ಸಾರಾಂಶ
ಉಡುಪಿ - ಮುಂಬೈ ಮತ್ಸ್ಯಗಂಧ ರೈಲಿಗೆ ಹಳೆಯ ಬೋಗಿಗಳ ಬದಲಿಗೆ ಹೊಸ ಬೋಗಿಗಳನ್ನೇ ಜೋಡಿಸುವಂತೆ ಉಡುಪಿ - ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ, ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಉಡುಪಿ
ಉಡುಪಿ - ಮುಂಬೈ ಮತ್ಸ್ಯಗಂಧ ರೈಲಿಗೆ ಹಳೆಯ ಬೋಗಿಗಳ ಬದಲಿಗೆ ಹೊಸ ಬೋಗಿಗಳನ್ನೇ ಜೋಡಿಸುವಂತೆ ಉಡುಪಿ - ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ, ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಮನವಿ ಸಲ್ಲಿಸಿದ್ದಾರೆ.ಮತ್ಸ್ಯಗಂಧ ರೈಲಿನ ಹಳೆ ಬೋಗಿಗಳ ಅವ್ಯವಸ್ಥೆಯ ಬಗ್ಗೆ ಪ್ರಯಾಣಿಕರು ದೂರುತ್ತಿದ್ದು, ಈ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಈ ರೈಲಿಗೆ 2024ರಲ್ಲಿ ತಯಾರಾದ ಹೊಸ ಎಚ್‌ಬಿಎಚ್ ಕೋಚ್‌ಗಳ ಜೊತೆಗೆ 2020ರಲ್ಲಿ ತಯಾರಾದ ಹಳೆಯ ಎಲ್‌ಎಚ್‌ಬಿ ಕೋಚ್‌ಗಳನ್ನೂ ಸೇರಿಸಲಾಗಿತ್ತು. ಆದ್ದರಿಂದ ಅವ್ಯವಸ್ಥೆಯಾಗಿ ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಮತ್ಸ್ಯಗಂಧ ರೈಲಿನ ಎಲ್ಲ ಟ್ರಿಪ್‌ಗಳಿಗೂ ಉತ್ತಮ 2024ರ ಕೋಚ್‌ಗಳನ್ನೇ ಬಳಸುವಂತೆ ಸಂಬಂಧಿಸಿದ ರೈಲು ವಿಭಾಗಕ್ಕೆ ಆದೇಶಿಸುವಂತೆ ಕೋಟ ಸಚಿವರಿಗೆ ಮನವಿ ಮಾಡಿದರು. ಇದಕ್ಕೆ ಸಚಿವರು ಸಕಾರತ್ಮಕ ಪ್ರತಿಕ್ರಿಯಿಸಿದ್ದಾರೆ ಎಂದು ಸಂಸದ ಕಚೇರಿಯ ಪ್ರಕಟಣೆ ತಿಳಿಸಿದೆ.ಕರಾವಳಿ ಹಾಗೂ ಮುಂಬೈ ಬೆಸೆಯುವ ಮತ್ಸ್ಯಗಂಧ ರೈಲನ್ನು ಮೇಲ್ದರ್ಜೆಗೇರಿಸಲಾಗಿದ್ದು, ಫೆ.17ರಿಂದ ಎಲ್‌ಎಚ್‌ಬಿ ಕೋಚ್‌ಗಳನ್ನು ಅಳವಡಿಸಲಾಗಿದೆ. ಆದರೆ ಈ ರೈಲಿಗೆ ಮಂಗಳೂರು ಮತ್ತು ತಿರುವನಂತಪುರಂ ನಡುವೆ ಓಡುವ ಇನ್ನೊಂದು ರೈಲಿನ ಹಳೆಯ ಕೋಚುಗಳನ್ನು ಜೋಡಿಸಿದಾಗ ಹೊಂದಾಣಿಕೆ ಅವ್ಯವಸ್ಥೆಯಾಗುತ್ತಿದೆ.ಸಂಸದರ ಮನವಿಯಂತೆ ರೈಲ್ವೆ ರಾಜ್ಯ ಸಚಿವ ಸೋಮಣ್ಣ ಅವರು ಮತ್ಸ್ಯಗಂಧ ರೈಲಿಗೆ ಉತ್ತಮ ಕೋಚ್‌ಗಳನ್ನಷ್ಟೇ ಜೋಡಿಸಲು ಮತ್ತು ಹಳೆಯ ಕೋಚ್‌ಗಳನ್ನು ಅಳವಡಿದಂತೆ ಅಥವಾ ಹಳೆಯ ಮತ್ತು ಹೊಸ ಕೋಚ್‌ಗಳನ್ನು ಮಿಶ್ರ ಮಾಡದಂತೆ ದಕ್ಷಿಣ ವಲಯ ರೈಲ್ವೆಗೆ ತಕ್ಷಣ ಸೂಚನೆ ನೀಡಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.