ಸಾರಾಂಶ
ಈಗಾಗಲೇ ತಳಗಟ್ಟು ಹಾಕಿರುವ ಹಾಗೂ ಮುಕ್ತಾಯ ಹಂತದಲ್ಲಿರುವ ಮನೆಗಳಿಗೆ ಈ ಯೋಜನೆ ವಿಸ್ತರಿಸಲು ಸ್ಥಳೀಯ ನಗರಾಡಳಿತ ಜನಪ್ರತಿನಿಧಿಗಳ ವಿನಂತಿಯ ಬಗ್ಗೆ ಸಂಬಂಧಿತ ಅಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಫಲಾನುಭವಿಯಾಗಿ ಮಹಿಳೆಯರಿಗೆ ಪ್ರಾಧಾನ್ಯತೆ ನೀಡಲಾಗುವುದು. ಆದಾಗ್ಯೂ ಮಾಜಿ ಯೋಧರು, ವಿಧುರರು, ಅಂಗವಿಕಲರು, ಹಿರಿಯ ನಾಗರಿಕರಿಗೂ ಸಹ ಅರ್ಜಿ ಸಲ್ಲಿಸಲು ಅವಕಾಶವಿದೆ ಎಂದು ಸಂಸದರು ತಿಳಿಸಿದರು.
ಕನ್ನಡಪ್ರಭ ವಾರ್ತೆ ಉಡುಪಿ
ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಕೇಂದ್ರ ಸರ್ಕಾರವು ಸರ್ವರಿಗೂ ಸೂರು ಒದಗಿಸಲು ೨ನೇ ಹಂತದ ಗೃಹ ನಿರ್ಮಾಣ ಯೋಜನೆ ಕೈಗೆತ್ತಿಕೊಳ್ಳಲಿದೆ. ಇದರಿಂದ ಮುಂದಿನ ೫ ವರ್ಷದಲ್ಲಿ ದೇಶದ ನಗರ ಪ್ರದೇಶದಲ್ಲಿ ೧ ಕೋಟಿ ಬಡ ಜನರಿಗೆ ಮನೆ ನಿರ್ಮಾಣಕ್ಕೆ ಸಹಾಯಧನ ಸಿಗಲಿದೆ. ಆದ್ದರಿಂದ ಜಿಲ್ಲೆಯ ನಗರ ಪ್ರದೇಶದಲ್ಲಿರುವ ಬಡವರನ್ನು ಗುರುತಿಸುವಲ್ಲಿ ನಗರ ಸ್ಥಳೀಯಾಡಳಿತ ಜನಪ್ರತಿನಿಧಿಗಳು ಶ್ರಮಿಸಬೇಕು ಎಂದು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.ಅವರು ಸಾಲಿಗ್ರಾಮ ಪಟ್ಟಣ ಪಂಚಾಯಿತಿಯಲ್ಲಿ ಜಿಲ್ಲಾಮಟ್ಟದ ಸರ್ವರಿಗೂ ಸೂರು ಯೋಜನೆಯ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.ಈಗಾಗಲೇ ತಳಗಟ್ಟು ಹಾಕಿರುವ ಹಾಗೂ ಮುಕ್ತಾಯ ಹಂತದಲ್ಲಿರುವ ಮನೆಗಳಿಗೆ ಈ ಯೋಜನೆ ವಿಸ್ತರಿಸಲು ಸ್ಥಳೀಯ ನಗರಾಡಳಿತ ಜನಪ್ರತಿನಿಧಿಗಳ ವಿನಂತಿಯ ಬಗ್ಗೆ ಸಂಬಂಧಿತ ಅಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಫಲಾನುಭವಿಯಾಗಿ ಮಹಿಳೆಯರಿಗೆ ಪ್ರಾಧಾನ್ಯತೆ ನೀಡಲಾಗುವುದು. ಆದಾಗ್ಯೂ ಮಾಜಿ ಯೋಧರು, ವಿಧುರರು, ಅಂಗವಿಕಲರು, ಹಿರಿಯ ನಾಗರಿಕರಿಗೂ ಸಹ ಅರ್ಜಿ ಸಲ್ಲಿಸಲು ಅವಕಾಶವಿದೆ. ಅರ್ಜಿದಾರರು ಆಧಾರ್‌ಕಾರ್ಡ್, ನಿವೇಶನಕ್ಕೆ ಸಂಬಂಧಿಸಿದ ಹಕ್ಕುಪತ್ರ, ಆದಾಯ ಮತ್ತು ಜಾತಿ ಪ್ರಮಾಣ ಪತ್ರ, ಪಡಿತರ ಚೀಟಿ, ಬ್ಯಾಂಕ್ ಖಾತೆಯ ವಿವರಗಳೊಂದಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು ಎಂದು ಕೋಟ ತಿಳಿಸಿದರು.ಈಗಾಗಲೇ ಪ್ರಥಮ ಹಂತದ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಉಡುಪಿ ಜಿಲ್ಲೆಯಲ್ಲಿ ೧೩೨೦ ಮನೆಗಳು ಪೂರ್ಣಗೊಂಡಿವೆ. ೨ನೇ ಹಂತದ ಯೋಜನೆಯಡಿ ೩೯೫ ಅರ್ಜಿಗಳು ಬಂದಿವೆ. ಎಲ್ಲರೂ ಒಟ್ಟಾಗಿ ಶ್ರಮವಹಿಸಿದರೆ ಇನ್ನೂ ೫ ವರ್ಷದಲ್ಲಿ ನಗರ ಪ್ರದೇಶದ ವಸತಿ ಸಮಸ್ಯೆ ಪರಿಹಾರವಾಗಲಿದೆ ಎಂದವರು ಭರವಸೆ ವ್ಯಕ್ತಪಡಿಸಿದರು.ಸಭೆಯ ಅಧ್ಯಕ್ಷತೆ ವಹಿಸಿದ್ದ ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಜಿಲ್ಲಾಮಟ್ಟದಲ್ಲಿ ನಡೆಯಬೇಕಾಗಿದ್ದ ಸಭೆ ಸಾಲಿಗ್ರಾಮ ಪಟ್ಟಣ ಪಂಚಾಯಿತಿಯಲ್ಲಿ ನಡೆಯುತ್ತಿದ್ದು, ಇದರ ಗಂಭೀರತೆಯನ್ನು ಅರ್ಥ ಮಾಡಿಕೊಂಡು ವಸತಿ ಸಮಸ್ಯೆ ಮುಕ್ತ ನಗರವನ್ನಾಗಿ ಮಾಡಬೇಕು ಎಂದು ಸ್ಥಳೀಯ ಜನಪ್ರತಿನಿಧಿಗಳಿಗೆ ಸೂಚಿಸಿದರು.ಸಭೆಯಲ್ಲಿ ಸಾಲಿಗ್ರಾಮ ಪಪಂ ಅಧ್ಯಕ್ಷೆ ಸುಕನ್ಯಾ ಶೆಟ್ಟಿ, ಉಪಾಧ್ಯಕ್ಷೆ ಗಿರಿಜಾ, ಸದಸ್ಯರಾದ ಅನುಸೂಯ ಹೆರ್ಳೆ, ರಾಜು ಪೂಜಾರಿ, ಸುಲತಾ ಹೆಗ್ಡೆ, ಶ್ಯಾಮ ಸುಂದರ್ ನಾಯರ್, ಸಂಜೀವ ದೇವಾಡಿಗ, ಗಣೇಶ್, ರತ್ನಾ ಗಾಣಿಗ ಮತ್ತು ಭಾಸ್ಕರ ಬಂಗೇರ ಉಪಸ್ಥಿತರಿದ್ದರು.ಉಡುಪಿ ನಗರಸಭೆಯ ಮುಖ್ಯಾಧಿಕಾರಿ ಮಾಲತೇಶ್ ಸ್ವಾಗತಿಸಿದರು. ಸಾಲಿಗ್ರಾಮ ಪಪಂ ಮುಖ್ಯಾಧಿಕಾರಿ ಅಜಯ್ ಭಂಡಾರ್‌ಕರ್ ಪ್ರಾಸ್ತಾವಿಕ ಮಾತನಾಡಿದರು. ಸಭೆಯಲ್ಲಿ ಸಹಾಯಕ ಕಾರ್ಯಪಾಲಕ ಅಭಿಯಂತರ ಮೋಹನ್ ರಾಜ್ ಮತ್ತು ಕುಂದಾಪುರ, ಕಾಪು, ಕಾರ್ಕಳದ ಪುರಸಭಾ ಅಧಿಕಾರಿಗಳು ಉಪಸ್ಥಿತರಿದ್ದರು.;Resize=(128,128))
;Resize=(128,128))
;Resize=(128,128))
;Resize=(128,128))