ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಮಲೆನಾಡಿನ ರೈತರಿಗೆ ಭೂಮಿ ಹಕ್ಕು ಕೊಡಿಸುವಲ್ಲಿ ಸಂಸದ ಬಿ.ವೈ.ರಾಘವೇಂದ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ಮಲೆನಾಡು ರೈತ ಹೋರಾಟ ಸಮಿತಿ ಸಂಚಾಲಕ ತೀ.ನಾ ಶ್ರೀನಿವಾಸ್ ಆರೋಪಿಸಿದರು.ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ರೈತರು ಶರಾವತಿ ಮುಳುಗಡೆ ಸಂತ್ರಸ್ತರು, ತುಂಗಾ-ಭದ್ರಾ, ವರಾಹಿ, ಚಕ್ರಾ ಸಾವೆಹಕ್ಲು, ಅಂಬ್ಲಿಗೊಳ ಆಣೆಕಟ್ಟು ನಿರ್ಮಾಣಕ್ಕೆ ಭೂಮಿ ತ್ಯಾಗ ಮಾಡಿ ಏಳು ದಶಕಗಳು ಕಳೆದರೂ ಇಂದಿಗೂ ಭೂಮಿ ಹಕ್ಕು ಕೊಡಿಸುವಲ್ಲಿ ವಿಫಲರಾಗಿದ್ದಾರೆ ಎಂದರು.
ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಬಿ.ಎಸ್.ಯಡಿಯೂರಪ್ಪನವರು 15 ದಿನದೊಳಗೆ ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದರು. ಇತ್ತ ಕಾಂಗ್ರೆಸ್‌ನವರು ಮಲೆನಾಡು ಜನಾಕ್ರೋಶ ಸಭೆ ನಡೆಸಿ ಪಕ್ಷ ಅಧಿಕಾರಕ್ಕೆ ಬಂದರೆ 6 ತಿಂಗಳೊಳಗೆ ಶರಾವತಿ ಮುಳುಗಡೆ ಸಂತ್ರಸ್ತರು ಹಾಗೂ ಬಗರ್‌ಹುಕುಂ ರೈತ ಸಮಸ್ಯೆ ಬಗೆಹರಿಸುವುದಾಗಿ ಆಶ್ವಾಸನೆ ನೀಡಿದ್ದರು. ಆದರೆ 60 ವರ್ಷಗಳ ಹಿಂದೆ ಕೊಟ್ಟ ಹಕ್ಕುಪತ್ರಗಳನ್ನು ವಜಾ ಮಾಡುವ ಮೂಲಕ ರೈತರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆಯನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರದ ಅಧಿಕಾರಿಗಳು ಪರಸ್ಪರ ಕೂತು ಮಾತನಾಡಿ ಬಗೆಹರಿಸುವಂತೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದರೂ ಅಧಿಕಾರಿಗಳು ಪಾಲನೆ ಮಾಡುತ್ತಿಲ್ಲ. ಶರಾವತಿ ಮುಳುಗಡೆ ಸಂತ್ರಸ್ತರನ್ನು ಸರ್ವೆ ಕಾರ್ಯದಿಂದ ಕೈ ಬಿಡಲಾಗಿದೆ. ಅಧಿಕಾರಿಗಳನ್ನು ಪ್ರಶ್ನೆ ಮಾಡಿದರೆ ತುಘಲಕ್ ದರ್ಬಾರ್ ನಡೆಸುತ್ತಿದ್ದಾರೆ. ಇದನ್ನು ಜಿಲ್ಲಾ ಸಚಿವರು ಮತ್ತು ಸಂಸದರ ಗಮನಕ್ಕೆ ತಂದರೆ ಹಾರಿಕೆ ಉತ್ತರ ನೀಡುತ್ತಿದ್ದಾರೆ. ಸಂಸದ ಬಿ.ವೈ.ರಾಘವೇಂದ್ರ ಮತ್ತು ಸಚಿವ ಮಧುಬಂಗಾರಪ್ಪ ಅಧಿಕಾರಿಗಳ ಕೈಗೊಂಬೆಯಾಗಿದ್ದಾರೆ ಎಂದು ಟೀಕಿಸಿದರು.
