ಸಾರಾಂಶ
ಕನಕಗಿರಿ: ಶ್ರೀರಾಮ ಜನ್ಮಭೂಮಿಯಲ್ಲಿ ರಾಮನ ಮೂರ್ತಿ ಪ್ರತಿಷ್ಠಾಪನೆ ಭಾಗವಾಗಿ ಭಾರತದಲ್ಲಿ ಅಷ್ಟೇ ಅಲ್ಲ, ಅಮೇರಿಕಾದಲ್ಲಿಯೂ ಶ್ರೀರಾಮನ ಘೋಷಣೆ ಮೊಳಗುತ್ತಿವೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.
ಅವರು ಪಟ್ಟಣದ ಇಲ್ಲಿನ ಬಸ್ ನಿಲ್ದಾಣದಲ್ಲಿ ಹಮ್ಮಿಕೊಂಡಿದ್ದ ವಿಕಸಿತ ಭಾರತ ಸಂಕಲ್ಪ ಯಾತ್ರೆಯಲ್ಲಿ ಮಂಗಳವಾರ ಮಾತನಾಡಿದರು.ಐದುನೂರು ವರ್ಷಗಳ ಹೋರಾಟ ಸಫಲ ತಂದಿದ್ದು, ದೇಶ ಸೇರಿದಂತೆ ನೆರೆಯ ದೇಶದಲ್ಲಿನ ದೇಶವಾಸಿಗಳು ಶ್ರೀರಾಮನ ಘೋಷಣೆ ಮೊಳಗುತ್ತಿವೆ. ಜ. ೨೨ರಂದು ರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ನಡೆಯಲಿದ್ದು, ಅಂದು ಒಂದು ಲಕ್ಷ ಕೋಟಿ ವ್ಯವಹಾರ ನಡೆಯಲಿದೆ ಎಂದು ಭಾರತದ ವ್ಯಾಪಾರ ಒಕ್ಕೂಟ ಘೋಷಿಸಿದೆ ಎಂದರು.
ಯಾವುದೇ ಸರ್ಕಾರಗಳು ಬದುಕು ಕಟ್ಟಿಕೊಡುವುದಿಲ್ಲ. ಬದಲಾಗಿ ನಾವೇ ದುಡಿದು ಬದುಕು ಕಟ್ಟಿಕೊಳ್ಳುವ ಮೂಲಕ ಸ್ವಾವಲಂಬಿಗಳಾಗಬೇಕು. ಕೇಂದ್ರ ಸರ್ಕಾರ ಅಂಚೆ, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಶಿಕ್ಷಣ, ಕೃಷಿ ಇಲಾಖೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ವಿವಿಧ ಯೋಜನೆ ಘೋಷಿಸಿದ್ದು, ಕೇಂದ್ರದ ಯೋಜನೆಗಳ ಬಗ್ಗೆ ತಿಳಿದುಕೊಂಡು ಅವುಗಳ ಸದ್ಬಳಕೆಗೆ ಮುಂದಾಗಬೇಕೆಂದು ತಿಳಿಸಿದರು.ಇನ್ನೂ ಯಲಬುರ್ಗಾ,ಕುಷ್ಟಗಿ ತಾಲೂಕುಗಳಲ್ಲಿ ಮೇಲ್ಸುತುವೆ ನಿರ್ಮಾಣ, ಕನಕಗಿರಿ-ಕಾರಟಗಿ ಪಟ್ಟಣಗಳಿಗೆ ನಿರಂತರ ನೀರು ಸರಬರಾಜು ಯೋಜನೆಗೆ ಕೇಂದ್ರ ಸರ್ಕಾರದ ಕಾಮಗಾರಿಯ ಅರ್ಧದಷ್ಟು ಅನುದಾನ ನೀಡಿದೆ. ಸಿಂಧನೂರು-ಮಸ್ಕಿ ಕ್ಷೇತ್ರದ ಬೈಪಾಸ್ ರಸ್ತೆ ಅಭಿವೃದ್ಧಿಗೆ ₹೪೦೪ ಕೋಟಿ ಅನುದಾನ ನೀಡಲಾಗಿದೆ. ಜ. ೨೮ರೊಳಗಾಗಿ ಸಿಂಧನೂರಿಗೆ ರೈಲು ಬಿಡಲಾಗುವುದು. ತಳಕಲ್-ವಾಡಿ ರೈಲು ಮಾರ್ಗ ಈಗಾಗಲೇ ಯಲಬುರ್ಗಾ ಪಟ್ಟಣದವರೆಗೆ ಸಾಗಿದೆ.ನನ್ನ ಅವಧಿಯಲ್ಲಿ ಆಗಿರುವ ಅಭಿವೃದ್ಧಿ ಕಾಮಗಾರಿಗಳ ಪಟ್ಟಿ ಕೊಡಲು ಸಿದ್ಧನಿದ್ದು, ಬೇಕಾದರೆ ಓದಿ ತಿಳಿದುಕೊಳ್ಳಲಿ. ಸಚಿವರಾದವರು ಜವಾಬ್ದಾರಿ ಅರಿತು ಮಾತನಾಡಬೇಕು.ಅಭಿವೃದ್ಧಿಯಾಗಿಲ್ಲ ಎನ್ನುವ ಸಂಶಯವಿದ್ದರೆ ಸ್ಥಳಕ್ಕೆ ಹೋಗಿ ನೋಡಿಕೊಂಡು ಬರಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ವಿರುದ್ಧ ಸಂಸದ ಸಂಗಣ್ಣ ಆಕ್ರೋಶ ವ್ಯಕ್ತಪಡಿಸಿದರು.
ಪಪಂ ಮುಖ್ಯಾಧಿಕಾರಿ ದತ್ತಾತ್ರೇಯ ಹೆಗಡೆ, ಸದಸ್ಯರಾದ ಸುರೇಶ ಗುಗ್ಗಳಶೆಟ್ರ, ಹನುಮಂತ ಬಸರಿಗಿಡ, ಸಮುದಾಯ ಆರೋಗ್ಯ ಕೇಂದ್ರದ ವೈದ್ಯೆ ಬೀನಾದೇವಿ, ಅಂಗನವಾಡಿ ಮೇಲ್ವಿಚಾರಕಿ ಶಾಹೀದಾಬೇಗಂ, ಅಂಚೆ ಕಚೇರಿಯ ಸುಭಾಷ, ಎಸ್‌ಬಿಐ ವ್ಯವಸ್ಥಾಪಕ ಶಿವರಾಜ ಪೂಜಾರ, ದಿಶಾ ಸಮಿತಿ ಸದಸ್ಯ ಹನುಮೇಶ ಯಲಬುರ್ಗಿ, ಮಹಾಂತೇಶ ಸಜ್ಜನ, ವಾಗೀಶ ಹಿರೇಮಠ, ರಂಗಪ್ಪ ಕೊರಗಟಗಿ ಇತರರು ಇದ್ದರು.೪೦೦ಕ್ಕೂ ಹೆಚ್ಚು ಸ್ಥಾನಗಳು ಬಿಜೆಪಿ ಪಡೆಯಲಿದೆ ಎಂದು ಹಲವು ಸಂಸ್ಥೆಗಳು ಸಮೀಕ್ಷೆಯಿಂದ ಬಯಲಾಗಿದೆ. ಮತ್ತೊಮ್ಮೆ ಕೇಂದ್ರದಲ್ಲಿ ಮೋದಿ ನೇತೃತ್ವದಲ್ಲಿ ಸತತ ೩ನೇ ಬಾರಿಗೆ ಬಿಜೆಪಿ ಗೆಲುವು ಸಾಧಿಸಿ, ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಟಿಕೆಟ್ ಯಾರಿಗೆ ನೀಡಿದರೂ ಪಕ್ಷಕ್ಕಾಗಿ ದುಡಿಯುತ್ತೇನೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.