ಮಠ, ಮಂದಿರಗಳಿಗೆ ಸಂಸದ ರಾಘವೇಂದ್ರ ಭೇಟಿ

| Published : Mar 24 2024, 01:30 AM IST

ಸಾರಾಂಶ

ರಾಘವೇಂದ್ರ ಅವರು ಶನಿವಾರ ಸಾಗರ ತಾಲೂಕಿನ ಶ್ರೀಧರಾಶ್ರಮಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಅಲ್ಲಿಂದ ಹೊಸನಗರ ತಾಲೂಕಿನ ಶ್ರೀರಾಮಚಂದ್ರಾಪುರ ಮಠಕ್ಕೆ ಭೇಟಿ ನೀಡಿದ ರಾಘವೇಂದ್ರ ಅವರು ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ಭೇಟಿಯಾಗಿ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಎಸ್‌. ದತ್ತಾತ್ರಿ, ಗುರುಮೂರ್ತಿ ಮತ್ತಿತರರಿದ್ದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಲೋಕಸಭಾ ಚುನಾವಣೆಗೆ ಪೂರ್ವಭಾವಿಯಾಗಿ ಸ್ವತಂತ್ರ ಅಭ್ಯರ್ಥಿ ಎಂದು ಘೋಷಿಸಿಕೊಂಡಿರುವ ಈಶ್ವರಪ್ಪ ಅವರ ಟೆಂಪಲ್‌ ರನ್‌ ಮುಗಿಯುವಷ್ಟರಲ್ಲಿಯೇ ಹಾಲಿ ಸಂಸದ, ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಮಠ ಮಂದಿರಗಳ ಭೇಟಿ ಕಾರ್ಯಕ್ರಮ ಆರಂಭಿಸಿದ್ದಾರೆ.

ರಾಘವೇಂದ್ರ ಅವರು ಶನಿವಾರ ಸಾಗರ ತಾಲೂಕಿನ ಶ್ರೀಧರಾಶ್ರಮಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಅಲ್ಲಿಂದ ಹೊಸನಗರ ತಾಲೂಕಿನ ಶ್ರೀರಾಮಚಂದ್ರಾಪುರ ಮಠಕ್ಕೆ ಭೇಟಿ ನೀಡಿದ ರಾಘವೇಂದ್ರ ಅವರು ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ಭೇಟಿಯಾಗಿ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಎಸ್‌. ದತ್ತಾತ್ರಿ, ಗುರುಮೂರ್ತಿ ಮತ್ತಿತರರಿದ್ದರು. ಶಿವಮೊಗ್ಗದ ಶ್ರೀ ನಾರಾಯಣ ಗುರುಪೀಠದ ಶ್ರೀ ರೇಣುಕಾನಂದ ಸ್ವಾಮೀಜಿ, ಶಿಕಾರಿಪುರದ ಶ್ರೀ ಚನ್ನಬಸವ ಸ್ವಾಮೀಜಿ ಭೇಟಿಯಾಗಿ ಆಶೀರ್ವಾದ ಪಡೆದರು.

ಬಳಿಕ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಶಾಖಾ ಮಠವಾದ ಚಿತ್ರದುರ್ಗದ ಸಾಣೇಹಳ್ಳಿ ಪೀಠಕ್ಕೆ ಭೇಟಿ ನೀಡಿ, ಅಲ್ಲಿನ ಪೀಠಾಧಿಪತಿಗಳಾದ ಶ್ರೀ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರ ಆಶೀರ್ವಾದ ಪಡೆದರು. ಆ ನಂತರ ಹೊಸದುರ್ಗದ ಭಗೀರಥ ಪೀಠದ ಪೀಠಾಧಿಪತಿಗಳಾದ ಜಗದ್ಗುರು ಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.

ಅಲ್ಲಿಂದ ಚಿತ್ರದುರ್ಗದಲ್ಲಿ ಭೋವಿ ಗುರುಪೀಠಕ್ಕೆ ಭೇಟಿ ಅಲ್ಲಿ ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಹೊಸದುರ್ಗ ಕುಂಚಟಿಗ ಮಹಾ ಸಂಸ್ಥಾನ ಮಠನ ಶ್ರೀ ಶಾಂತವೀರ ಸ್ವಾಮೀಜಿ, ಮಡಿವಾಳ ಗುರುಪೀಠದ ಶ್ರೀ ಬಸವ ಮಾಚಿದೇವ ಸ್ವಾಮೀಜಿ ಭೇಟಿಯಾಗಿ ಆಶಿರ್ವಾದ ಪಡೆದರು.

ಆ ಬಳಿಕ ಶ್ರೀ ಮಾದಾರ ಚನ್ನಯ್ಯ ಗುರುಪೀಠಕ್ಕೆ ಭೇಟಿ ನೀಡಿದ ಸಂಸದರು ಜಗದ್ಗುರು ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಭೇಟಿಯಾಗಿ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಪ್ರಮುಖರಾದ ಮಂಗೋಟೇ ರುದ್ರೇಶ, ಷಣ್ಮುಖಪ್ಪ, ಸಂತೋಷ್, ಗಿರೀಶ್, ಆನಂದ್, ಬೊಮ್ಮನಕಟ್ಟೆ ಮಂಜು ಸೇರಿ ಅನೇಕ ಗಣ್ಯರು ಉಪಸ್ಥಿತರಿದ್ದರು.