೆಂದು ಸಚಿವ ಈಶ್ವರ ಖಂಡ್ರೆ ಹೇಳಿದರು.ಕಾಂಗ್ರೆಸ ಮುಖಂಡ ಸುಭಾಷ ರಾಠೋಡ ಮಾತನಾಡಿ, ಮಾಜಿ ಸಿಎಂ ಎಸ್‌ಎಂ ಕೃಷ್ಣ ಚುನಾವಣೆ ಪ್ರಚಾರವನ್ನು ಚಿಂಚೋಳಿಯಿಂದಲೇ ಪ್ರಾರಂಭಿಸಿ ಹೆಚ್ಚು ಸ್ಥಾನ ಗಳಿಸಿದ್ದರು. ಲೋಕಸಭೆ ಚುನಾವಣೆ ಸೈದ್ದಾಂತಿಕ ಮತ್ತು ಏಕತೆ ಸಮಗ್ರತೆ ೧೩೫ ಕೋಟಿ ಜನರ ಬಂಧುತ್ವ ಭಾತೃತ್ವ ಉಳಿಸಬೇಕಾಗಿದೆ. ನಾನು ಚಿಂಚೋಳಿ ಮೀಸಲು ಮತಕ್ಷೇತ್ರದಲ್ಲಿ ಸೋತಿರಬಹುದು. ಆದರೆ ಎದುರಾಳಿ ಕೆಟ್ಟ ಶಕ್ತಿಯಿಂದ ಹಾಗೂ ದುಡ್ಡಿನ ಅಹಂಕಾರ ಜಾತಿ ಆಧಾರ ಮೇಲೆ ಚುನಾವಣೆಯಲ್ಲಿ ನನಗೆ ಸೋಲು ಆಗಿದೆ. ಸಚಿವರಾದ ಪ್ರಿಯಾಂಕ್ ಖರ್ಗೆ, ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರು ನಮ್ಮ ಕ್ಷೇತ್ರದ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಅಭಿವೃದ್ಧಿಪಡಿಸುತ್ತಿದ್ದಾರೆ ಎಂದರು.
ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೆದಾರ ಮಾತನಾಡಿದರು. ವೇದಿಕೆಯಲ್ಲಿ ರೇವಣಸಿದ್ದಪ್ಪ ಕಟ್ಟಿಮನಿ ಕಾಳಗಿ, ಟಿ.ಟಿ. ಭೀಮರಾವ, ಬಾಬುರಾವ ಪಾಟೀಲ, ಬಸಯ್ಯ ಗುತ್ತೆದಾರ, ಮಲ್ಲಿಕಾರ್ಜುನ ಗಾಜರೇ, ಮಧುಸೂಧನರೆಡ್ಡಿ ಕಲ್ಲೂರ, ಮಹೆಮೂದ ಪಟೇಲ, ಆನಂದ ಟೈಗರ, ಸಂತೋಷ ಗುತ್ತೆದಾರ, ಪ್ರಭುಲಿಂಗ ಲೇವಡಿ, ಮಲ್ಲಿಕಾರ್ಜುನ ಹುಳಗೇರಾ, ರೇವಣಸಿದ್ದಪ್ಪ ಮಾಸ್ಟರ, ರೇವಣಸಿದ್ದಪ್ಪ ಪೂಜಾರಿ, ಅನೀಲಕುಮಾರ ಜಮಾದಾರ, ವೀರಮ್ಮಸ್ವಾಮಿ, ನಾಗಮಣಿ, ಲಕ್ಷ್ಮಿದೇವಿ ಕೊರವಿ, ಲಕ್ಷ್ಮಣ ಆವಂಟಿ, ಅಬ್ದುಲ ಬಾಸಿತ, ಶಬ್ಬೀರ ಅಹೆಮದ, ಶರಣು ತಳವಾರ, ಮಲ್ಲಿಕಾರ್ಜುನ ಕೋಟಪಳ್ಳಿ, ಜಗನ್ನಾಥ ಕಟ್ಟಿ, ನರಸಪ್ಪ ಕಿವಣೋರ ಇನ್ನಿತರಿದ್ದರು.