ಸಾರಾಂಶ
ರೈತರ ಆಮರಣಾಂತ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವಿರನ್ನು ಕರೆ ತಂದು ಯೋಜನೆ ಕುರಿತು ಸ್ಪಷ್ಟನೆ ನೀಡುವುದಾಗಿ ಸಂಸದ ಪಿ.ಸಿ. ಗದ್ದಿಗೌಡರ ಹೇಳಿದರು.
ನರಗುಂದ: ರೈತರ ಆಮರಣಾಂತ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಕರೆ ತಂದು ಯೋಜನೆ ಕುರಿತು ಸ್ಪಷ್ಟನೆ ನೀಡುವುದಾಗಿ ಸಂಸದ ಪಿ.ಸಿ. ಗದ್ದಿಗೌಡರ ಹೇಳಿದರು.
ಸೋಮವಾರ ಪಟ್ಟಣದ ಕೋರ್ಟ್ ವೃತ್ತದ ಬಳಿ ಕರ್ನಾಟಕ ರಾಜ್ಯ ರೈತ ಸಂಘಗಳ ಮಹಾ ಸಂಘ (ಒಕ್ಕೂಟ), ಮಹದಾಯಿ ಕಳಸಾ ಬಂಡೂರಿ ಹೋರಾಟ ಸಮಿತಿ ಹಾಗೂ ಕನ್ನಡಪರ, ದಲಿತಪರ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ 3 ದಿನದಿಂದ ಹಮ್ಮಿಕೊಂಡಿರುವ ಆಮರಣಾಂತ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿ ರೈತರಿಗೆ ಭರವಸೆ ನೀಡಿದರು.ಆಮರಣಾಂತ ಉಪವಾಸ ಮಾಡುವ ರೈತರು ತಮ್ಮ ಆರೋಗ್ಯ ದೃಷ್ಟಿಯಿಂದ ಈ ಹೋರಾಟ ಕೈ ಬಿಡಬೇಕು. ನಾಲ್ಕೈದು ದಿನದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಕರೆಯಿಸಿ ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಯೋಜನೆ ಜಾರಿ ಬಗ್ಗೆ ಸ್ಪಷ್ಟನೆ ಕೊಡಸುತ್ತೇನೆ ಎಂದು ರೈತರಲ್ಲಿ ಸಂಸದರು ಮನವಿ ಮಾಡಿದರು. ಮನವಿಗೆ ಒಪ್ಪಿಕೊಂಡ ರೈತರು ಆಮರಣಾಂತ ಉಪವಾಸವನ್ನು ಎಳನೀರು ಸೇವಿಸುವ ಮೂಲಕ ಕೈಬಿಟ್ಟು, ಸರದಿ ಉಪವಾಸ ಸತ್ಯಾಗ್ರಹ ಮುಂದವರಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಶಂಕ್ರಣ್ಣ ಅಂಬಲಿ, ಬಸವರಾಜ ಸಾಬಳೆ, ಉಮೇಶಗೌಡ ಪಾಟೀಲ, ವೀರಣ್ಣ ಸೊಪ್ಪಿನ, ಚೆನ್ನು ನಂದಿ, ವಿಠಲ ಜಾಧವ, ನಬಿಸಾಬ ಕಿಲ್ಲೇದಾರ, ಶಂಕರಗೌಡ ಪಾಟೀಲ, ಸಿ.ಎಸ್. ಪಾಟೀಲ, ಎಸ್.ಎಸ್. ಪಾಟೀಲ, ಬಸವರಾಜ ತಾವರೆ, ರಾಘವೇಂದ್ರ ನಡವಿನಮನಿ, ಜಿಲ್ಲಾಧಿಕಾರಿ ಗೋವಿಂದರಡ್ಡಿ, ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡರ, ತಹಸೀಲ್ದಾರ್ ಶ್ರೀಶೈಲ ತಳವಾರ, ಸೇರಿದಂತೆ ಮುಂತಾದವರು ಇದ್ದರು.