ಸಾರಾಂಶ
ಗೃಹ ಸಚಿವರ ನಡೆ ವಿರುದ್ಧ ಆಕ್ರೋಶ । ಶಾ ಕ್ಷಮೆ ಪಡೆಯುವಂತೆ ಪ್ರಧಾನಿಗೆ ಒತ್ತಾಯ
ಕನ್ನಡಪ್ರಭ ವಾರ್ತೆ ಹಾಸನಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಬಗ್ಗೆ ತುಚ್ಛವಾಗಿ ಮಾತನಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕೂಡಲೇ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಎಂದು ಸಂಸದ ಶ್ರೇಯಸ್ ಎಂ. ಪಟೇಲ್ ಒತ್ತಾಯಿಸಿದರು.
ನಗರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿ, ಅವರ ದರ್ಪ, ದೌರ್ಜನ್ಯ ಎಲ್ಲವೂ ಜನರಿಗೆ ಗೊತ್ತಿದ್ದು, ಸಂವಿಧಾನ ಶಿಲ್ಪಿ ಪರವಾಗಿ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿಗೆ ಸಂಸತ್ ಪ್ರವೇಶಕ್ಕೆ ತಡೆ ಮಾಡಿದ್ದಾರೆ. ಇದನ್ನು ಎಲ್ಲರೂ ಖಂಡಿಸುತ್ತೇವೆ. ಪ್ರಧಾನಿಗಳು ಕೂಡಲೇ ಅಮಿತ್ ಶಾ ಅವರ ರಾಜೀನಾಮೆ ಪಡೆಯಬೇಕು. ಈ ಬಗ್ಗೆ ಒಂದು ಕ್ಷಮೆ ಕೇಳದೆ ಇರುವುದು ವಿಷಾದನೀಯ ಸಂಗತಿ. ಅಮಿತ್ ಶಾ ಅವರ ರಾಜೀನಾಮೆ ಪಡೆಯದಿದ್ದರೆ ಕಾಂಗ್ರೆಸ್ ಪಕ್ಷದಿಂದ ದೇಶದಾದ್ಯಂತ ಹೋರಾಟ ನಡೆಸುವ ನಿಟ್ಟಿನಲ್ಲಿ ಹಿರಿಯ ಮುಖಂಡರೆಲ್ಲ ತೀರ್ಮಾನ ಕೈಗೊಂಡಿದ್ದು, ಅಮಿತ್ ಶಾ ಅವರ ರಾಜೀನಾಮೆ ಪಡೆಯಲು ಕೇಂದ್ರದ ನಾಯಕರು ಗಡುವು ನೀಡಿದ್ದು, ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳದೆ ಇದ್ದರೆ ಕಾಂಗ್ರೆಸ್ ಪಕ್ಷದಿಂದ ಹೋರಾಟವನ್ನು ನಡೆಸಲಾಗುವುದು ಎಂದರು.ಗೌಡರ ಕುಟುಂಬದ ಅಭಿವೃದ್ಧಿ ಕುರಿತು ಶ್ವೇತಪತ್ರ ಹೊರಡಿಸಲಿ:
ಕಳೆದ ಒಂದು ದಿನಗಳ ಹಿಂದೆ ಎಚ್.ಡಿ.ಕುಮಾರಸ್ವಾಮಿಯವರು ಮಾತನಾಡುವಾಗ ರಾಜ್ಯ ಸರ್ಕಾರದ ವಿರುದ್ಧ ಇಲ್ಲ ಸಲ್ಲದ ಆರೋಪವನ್ನು ಮಾಡಿದ್ದಾರೆ. ಶೂನ್ಯ ಅಭಿವೃದ್ಧಿ ಎಂದು ಹೇಳಿರುವ ಅವರು ಆರು ತಿಂಗಳು ಏನು ಸಾಧನೆ ಮಾಡಿದ್ದಾರೆ ಎಂದು ತಿಳಿಸಲಿ. ಅವರ ಸಾಧನೆಯನ್ನು ಶ್ವೇತಪತ್ರದಲ್ಲಿ ಬಿಡುಗಡೆ ಮಾಡಲಿ. ನಾವು ಸಹ ಪುಟ್ಟಸ್ವಾಮಿಗೌಡ, ಶ್ರೀಕಂಠಯ್ಯ ಹಾಗೂ ನನ್ನ ಅವಧಿಯಲ್ಲಿ ಮಾಡಿರುವ ಅಭಿವೃದ್ಧಿ ಕುರಿತು ಶ್ವೇತಪತ್ರ ಬಿಡುಗಡೆ ಮಾಡುತ್ತೇವೆ. ಹಾಗೆಯೇ ದೇವೇಗೌಡರ ಕುಟುಂಬವು ಕೂಡ ಶ್ವೇತ ಪತ್ರ ಹೊರಡಿಸಲಿ ಎಂದು ಸವಾಲು ಹಾಕಿದರು.ರಾಜ್ಯ ಸರ್ಕಾರದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಇಲ್ಲಸಲ್ಲದ ಹೇಳಿಕೆ ಹಾಗೂ ಪದಬಳಕೆ ಮಾಡಿರುವುದು ಸರಿಯಲ್ಲ. ಸಿಡಿ ವಿಚಾರವನ್ನು ಮರು ಪ್ರಸ್ತಾಪ ಮಾಡಿದರೆ ಇಲ್ಲ ಸಲ್ಲದ ವಿಚಾರಗಳು ಹೇಳಬೇಕಾಗುತ್ತದೆ. ಆದ್ದರಿಂದ ಆ ಬಗ್ಗೆ ನಾನು ಏನನ್ನೂ ಮಾತನಾಡುವುದಿಲ್ಲ ಎಂದು ಹೇಳಿದರು.
