ಕುಷ್ಟಗಿ ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದ ಸಮೀಪದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಪ್ರಜ್ಞಾವಂತ ಪ್ರಗತಿಪರ ಪ್ರಜಾಪ್ರಭುಗಳ ಹೋರಾಟ ವೇದಿಕೆ ವತಿಯಿಂದ ನಡೆಯುತ್ತಿರುವ ಕುಷ್ಟಗಿಯನ್ನು ಬರಪೀಡಿತ ತಾಲೂಕು ಎಂದು ಘೋಷಿಸುವಂತೆ ಒತ್ತಾಯಿಸಿ ಮೌನ ಪ್ರತಿಭಟನೆ ಹಾಗೂ ಉಪವಾಸ ಸತ್ಯಾಗ್ರಹದ ಸ್ಥಳಕ್ಕೆ ಸಂಸದ ರಾಜಶೇಖರ ಹಿಟ್ನಾಳ ಭೇಟಿ ನೀಡಿದರು.

ಕುಷ್ಟಗಿ: ಬರಗಾಲ ಕುರಿತು ಕೇಂದ್ರ ತಂಡದ ಸಮೀಕ್ಷೆ ಹಾಗೂ ಕುಷ್ಟಗಿ ತಾಲೂಕಿನಲ್ಲಿನ ವಾಸ್ತವ ಪರಿಸ್ಥಿತಿಯ ನಡುವೆ ವ್ಯತ್ಯಾಸವಿದೆ. ಕುಷ್ಟಗಿಯಲ್ಲಿ ಬರ ಪರಿಸ್ಥಿತಿ ಉಂಟಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿರುವ ವಿಚಾರ ರಾಜ್ಯ ಸರ್ಕಾರದ ಗಮನಕ್ಕೆ ಬಂದಿದೆ. ಇನ್ನೂ 52 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸುವ ಪ್ರಕ್ರಿಯೆ ನಡೆಯುತ್ತಿದ್ದು, ಇದರಲ್ಲಿ ಕುಷ್ಟಗಿ ತಾಲೂಕು ಕೂಡ ಸೇರ್ಪಡೆಯಾಗುವ ಭರವಸೆ ಇದೆ ಎಂದು ಸಂಸದ ರಾಜಶೇಖರ ಹಿಟ್ನಾಳ ಹೇಳಿದರು.

ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದ ಸಮೀಪದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಪ್ರಜ್ಞಾವಂತ ಪ್ರಗತಿಪರ ಪ್ರಜಾಪ್ರಭುಗಳ ಹೋರಾಟ ವೇದಿಕೆ ವತಿಯಿಂದ ನಡೆಯುತ್ತಿರುವ ಕುಷ್ಟಗಿಯನ್ನು ಬರಪೀಡಿತ ತಾಲೂಕು ಎಂದು ಘೋಷಿಸುವಂತೆ ಒತ್ತಾಯಿಸಿ ಮೌನ ಪ್ರತಿಭಟನೆ ಹಾಗೂ ಉಪವಾಸ ಸತ್ಯಾಗ್ರಹದ ಸ್ಥಳಕ್ಕೆ ಭೇಟಿ ನೀಡಿ ಅವರು ಮಾತನಾಡಿದರು.

ಕುಷ್ಟಗಿಯನ್ನು ಬರಪೀಡಿತ ತಾಲೂಕು ಎಂದು ಘೋಷಿಸುವಂತೆ ಈಗಾಗಲೇ ಒತ್ತಾಯಿಸಲಾಗಿದ್ದು, ಈ ಕುರಿತು ಕಂದಾಯ ಸಚಿವರು ಹಾಗೂ ಮುಖ್ಯಮಂತ್ರಿ ಗಮನಕ್ಕೂ ತರಲಾಗಿದೆ. ತಾಲೂಕಿನಲ್ಲಿ ಮಳೆ ಕೊರತೆಯಿಂದ ರೈತರು ಎದುರಿಸುತ್ತಿರುವ ಸಂಕಷ್ಟದ ಬಗ್ಗೆಯೂ ಸರ್ಕಾರಕ್ಕೆ ಮಾಹಿತಿ ನೀಡಲಾಗಿದೆ ಎಂದು ಹಿಟ್ನಾಳ ತಿಳಿಸಿದರು.

