ಸುಹಾಸ್ ಶೆಟ್ಟಿ ಮನೆಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಭೇಟಿ

| Published : May 05 2025, 12:45 AM IST

ಸುಹಾಸ್ ಶೆಟ್ಟಿ ಮನೆಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಭೇಟಿ
Share this Article
  • FB
  • TW
  • Linkdin
  • Email

ಸಾರಾಂಶ

ಶಾಸಕರಾದ ರಾಜೇಶ್ ನಾಯ್ಕ್ ರವರೊಂದಿಗೆ ಭೇಟಿ ನೀಡಿದ ಸಂಸದ ಕೋಟ, ಸುಹಾಸ್ ಶೆಟ್ಟಿ ಅವರ ತಂದೆ ತಾಯಿ ಮತ್ತು ಅವರ ಸಹೋದರರಿಗೆ ಸಾಂತ್ವಾನ ಹೇಳಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಇತ್ತೀಚೆಗೆ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಹಿಂದೂ ಸಂಘಟನೆಯ ಕಾರ್ಯಕರ್ತ ಸುಹಾಸ್ ಶೆಟ್ಟಿ ಮನೆಗೆ ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಭೇಟಿ ನೀಡಿದರು.

ಶಾಸಕರಾದ ರಾಜೇಶ್ ನಾಯ್ಕ್ ರವರೊಂದಿಗೆ ಭೇಟಿ ನೀಡಿದ ಸಂಸದ ಕೋಟ, ಸುಹಾಸ್ ಶೆಟ್ಟಿ ಅವರ ತಂದೆ ತಾಯಿ ಮತ್ತು ಅವರ ಸಹೋದರರಿಗೆ ಸಾಂತ್ವಾನ ಹೇಳಿದರು. ಈ ಸಂದರ್ಭದಲ್ಲಿ ಸುಹಾಸ್ ಶೆಟ್ಟಿ ಅವರ ಹೆತ್ತವರು, ಸರ್ಕಾರವು ತನ್ನ ಮಗನನ್ನು ನಡೆಸಿಕೊಂಡ ರೀತಿಯ ಬಗ್ಗೆ ಬೇಸರ ತೋಡಿಕೊಂಡರು. ಸುಮಾರು 20 ದಿನಗಳಿಂದ ಸುಭಾಸ್ ಶೆಟ್ಟಿಯನ್ನು ಪದೇ ಪದೇ ಪರಿಶೀಲಿಸಿ ಆತನ ಕಾರು ತಪಾಸಣೆ ಮಾಡಿ ಆತನನ್ನು ನಿಶಸ್ತ್ರಗೊಳಿಸಿದ್ದರು. ಠಾಣೆಗೆ ಕರೆಸಿ ಯಾವುದೇ ಕಾರಣಕ್ಕೂ ಯಾವುದೇ ಶಸ್ತ್ರಾಸ್ತ್ರವನ್ನು ಇಟ್ಟುಕೊಂಡರೆ ಜೈಲಿಗೆ ಅಟ್ಟುತ್ತೇವೆ ಎಂಬ ಬೆದರಿಕೆಯನ್ನು ಪೊಲೀಸರ ಮೂಲಕ ಸರ್ಕಾರವು ಹಾಕಿತ್ತು. ಈ ಮೂಲಕ ಸರ್ಕಾರವು ತನ್ನ ಮಗನನ್ನು ಕೊಲ್ಲಲು ದುಷ್ಕರ್ಮಿಗಳಿಗೆ ಪರೋಕ್ಷವಾಗಿ ಸಹಕರಿಸಿದೆ. ಕನಿಷ್ಠ ಉಸ್ತುವಾರಿ ಸಚಿವರು ಮತ್ತು ಗೃಹ ಸಚಿವರು ಮಂಗಳೂರಿಗೆ ಬಂದಿದ್ದರೂ ಮನೆಗೆ ಬಾರದೆ ಒಂದು ಸಾಂತ್ವನ ಹೇಳುವ ಕನಿಷ್ಠ ಕೆಲಸವನ್ನು ಮಾಡಲಿಲ್ಲ. ಅದರ ಬದಲು ಮುಸ್ಲಿಂ ಮುಖಂಡರು ಹೇಳಿದಂತೆ ಸರ್ಕಾರ ಕುಣಿಯುತ್ತಿದೆ ಎಂದು ಸುಹಾಸ್ ಕುಟುಂಬಸ್ಥರು ಬೇಸರ ತೋಡಿಕೊಂಡರು.ಎಲ್ಲಾ ಹೇಳಿಕೆಗಳನ್ನು ಗಮನಿಸಿದ ಸಂಸದರು ನಿಶ್ಚಯವಾಗಿ ಈ ಪ್ರಕರಣವನ್ನು ಎನ್ಐಎ ಗೆ ಒಳಪಡಿಸುವಂತೆ ಒತ್ತಾಯಿಸಲಾಗುವುದು ಎಂದು ಭರವಸೆ ನೀಡಿದರು.ಈ ಸಂದರ್ಭದಲ್ಲಿ ಭಾರತೀಯ ಜನತಾ ಪಾರ್ಟಿಯ ಮುಖಂಡರಾದ ದೇವದಾಸ್ ಶೆಟ್ಟಿ ಹಾಗೂ ಇತರರು ಉಪಸ್ಥಿತರಿದ್ದರು.