ಕಲಾವಿರೊಂದಿಗೆ ದುರ್ವರ್ತನೆ ಸರಿಯಲ್ಲ, ಕಲಾವಿದರ ನಟ್ಟು ಬೋಲ್ಟ್ ಟೈಟ್ ಮಾಡಲು ಹೋಗಿ ಬೇರೆಯದ್ದೇ ಆಗಬಹುದು ಎಂದು ಇಂಡಿ ಸಂಸದೆ ಕಂಗನಾ ರಣಾವತ್‌ ಮಂಗಳವಾರ ಕಟೀಲು ದೇವಸ್ಥಾನ ಭೇಟಿ ವೇಳೆ ಪರೋಕ್ಷವಾಗಿ ಕರ್ನಾಟಕದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ಗೆ ಟಾಂಗ್‌ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಕಲಾವಿರೊಂದಿಗೆ ದುರ್ವರ್ತನೆ ಸರಿಯಲ್ಲ, ಕಲಾವಿದರ ನಟ್ಟು ಬೋಲ್ಟ್ ಟೈಟ್ ಮಾಡಲು ಹೋಗಿ ಬೇರೆಯದ್ದೇ ಆಗಬಹುದು ಎಂದು ಇಂಡಿ ಸಂಸದೆ ಕಂಗನಾ ರಣಾವತ್‌ ಪರೋಕ್ಷವಾಗಿ ಕರ್ನಾಟಕದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ಗೆ ಟಾಂಗ್‌ ನೀಡಿದ್ದಾರೆ.

ಮಂಗಳೂರಿನ ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಾಲಯದಲ್ಲಿ ಮಂಗಳವಾರ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಅವರು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ವೀರಾಧಿ ವೀರರೇ ಕಲಾಕಾರಾಗಿರುವ ಬಗ್ಗೆ ಶಾಸ್ತ್ರಗಳಲ್ಲಿ ಉಲ್ಲೇಖವಿದೆ. ಇಂದ್ರ , ಅರ್ಜುನರು ಕಲಾವಿದರಾಗಿದ್ದರು. ಕಲಾವಿದರೊಂದಿಗೆ ತಾಯಿ ಸರಸ್ವತಿ ಇರುತ್ತಾಳೆ. ತುಳಿತಕ್ಕೆ ಒಳಗಾದವರ ರಕ್ಷಣೆಗೆ ವಿಷ್ಣು ಜನ್ಮ ತಾಳಿದ್ದು ಇದೆ,ಕಲಾವಿದರ ರಕ್ಷಣೆಗೆ ದೇವರು ಬಂದೇ ಬರುತ್ತಾರೆ ಎಂದು ಡಿಕೆಶಿ ಹೆಸರೆತ್ತದೆ ಪ್ರತಿಕ್ರಿಯಿಸಿದರು.

ಕಾಂಗ್ರೆಸ್‌ ಮುಖಂಡರೊಬ್ಬರು ಮತ್ತೆ ಔರಂಗಜೇಬ್ ಬಗ್ಗೆ ವೈಭವೀಕರಿಸಿ ಮಾತನಾಡಿದ ಕುರಿತು ರಣಾವತ್ ಪ್ರತಿಕ್ರಿಯಿಸಿ, ಗುಲಾಮರ ದಿನಗಳು ಮುಗಿದು ಹೋಗಿವೆ. ಈಗ ಏನಿದ್ದರೂ‌ ಶಿವಾಜಿ ಮಾಹಾರಾಜರ ಸಂಭಾಜಿ ಮಹಾರಾಜರ ಯಶೋಗಾಥೆ ಮೊಳಗಲಿದೆ.

ಅವರ ಹೆಸರಿನ ರಸ್ತೆಗಳು ಚಿಹ್ನೆಗಳು ಬೇಕು, ಹಿಂದೂ ಧರ್ಮದ ರಕ್ಷಣೆಗೆ ಸ್ವರಾಜ್ಯಕ್ಕೆ‌ ಪ್ರಾಣ ತ್ಯಾಗ ಮಾಡಿದವರ ಬಗ್ಗೆ ತಿಳಿದು ಬರಬೇಕು, ಗುಲಾಮರ ದಿನ ಇದಲ್ಲ ಎಂದರು.

ಕುಂಭಮೇಳ , ಸನಾತನ ದರ್ಮದ ಬಗ್ಗೆ ಅವಹೇಳನ‌ ಟೀಕೆಗಳ ಮುಂದುವರೆದಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ದೇವರ ಆರತಿ ಬೆಳಗುವಾಗ ದುಷ್ಟ ಶಕ್ತಿಗಳು ಉರಿದು ಹೋಗುತ್ತವೆ. ಈ ದುಷ್ಟ‌ ಶಕ್ತಿಗಳ ಸಂಹಾರಕ್ಕೆ ದೇವಿಯ ಅವತಾರ ಆಗಿದೆ. ಎಲ್ಲರ ಮೇಲೂ ಈಶ್ವರನ ಆಶೀರ್ವಾದವಿರಲಿ. ಟೀಕೆ ಮಾಡುವವರಿಗೆ, ಅವಹೇಳನ ಮಾಡಿದವರಿಗೆ ದೇವರು ಸದ್ಬುದ್ಧಿ ಕೊಡಲಿ ಎಂದರು.

ದೇವಿಯ ದರ್ಶನಕ್ಕೆ ಬಂದಿದ್ದೇನೆ: ಸೋಮವಾರ ಕಾಪು ಮಾರಿ ಗುಡಿ, ಮಂಗಳವಾರ ಕಟೀಲು ದುರ್ಗಾಪರಮೇಶ್ವರಿ ದೇವಾಲಯಕ್ಕೆ ಭೇಟಿ ನೀಡಿದ್ದೇನೆ.

ತಾಯಿಯ ದರ್ಶನ ಪಡೆದಿದ್ದೇನೆ. ಬಹಳ ವರ್ಷಗಳಿಂದ ಈ ಭಾಗಕ್ಕೆ ಬರಬೇಕೆಂಬ ಅಭಿಲಾಷೆ ಇತ್ತು. ತಾಯಿ ತನ್ನ ಆಶೀರ್ವಾದ ನೀಡಲು ನನ್ನನ್ನು ಕರೆಸಿಕೊಂಡಿದ್ದಾಳೆ ಎಂದರು. ಸನಾತನ ಧರ್ಮ ಸನಾತನ ಸಂಸ್ಕೃತಿಯ ಬಗ್ಗೆ ಜಾಗೃತಿಯಾಗಿದೆ. ದೇಶ ಉನ್ನತ ಪ್ರಗತಿಯತ್ತ ಸಾಗುತ್ತಿದೆ. ನಮ್ಮ‌ ಸನಾತನ ಧರ್ಮದ ಬಗ್ಗೆ ಜನರು ಜಾಗೃತರಾಗಿದ್ದಾರೆ. ನಮ್ಮ ದೇವಾಲಯಗಳು ಕೇವಲ ದೇವರ ಆಲಯವಾಗಿ ಉಳಿದಿಲ್ಲ, ನಮ್ಮ ದೇವಾಲಯಗಳು ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದೆ. ದೇವಾಲಯಗಳು ಆಸ್ಪತ್ರೆ, ಶಾಲೆ, ಆಶ್ರಮಗಳನ್ನು ನಡೆಸುತ್ತಿವೆ, ಹಾಗಾಗಿ ದೇವಾಲಯಗಳು ನಮ್ಮ ಸಂಸ್ಕೃತಿಯ ಪ್ರತೀಕಗಳು ಎಂದರು.

-----------------