ಉಪವಾಸನಿರತ ಹೋರಾಟಗಾರನಿಗೆ ಅಸ್ವಸ್ಥತೆ: ಮೌನ ಪ್ರತಿಭಟನೆ, ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದ ಹೋರಾಟ ವೇದಿಕೆ ಮುಖಂಡ ಬಸವರಾಜ ಗಾಣಿಗೇರ ಅವರ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಕೆಲಕಾಲ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು.

ತಹಸೀಲ್ದಾರ್ ಅಶೋಕ ಶಿಗ್ಗಾಂವಿ ಹಾಗೂ ಸಿಪಿಐ ವಿಶ್ವನಾಥ ಹಿರೇಗೌಡರ್ ಅವರು ಗಾಣಿಗೇರ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಪಡೆಯುವಂತೆ ಮನವಿ ಮಾಡಿದರು. ತಕ್ಷಣ ಸಾರ್ವಜನಿಕ ಆಸ್ಪತ್ರೆಗೆ ಅವರನ್ನು ದಾಖಲಿಸಲಾಯಿತು. ಬಳಿಕ ಆರೋಗ್ಯ ಚೇತರಿಕೆ ಕಂಡಬಂತು. ಮಧ್ಯಾಹ್ನದ ವೇಳೆಗೆ ತಹಸೀಲ್ದಾರ್ ಅಶೋಕ ಶಿಗ್ಗಾಂವಿ ಹಾಗೂ ಸಿಪಿಐ ವಿಶ್ವನಾಥ ಹಿರೇಗೌಡರ್ ಎಳನೀರು ಕುಡಿಸಿ ಬಸವರಾಜ ಗಾಣಿಗೇರ ಅವರ ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿದರು. ಆರೋಗ್ಯದ ಕಾರಣದಿಂದ ಉಪವಾಸ ಅಂತ್ಯಗೊಳಿಸಿದರೂ, ಬರ ಘೋಷಣೆಯ ಬೇಡಿಕೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಹೋರಾಟಗಾರರು ಸ್ಪಷ್ಟಪಡಿಸಿದರು.

ಬೇಡಿಕೆ ಈಡೇರುವ ವರೆಗೆ ಹೋರಾಟ: ಗ್ರಾಮೀಣ ಪ್ರದೇಶಗಳಲ್ಲಿನ ವಾಸ್ತವ ಪರಿಸ್ಥಿತಿ ಪರಿಗಣಿಸಿ ಬರ ಘೋಷಣೆ ಮಾಡಬೇಕು. ರೈತರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸಿ ಅಗತ್ಯ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು. ಬರ ಘೋಷಣೆ ಕುರಿತು ಸರ್ಕಾರದಿಂದ ಸ್ಪಷ್ಟ ನಿರ್ಧಾರ ಹೊರಬರುವ ವರೆಗೆ ನಿರಂತರ ಧರಣಿ ಮುಂದುವರಿಸಲಾಗುವುದು ಎಂದು ಹೋರಾಟಗಾರರು ತಿಳಿಸಿದರು.

ಪ್ರಮುಖರಾದ ಕಿರಣಜ್ಯೋತಿ, ಮಲ್ಲಿಕಾರ್ಜುನ ದೋಟಿಹಾಳ, ರಮೇಶ ಮೇಲಿನಮನಿ, ವಸಂತ ಮೇಲಿನಮನಿ, ದೇವೆಂದ್ರಪ್ಪ ಬಳೂಟಗಿ, ಕೇದಾರನಾಥ ತುರಕಾಣಿ, ಬಸವರಾಜ ತಿಮ್ಮಾಪುರ, ರಾಘವೇಂದ್ರ, ಸಂಗಮ್ಮ ಗುಳಗೌಡ್ರ, ಅಕ್ಕಮ್ಮ ಮರೇಗೌಡರ್ ಇದ್ದರು.