ಸಾರಾಂಶ
ಕನ್ನಡ ಪ್ರಭ ವಾರ್ತೆ ತಾಳಗುಪ್ಪ / ರಿಪ್ಪನ್‍ಪೇಟೆ
ಹೋಬಳಿಯ ನೆರೆ ಆವೃತ ಪ್ರದೇಶಕ್ಕೆ ಸಂಸದ ಬಿ.ವೈ.ರಾಘವೇಂದ್ರ, ಮಾಜಿ ಸಚಿವ ಕುಮಾರ ಬಂಗಾರಪ್ಪರ ಜೊತೆಗೂಡಿ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಳೆದ 15 ದಿನಗಳಿಂದ ಎಡಬಿಡದೆ ನಿರಂತರ ಮಳೆಯಿಂದ ಹೋಬಳಿಯ ಸೈದೂರು ಮತ್ತು ಕಾನ್ಲೆ ಹಿರೇನೆಲ್ಲೂರು, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 5 ಸಾವಿರ ಎಕರೆಗೂ ಹೆಚ್ಚಿನ ಕೃಷಿ ಜಮೀನು ಜಲಾವೃತಗೊಂಡಿರುವುದನ್ನು ವೀಕ್ಷಿಸಿದ ಅವರು ರೈತರಿಂದ ಬಿತ್ತನೆ ಮಾಡಿದ ಭತ್ತ, ಕಬ್ಬು, ಶುಂಠಿ ಬೆಳೆಗಳು ನೀರಿನಲ್ಲಿ ಸಂಪೂರ್ಣ ಮುಳುಗಿದ ಮಾಹಿತಿ ಪಡೆದರು.ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಹತ್ತು ಹಳ್ಳಿಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ನೆರೆ ಬರುತ್ತದೆ ಎನ್ನುವುದರ ಅರಿವಿಲ್ಲದ ರೈತರು ಭತ್ತವೂ ಸೇರಿದಂತೆ ಕಬ್ಬು, ಶುಂಠಿ, ಅನಾನಸ್, ಜೋಳ ಮತ್ತಿತರ ಬೆಳೆ ಬೆಳೆದಿದ್ದಾರೆ. ಆದರೆ ನೆರೆಯಿಂದಾಗಿ ಕೊಳೆತು ಅಪಾರ ನಷ್ಟ ಅನುಭವಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತಕ್ಷಣ ರಾಜ್ಯ ಸರ್ಕಾರ ಇದನ್ನು ಗಮನಹರಿಸಬೇಕು. ಸಕಾಲದಲ್ಲಿ ಅಧಿಕಾರಿಗಳನ್ನು ಕಳಿಸಿ ಪ್ರಾಮಾಣಿಕವಾಗಿ ಹಾನಿಯ ವರದಿ ಸಿದ್ಧಗೊಳಿಸಿ, ಸೂಕ್ತ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಮಾಜಿ ಸಚಿವ ಕುಮಾರ ಬಂಗಾರಪ್ಪ ಮಾತನಾಡಿ, ನೀರಾವರಿ ತಜ್ಞರು ಈ ಪ್ರದೇಶ ಸುಮಾರು 110 ಚದುರ ಕಿಲೋ ಮೀಟರ್ ಜಲಾನಯನ ಪ್ರದೇಶ ಹೊಂದಿದ್ದು, ಎರಡು ಟಿಎಂಸಿಗಿಂತಲೂ ಹೆಚ್ಚಿನ ನೀರು ಲಭ್ಯವಾಗುವ ಸಾಧ್ಯತೆ ಇದೆ ಎಂದರು.ನೆರೆ ಸಮಸ್ಯೆಗೆ ಶಾಶ್ವತ ಪರಿಹಾರಕ್ಕಾಗಿ ನದಿಯ ಹರಿವಿಗೆ ಇರುವ ಅಡೆತಡೆಗಳನ್ನು ತೆರವುಗೊಳಿಸಿ, ನೀರು ಸರಾಗವಾಗಿ ಹರಿಯುವಂತೆ ವ್ಯವಸ್ಥೆಗೊಳಿಸುವುದು, ಹಾಗೂ ಅಲ್ಲಲ್ಲಿ ಕೃತಕ ಕೆರೆ ನಿರ್ಮಿಸಿ ನೀರು ಸಂಗ್ರಹಿಸಿ ವಾರ್ಷಿಕವಾಗಿ ಒಂದೇ ಬೆಳೆ ಬೆಳೆಯುತ್ತಿರುವ ಆನವಟ್ಟಿವರೆಗಿನ ರೈತರಿಗೆ ಎರಡನೆ ಬೆಳೆ ಬೆಳೆಯಲು ನೀರು ನೀಡುವಂತೆ ಒಂದು ವರ್ಷದಲ್ಲಿ ಪೂರ್ಣಗೊಳ್ಳಬಹುದಾದ 400 ಕೋಟಿ ರು. ವೆಚ್ಚದ ಕ್ರಿಯಾ ಯೋಜನೆಯನ್ನು ರೂಪಿಸಲಾಗಿತ್ತು. ಇದಕ್ಕೆ ತಾಂತ್ರಿಕ ಅನುಮೋದನೆ ದೊರೆತಿದ್ದು, ಸಕಾಲದಲ್ಲಿ ಅನುದಾನ ದೊರಕಿಸಿಕೊಳ್ಳಲಾಗದೆ ಯೋಜನೆ ನೆರವೇರಿಲ್ಲ. ಸಾವಿರಾರು ರೈತರಿಗೆ ಉಪಯುಕ್ತವಾದ ಯೋಜನೆ ಪೂರ್ಣಗೊಳ್ಳಲು ಕೇಂದ್ರ ಸರಕಾರಕ್ಕೆ ಸಂಸದರ ಮೂಲಕ ಮನವಿ ಮಾಡಲಾಗುತ್ತಿದೆ ಎಂದರು.
ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ್ ಹಕ್ರೆ, ಲಲಿತಾ ನಾರಾಯಣ, ಗ್ರಾಪಂ ಅಧ್ಯಕ್ಷ ಲಕ್ಮೀನಾರಾಯಣ, ದೇವೇಂದ್ರಪ್ಪ ಯಲಕುಂದ್ಲಿ, ಪ್ರಕಾಶ್ ತಲಕಾಲಕೊಪ್ಪ, ವೀರುಪಾಕ್ಷಪ್ಪ, ಜೀತೇಂದ್ರ ಮತ್ತು ಗ್ರಾಮಸ್ಥರು ಇದ್ದರು.ಅರಸಾಳು ಬಳಿ ರೈಲ್ವೆ ಹಳಿ ಮೇಲೆ ಬಿದ್ದ ಮರ
ರಿಪ್ಪನ್‍ಪೇಟೆ: ಸಮೀಪದ ಅರಸಾಳು ಬಳಿಯ 9ನೇ ಮೈಲಿಕಲ್ಲು ಬಳಿ ಭಾರಿ ಮಳೆಯಿಂದಾಗಿ ರೈಲ್ವೆ ಹಳಿಯ ಮೇಲೆ ಮರವೊಂದು ಬಿದ್ದು ವಿದ್ಯುತ್ ಕಂಬಗಳು ಧರೆಗುರುಳಿದ ಘಟನೆ ಗುರುವಾರ ಸಂಜೆ ನಡೆದಿದೆ.
ಅರಸಾಳು ಮಾಲ್ಗುಡಿ ರೈಲ್ವೆ ನಿಲ್ದಾಣದಿಂದ ಒಂದು ಕಿ.ಮೀ. ಅಂತರದ 9 ನೇ ಮೈಲಿಕಲ್ಲು ಗ್ರಾಮದ ರೈಲ್ವೆ ಹಳಿಯ ಮೇಲೆ ಬೃಹತ್ ಮರ ಬಿದ್ದು ನೆಲಕ್ಕುರುಳಿವೆ. ತಾಳಗುಪ್ಪ -ಬೆಂಗಳೂರು ರೈಲುಗಾಡಿಗೆ ಅಡ್ಡಲಾಗಿ ಬಿದ್ದಿದ್ದ ಮರ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಂದಲೇ ಮರ ತೆರವು ಕಾರ್ಯ ನಡೆದಿದೆ ಎನ್ನಲಾಗಿದೆ. ರೈಲ್ ನಲ್ಲಿದ್ದ ಇಂಟೀರಿಯರ್ಸ್ ವರ್ಕ್ ಕೆಲಸ ಮಾಡುವ ರಾಮದಾಸ್ ಮತ್ತವರ ತಂಡ ಪ್ರಯಾಣಿಸುತ್ತಿರುವಾಗ ರೈಲು ಮಾರ್ಗ ಮಧ್ಯದಲ್ಲಿ ಅತಿಯಾದ ಮಳೆಯಿಂದ ಮರ ಬಿದ್ದಿತ್ತು. ಮರದ ತೆರವು ಕಾರ್ಯವನ್ನು ಇಂಟೀರಿಯರ್ ವರ್ಕ್ ಟೀಮಿನ ಆನಂದ್, ಲೋಕೇಶ್, ಮಾಣಿ ,ರಾಹುಲ್, ಪ್ರಜ್ವಲ್ ಒಗ್ಗೂಡಿ ಮರ ತೆರವು ಕಾರ್ಯ ನಡೆದ ಬಳಿಕ ರೈಲು ಸಂಚರಿಸಿದೆ ಎಂದು ತಿಳಿದು ಬಂದಿದೆ.ಬೆಳಗ್ಗೆ 5.15ಕ್ಕೆ ತಾಳಗುಪ್ಪದಿಂದ ಹೊರಟಿದ್ದ ರೈಲು ಬೆಳಗ್ಗೆ 7 ಗಂಟೆಗೆ ಶಿವಮೊಗ್ಗ ನಿಲ್ದಾಣ ತಲುಪಬೇಕಿತ್ತು. ಆದರೆ ಬೆಳಗ್ಗೆ 9.05ಕ್ಕೆ ಶಿವಮೊಗ್ಗ ನಿಲ್ದಾಣ ತಲುಪಿದೆ. ಬೆಳಗ್ಗೆ 9.18ಕ್ಕೆ ಶಿವಮೊಗ್ಗ ನಿಲ್ದಾಣದಿಂದ ಹೊರಟಿದೆ. ಈ ರೈಲು ಇವತ್ತು ಅರಸೀಕೆರೆ ನಿಲ್ದಾಣದವರೆಗೆ ಮಾತ್ರ ಸಂಚರಿಸುತ್ತಿತ್ತು. ಹಾಗಾಗಿ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ರೈಲಿನಲ್ಲಿ ಇರಲಿಲ್ಲ.