ಸಂಸದ ಬಿ.ವೈ.ರಾಘವೇಂದ್ರ ಅವರು ಸಂಸತ್ತಿನ ಚಳಿಗಾಲ ಅಧಿವೇಶನದ ಸಂದರ್ಭದಲ್ಲಿ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಡಾ.ಮನ್ಸೂಖ್‌ ಮಾಂಡವೀಯ ಅವರನ್ನು ನವದೆಹಲಿಯಲ್ಲಿ ಭೇಟಿ ಮಾಡಿ, ಜಿಲ್ಲೆಯ ಕಾರ್ಮಿಕ ಕಲ್ಯಾಣ ಹಾಗೂ ಆರೋಗ್ಯ ಸೇವೆಗಳ ಬಲವರ್ಧನೆಗೆ ಸಂಬಂಧಿಸಿದ ವಿಷಯಗಳ ಕುರಿತು ಚರ್ಚಿಸಿದರು.

ಶಿವಮೊಗ್ಗ: ಸಂಸದ ಬಿ.ವೈ.ರಾಘವೇಂದ್ರ ಅವರು ಸಂಸತ್ತಿನ ಚಳಿಗಾಲ ಅಧಿವೇಶನದ ಸಂದರ್ಭದಲ್ಲಿ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಡಾ.ಮನ್ಸೂಖ್‌ ಮಾಂಡವೀಯ ಅವರನ್ನು ನವದೆಹಲಿಯಲ್ಲಿ ಭೇಟಿ ಮಾಡಿ, ಜಿಲ್ಲೆಯ ಕಾರ್ಮಿಕ ಕಲ್ಯಾಣ ಹಾಗೂ ಆರೋಗ್ಯ ಸೇವೆಗಳ ಬಲವರ್ಧನೆಗೆ ಸಂಬಂಧಿಸಿದ ವಿಷಯಗಳ ಕುರಿತು ಚರ್ಚಿಸಿದರು.ಶಿವಮೊಗ್ಗ ಸೇರಿದಂತೆ ಮಧ್ಯ ಕರ್ನಾಟಕದ ಜಿಲ್ಲೆಗಳಲ್ಲಿ ಕೈಗಾರಿಕಾ ಚಟುವಟಿಕೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಸಾಕಷ್ಟು ಸಂಖ್ಯೆಯಲ್ಲಿ ಕಾರ್ಮಿಕರು ಕರ್ತವ್ಯ ನಿರ್ವಹಿಸುತ್ತಿರುವುದರಿಂದ ವಿಮಾ ಸೌಲಭ್ಯಗಳನ್ನು ತ್ವರಿತವಾಗಿ ಪಡೆಯಲು ಕಾರ್ಮಿಕರಿಗೆ ಮತ್ತು ಉದ್ಯೋಗದಾತರಿಗೆ ಹೆಚ್ಚು ಅನುಕೂಲವಾಗುವ ಕಾರಣ ಶಿವಮೊಗ್ಗದಲ್ಲಿ ಕಾರ್ಮಿಕ ಇಲಾಖೆಯ ಉಪ-ಪ್ರಾದೇಶಿಕ ಕಚೇರಿ ಮಂಜೂರಾತಿ ನೀಡುವಂತೆ ಮನವಿ ಮಾಡಿದರು.ಶಿವಮೊಗ್ಗ ಕಾರ್ಮಿಕ ನೌಕರರ ರಾಜ್ಯ ವಿಮಾ ನಿಗಮ ಆಸ್ಪತ್ರೆಯ ಕಾಮಗಾರಿ ಶಿವಮೊಗ್ಗದ ರಾಗಿಗುಡ್ಡದಲ್ಲಿ ನಡೆಯುತ್ತಿದ್ದು, ಇಎಸ್‌ಐ ಆಸ್ಪತ್ರೆಯನ್ನು ರಾಜ್ಯ ಸರ್ಕಾರದ ಸುಪರ್ದಿಗೆ ನೀಡದೇ ನೇರವಾಗಿ ಕೇಂದ್ರದ ಆಡಳಿತ ವ್ಯಾಪ್ತಿಗೆ ಒಳಪಡಿಸಬೇಕೆಂದು ಮನವಿ ಸಲ್ಲಿಸಿದರು.