ಬಿಜೆಪಿ ಮುಖಂಡ ಸಿ.ಟಿ. ರವಿ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ಕುರಿತು ಪ್ರತಿಕ್ರಯಿಸಿ, ಅವರಿಗೂ ಕೂಡ ತಾಯಿ, ಮಡದಿ ಇದ್ದಾರೆ. ಸದನದಲ್ಲಿ ಆ ರೀತಿ ಪದ ಬಳಕೆ ಮಾಡುವುದು ಸರಿಯಲ್ಲ. ಅವರು ಮಾತನಾಡಿರುವ ಪದದ ಬಗ್ಗೆ ಅವರ ಪಕ್ಷದವರಲ್ಲೆ ವಿರೋಧ ಇದೆ. ಈಗಾಗಲೇ ಈ ಪ್ರಕರಣವನ್ನು ಸಿಐಡಿಗೆಗೆ ವಹಿಸಿದ್ದು, ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದ ಎಂದು ಆಗ್ರಹಿಸಿದರು.ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಕೇಂದ್ರ ಸರ್ಕಾರದ ಕರಾರಿನಂತೆ ಆಲೂರು ತಾಲೂಕಿನ ಚೌಲಗೆರೆಯಲ್ಲಿ ಟೋಲ್ ಸಂಗ್ರಹ ಕೇಂದ್ರ ಸ್ಥಾಪನೆಯಾಗಿದೆ. ಹಾಸನದಿಂದ ಮಾರನಹಳ್ಳಿ ವರೆಗೆ ನಾಲ್ಕು ಪಥದ ಹೆದ್ದಾರಿ ಕಾಮಗಾರಿ ಪೂರ್ಣಗೊಳ್ಳದೆ ಇದ್ದರೆ ನನ್ನ ನೇತೃತ್ವದಲ್ಲಿಯೇ ಪ್ರತಿಭಟನೆ ನಡೆಸುವುದಾಗಿ ಸಂಸದರು ಎಚ್ಚರಿಸಿದರು.
ಟೋಲ್ ಸಂಗ್ರಹ ಮಾಡುವಂತೆ ಕೇಂದ್ರ ಸರ್ಕಾರ ನಿರ್ದೇಶನ ನೀಡಿದೆ. ಇತ್ತೀಚೆಗೆ ಜಿಲ್ಲಾಧಿಕಾರಿಗಳು ಟೋಲ್ ಸಂಗ್ರಹ ಮಾಡದಂತೆ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಅವರಿಗೆ ಕೇಂದ್ರ ಸರ್ಕಾರದಿಂದಲೆ ನೋಟಿಸ್ ಜಾರಿ ಮಾಡಿದ್ದು, ಟೋಲ್ ಸಂಗ್ರಹ ಕೇಂದ್ರ ಪ್ರಾರಂಭಿಸುವುದು ಅನಿವಾರ್ಯವಾಗಿದೆ ಎಂದು ಹೇಳಿದರು. ೨೦ ಕಿ.ಮಿ. ಅಂತರದಲ್ಲಿ ಸ್ಥಳೀಯರು ಆಧಾರ್ ಕಾರ್ಡ್ ತೋರಿಸಿ ಉಚಿತವಾಗಿ ಸಂಚರಿಸಬಹುದು ಎಂದರು.ಕಾಂಗ್ರೆಸ್ ಜಿಲ್ಲಾಧ್ಯಕ್ಷ ಈ.ಎಚ್.ಲಕ್ಷ್ಮಣ್, ಪ್ರಚಾರ ಸಮಿತಿ ಅಧ್ಯಕ್ಷ ದೇವರಾಜೇಗೌಡ, ತಾರಾಚಂದನ್, ಪ್ರಸನ್ನಕುಮಾರ್, ಹುಡಾ ಮಾಜಿ ಅಧ್ಯಕ್ಷ ಕೃಷ್ಣಕುಮಾರ್, ಆರೀಫ್, ಇತರರು ಇದ್ದರು.