ಜಿಲ್ಲೆಯಲ್ಲಿ ಗೋಮಾಳ, ಹುಲ್ಲುಬನಿ, ದನಗಳಿಗೆ ಮುಪ್ಪತ್ತು ಎಂದಿರುವ ಸಾವಿರಾರು ಎಕರೆ ಭೂಮಿಯನ್ನು ಪಂಚಾಯಿತ್ತಿಗೆ, ಜನರಿಗೆ ಯಾವುದೇ ಮಾಹಿತಿ ನೀಡದೇ ಅರಣ್ಯ ಎಂದು ಮಾಡುತ್ತಿದ್ದಾರೆ. ಕಾನು, ಸೊಪ್ಪಿನಬೆಟ್ಟ, ಚೌಡಿ ಪ್ರದೇಶವನ್ನು ಪರಿಭಾವಿತ ಅರಣ್ಯ ಎಂದು ಮಾಡಿ ಹಕ್ಕುಪತ್ರಗಳನ್ನು ವಜಾ ಮಾಡುತ್ತಿದ್ದಾರೆ. ಸಂಸದ ಬಿ.ವೈ.ರಾಘವೇಂದ್ರ ಮತ್ತು ಸಚಿವ ಮಧುಬಂಗಾರಪ್ಪ ಕ್ಷೇತ್ರದಲ್ಲಿನ ಸುಮಾರು 25 ಸಾವಿರ ಕುಟುಂಬಗಳು ಸಮಸ್ಯೆಯಲ್ಲಿವೆ ಎಂದು ಹೇಳಿದರು.1978 ಏಪ್ರಿಲ್ 27ರ ಹಿಂದೆ ಅರಣ್ಯ ಭೂಮಿ ಸಾಗುವಳಿ ಮಾಡಿಕೊಂಡು ಕೈಬರಹದ ಪಹಣಿ, ದಂಡಕಟ್ಟಿದ ರಶೀದಿ ಹೊಂದವರಿಗೆ 3 ಎಕರೆ ಭೂಮಿ ಮಂಜೂರು ಮಾಡಲು ಕೇಂದ್ರ ಸರ್ಕಾರ ಜಮೀನು ಬಿಡುಗಡೆ ಮಾಡಿದೆ. ಆದರೂ ಅಧಿಕಾರಿಗಳು ಭೂಮಿ ಹಕ್ಕು ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಒಟ್ಟಾರೆ ಈ ಎಲ್ಲಾ ಜನಪ್ರತಿನಿಧಿಗಳು ರೈತರ ಪಾಲಿಗೆ ಸತ್ತಂತ್ತಾಗಿದ್ದಾರೆ. ಇನ್ನಾದರೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮುಳುಗಡೆ ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.ಈ ಹಿನ್ನೆಲೆಯಲ್ಲಿ ಮಲೆನಾಡು ರೈತ ಹೋರಾಟ ಸಮಿತಿಯ ಮತ್ತೆ ತನ್ನ ಹೋರಾಟವನ್ನು ಜಿಲ್ಲೆಯಲ್ಲಿ ಮುಂದುವರಿಸುತ್ತದೆ. ಈ ಹೋರಾಟ ಶಿಕಾರಿಪುರದಿಂದಲೇ ಆರಂಭವಾಗುತ್ತದೆ. ವಿಜಯೇಂದ್ರ, ಗೋಪಾಲಕೃಷ್ಣ ಬೇಳೂರು ಸೇರಿದಂತೆ ಯಾರೂ ರೈತರ ನೆರವಿಗೆ ಬಂದಿಲ್ಲ. ಹಾಗಾಗಿ ಹೋರಾಟ ಅನಿವಾರ್ಯ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಷಣ್ಮುಖ ಕಂಚಾಳಸರ, ಪ್ರವೀಣ್ ಬ್ಯಾಡನಾಳ್, ಸರ್ವತ್ತೋಮ, ಸುಬ್ಬಪ್ಪ ಮತ್ತಿತರರು ಇದ್ದರು.