ಸಾರಾಂಶ
ಕನ್ನಡಪ್ರಭ ವಾರ್ತೆ ನುಗ್ಗೇಹಳ್ಳಿ
ನುಗ್ಗೇಹಳ್ಳಿ ಏತ ನೀರಾವರಿ ಯೋಜನೆ ಮೂಲಕ ಹೋಬಳಿಯ ವಿರೂಪಾಕ್ಷಪುರ ಕೆರೆ ಸಂಪೂರ್ಣ ತುಂಬಿ ಕೋಡಿ ಬಿದ್ದ ಹಿನ್ನೆಲೆಯಲ್ಲಿ ಸಂಸದ ಶ್ರೇಯಸ್ ಪಟೇಲ್ ಗಂಗೆಪೂಜೆ ನೆರವೇರಿಸಿ ಬಾಗಿನ ಅರ್ಪಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು, ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಎ. ಗೋಪಾಲಸ್ವಾಮಿಯವರು ಸುಮಾರು 10 ಲಕ್ಷಕ್ಕೂ ಹೆಚ್ಚು ಹಣವನ್ನು ಖರ್ಚು ಮಾಡಿ ಪೈಪ್‌ಲೈನ್ ನೀರೆತ್ತುವ ಮೋಟಾರ್ ಅಳವಡಿಸಿ ನುಗ್ಗೇಹಳ್ಳಿ ಏತ ನೀರಾವರಿ ಯೋಜನೆ ಮೂಲಕ ಕೆರೆ ತುಂಬಿಸಿದ್ದಾರೆ ಅವರ ಕೆಲಸ ಶ್ಲಾಘನೀಯವಾದದ್ದು ಎಂದರು.
ಗ್ರಾಮಸ್ಥರ ಹಲವು ವರ್ಷಗಳ ಒತ್ತಾಯದಂತೆ ಗ್ರಾಮಕ್ಕೆ ಸುಮಾರು 10 ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ನಿರ್ಮಾಣ ಮಾಡಲು ತಮ್ಮ ಸಂಸದರ ನಿಧಿಯಿಂದ ಅನುದಾನ ನೀಡಿದ್ದೇನೆ. ಮುಂಬರುವ ದಿನಗಳಲ್ಲೂ ಗ್ರಾಮದ ಅಭಿವೃದ್ಧಿಗೆ ಹೆಚ್ಚಿನ ಸಹಕಾರ ಕೊಡುವುದಾಗಿ ಭರವಸೆ ನೀಡಿದರು.ವಿಧಾನಪರಿಷತ್ ಮಾಜಿ ಸದಸ್ಯ ಎಂಎ ಗೋಪಾಲಸ್ವಾಮಿ ಮಾತನಾಡಿ, ತಾವು ಈ ಹಿಂದೆ ಜಿಲ್ಲಾ ಪಂಚಾಯತಿ ಹಾಗೂ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಗ್ರಾಮಸ್ಥರಿಗೆ ಕೊಟ್ಟ ಮಾತಿನಂತೆ ನುಗ್ಗೇಹಳ್ಳಿ ಏತ ನೀರಾವರಿ ಯೋಜನೆ ವ್ಯಾಪ್ತಿಗೆ ಗ್ರಾಮದ ಕೆರೆಯನ್ನು ಸೇರಿಸಿ ನನ್ನ ಸ್ವಂತ ಖರ್ಚಿನಲ್ಲಿ ಪೈಪ್‌ಲೈನ್ ಮೋಟಾರ್ ಅಳವಡಿಸಿ ಈ ವರ್ಷ ಕೆರೆ ತುಂಬಿಸಿದ್ದೇನೆ, ಇದೊಂದು ಶಾಶ್ವತವಾದ ಯೋಜನೆ, ಇದರಿಂದ ಗ್ರಾಮಸ್ಥರಿಗೆ ನೀರಿನ ಬವಣೆ ತಪ್ಪಲಿದೆ. ನಾನು ವಿಧಾನಪರಿಷತ್ ಸದಸ್ಯರಾಗಿದ್ದ ಸಂದರ್ಭದಲ್ಲಿ ಕೂಡ ಗ್ರಾಮದ ವಿವಿಧ ಅಭಿವೃದ್ಧಿ ಕೆಲಸಗಳಿಗೆ ಹೆಚ್ಚಿನ ಸಹಕಾರ ನೀಡಿರುವುದಾಗಿ ಹೇಳಿದರು. ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ವಿ.ಎನ್. ಧನಂಜಯ್ ಮಾತನಾಡಿ, ಎಂ.ಎ. ಗೋಪಾಲಸ್ವಾಮಿ ಅವರ ಸಹಕಾರದಿಂದ ಈ ಯೋಜನೆ ಪೂರ್ಣಗೊಂಡು ಕೆರೆ ತುಂಬಿದೆ. ಗ್ರಾಮದ ದಿವಂಗತ ಗ್ರಾಮ ಪಂಚಾಯಿತಿ ಸದಸ್ಯ ಕಾಂತರಾಜು ಸೇರಿದಂತೆ ಹಲವರು ಹೆಚ್ಚಿನ ಸಹಕಾರ ನೀಡಿದರು ಎಂದು ತಿಳಿಸಿದರು. ಗಂಗೆಪೂಜೆ ಹಾಗೂ ಬಾಗಿನ ಅರ್ಪಣೆ ಪೂಜಾ ಕಾರ್ಯವು ಪುರವರ್ಗ ಹಿರೇಮಠದ ಡಾ. ಮಹೇಶ್ವರ ಶಿವಾಚಾರ್ಯ ಸ್ವಾಮೀಜಿಯವರ ನೇತೃತ್ವದಲ್ಲಿ ನೆರವೇರಿತು. ಗ್ರಾಮಸ್ಥರಿಂದ ಅದ್ಧೂರಿ ಸ್ವಾಗತ : ಬಾಗಿನ ಅರ್ಪಣೆ ಕಾರ್ಯಕ್ರಮಕ್ಕೆ ಆಗಮಿಸಿದ ಸಂಸದ ಶ್ರೇಯಸ್ ಪಟೇಲ್ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯ ಎಂ.ಎ. ಗೋಪಾಲಸ್ವಾಮಿ ಅವರನ್ನು ಗ್ರಾಮಸ್ಥರು ಅದ್ಧೂರಿಯಾಗಿ ಬರಮಾಡಿಕೊಂಡರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಂ.ಎ. ರಂಗಸ್ವಾಮಿ, ಜೆ.ಕೆ. ಮಂಜುನಾಥ್, ಎನ್. ಎಸ್. ಪ್ರಕಾಶ್, ಬಾಣನಕೆರೆ ಅಶೋಕ್, ಗೌಡಕಿ ಮಂಜು, ರಮ್ಯಾ ಲೋಕೇಶ್, ಗ್ಯಾಸ್ ರಾಜು, ವಿ. ಎನ್ ಧನಂಜಯ, ಮುಖಂಡರುಗಳಾದ ಆನಂದ್, ರವಿ, ದೊರೆ ಯಾದವ್, ಎಲ್ಐಸಿ ಸುಬ್ಬೆಗೌಡ, ವಿ ಎಸ್ ರಾಜಕುಮಾರ್, ಯಲ್ಲಯ್ಯ, ಕುಮಾರಣ್ಣ, ರೈತ ಸಂಘದ ಮುಖಂಡ ಸೋಮಶೇಖರಯ್ಯ, ತಿರುಮಲೇಗೌಡ, ಕುಮಾರ್, ಗೋಪಾಲ್, ವಿ.ಟಿ. ಕೇಶವ, ಲೋಕೇಶ್, ನಂಜುಂಡಪ್ಪ, ಮಂಜೇಗೌಡ, ಯೋಗೇಶ್, ಪ್ರಭಾ, ಅರ್ಚಕ ದಿನೇಶ್ ಹಾಜರಿದ್ದರು.