ಕೇಂದ್ರ ಸರ್ಕಾರಕ್ಕೆ ವಹಿಸಿಕೊಟ್ಟಲ್ಲಿ ಉತ್ತಮ ಸೇವಾ ಗುಣಮಟ್ಟ, ಸಿಬ್ಬಂದಿ, ಅಗತ್ಯ ಮೂಲಭೂತ ಸೌಕರ್ಯಗಳು ದೊರೆಯುವುದರಿಂದ ಹೆಚ್ಚು ಅನುಕೂಲವಾಗಲಿದೆ. ಹಾಗೂ ಮಲೆನಾಡು ಪ್ರದೇಶದ ಸಾವಿರಾರು ವಿಮಾ ಫಲಾನುಭವಿಗಳಿಗೆ ಉತ್ತಮ ಮತ್ತು ನಿರಂತರ ವೈದ್ಯಕೀಯ ಸೇವೆಯನ್ನು ಒದಗಿಸಲು ನೆರವಾಗಲಿದೆ ಎಂದು ಸಚಿವರಿಗೆ ಮನವರಿಕೆ ಮಾಡಿಕೊಟ್ಟರು.ಸಂಸದರ ಮನವಿಗೆ ಕೇಂದ್ರ ಸಚಿವರಾದ ಡಾ.ಮನ್ಸೂಖ್‌ ಮಾಂಡವೀಯ ಅವರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿ, ಆದ್ಯತೆ ಮೇರೆಗೆ ಪರಿಶೀಲಿಸಿ ಮಂಜೂರಾತಿ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ಸಂಸದ ಬಿ.ವೈ ರಾಘವೇಂದ್ರ ಅವರು ತಿಳಿಸಿದ್ದಾರೆ.

ನಿರಂಜನಾನಂದಪುರಿ ಸ್ವಾಮೀಜಿ ಭೇಟಿ

ಶಿವಮೊಗ್ಗ: ಸಂಸತ್ತಿನ ಚಳಿಗಾಲದ ಅಧಿವೇಶನ ನಡುವೆ ಸಂಸದ ಬಿ.ವೈ.ರಾಘವೇಂದ್ರ ಅವರ ಆಹ್ವಾನದ ಮೇರೆಗೆ, ಕಾಗಿನೆಲೆ ಮಹಾಸಂಸ್ಥಾನ, ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ನವದೆಹಲಿಯ ಸಂಸದರ ಗೃಹ ಕಚೇರಿಗೆ ಭೇಟಿ ನೀಡಿದರು. ಈ ವೇಳೆ ಸಂಸದ ಬಿ.ವೈ.ರಾಘವೇಂದ್ರ ಅವರು ಶ್ರೀಗಳನ್ನು ಆದರಪೂರ್ವಕವಾಗಿ ಸ್ವಾಗತಿಸಿ, ಸತ್ಕರಿಸಿ, ಆಶೀರ್ವಾದ ಕೋರಿದರು.ಈ ವೇಳೆ ಕೊಪ್ಪಳ ಸಂಸದ ರಾಜಶೇಖರ್ ಹಿಟ್ನಾಳ್, ಮಾಜಿ ಸಂಸದ ವಿರುಪಾಕ್ಷಪ್ಪ, ಮಾಜಿ ಸಭಾಪತಿಗಳಾದ ರಘುನಾಥ್ ರಾವ್ ಮಲ್ಕಾಪುರೆ, ಹಾಲುಮತ ಮಹಾಸಭಾದ ರಾಜ್ಯಾಧ್ಯಕ್ಷ ರುದ್ರಣ್ಣ ಗುಳಗುಳಿ, ರಾಜ್ಯ ಉಪಾಧ್ಯಕ್ಷ ಡಾ.ಪ್ರಶಾಂತ್.ಡಿ.ಟಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ್ ಮರಿಗೌಡ ಮೊದಲಾದವರು ಕೂಡ ಉಪಸ್ಥಿತರಿದ್ದರು.“ಶ್ರೀಗಳನ್ನು ಸ್ವಾಗತಿಸಿ, ಗೌರವಿಸಿ, ಕುಶಲೋಪರಿ ವಿಚಾರಿಸಿ, ಆಶೀರ್ವಾದ ಪಡೆಯುವ ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯ. ಅವರೊಂದಿಗೆ ಹಲವಾರು ವಿಷಯಗಳ ಕುರಿತು ಚರ್ಚಿಸಿ, ಮಾರ್ಗದರ್ಶನ ಪಡೆಯಲಾಯಿತು, " ಎಂದು ಸಂಸದ ರಾಘವೇಂದ್ರ ತಿಳಿಸಿದ್ದಾರೆ.ಹಾಲುಮತ ಸಮುದಾಯದ ಶ್ರೇಯೋಭಿವೃದ್ಧಿ, ಕೇಂದ್ರ ಸರ್ಕಾರದ ಮಟ್ಟದಲ್ಲಿ ಪ್ರಸ್ತಾಪಿಸುವಂತಹ ಬೇಡಿಕೆಗಳು ಹಾಗೂ ಸಮಾಜದ ಬಲವರ್ಧನೆ ನಿಟ್ಟಿನಲ್ಲಿ ಸಮಾಲೋಚನೆಗಳು ನಡೆದಿರುವುದಾಗಿ ತಿಳಿದು ಬಂದಿದೆ.